*ಸಾದ್ವಿನಿ ಕೊಪ್ಪ ಸಂಗೀತದಲ್ಲಿ, ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ "ಜಲಪಾತ"ದಿಂದ ಹರಿದು ಬಂತು ಸುಂದರ ಪರಿಸರ ಗೀತೆ* .
ಟಿ.ಸಿ.ರವೀಂದ್ರ ತುಂಬರಮನೆ ನಿರ್ಮಾಣದ, ರಮೇಶ್ ಬೇಗಾರ್ ನಿರ್ದೇಶನದ " ಜಲಪಾತ" ಚಿತ್ರಕ್ಕಾಗಿ ರಮೇಶ್ ಬೇಗಾರ್ ಅವರೆ ಬರೆದಿರುವ "ಎದೆಯ ದನಿಯ ಹಾಡು ಕೇಳು" ಎಂಬ ಪರಿಸರದ ಕುರಿತಾದ ಹಾಡು ಇತ್ತೀಚೆಗೆ A2 music ಮೂಲಕ ಬಿಡುಗಡೆಯಾಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾದ್ವಿನಿ ಕೊಪ್ಪ ಸಂಗೀತ ನೀಡಿದ್ದಾರೆ. ಗಾಯಕಿಯಾಗಿ ಜನಪ್ರಿಯರಾಗಿರುವ ಸಾದ್ವಿನಿ, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿಯಾಗಿದ್ದಾರೆ. ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು.
"ಜಲಪಾತ" ನನ್ನ ಎರಡನೇ ನಿರ್ದೇಶನದ ಚಿತ್ರ. ಪರಿಸರದ ಕುರಿತು ಜಗೃತಿ ಮೂಡಿಸುವ ಹಾಡುಗಳು ಸಾಕಷ್ಟು ಬಂದಿದೆ. ಆದರೆ ಈ ಹಾಡು ಸ್ವಲ್ಪ ವಿಭಿನ್ನ. ಮೊದಲ ನುಡಿಯಲ್ಲಿ ಪರಿಸರ ನಮಗೆ ಏನೆಲ್ಲಾ ನೀಡಿದೆ ಎಂದು ಇದೆ. ಎರಡನೇ ನುಡಿಯಲ್ಲಿ ನಮ್ಮಿಂದ ಪರಿಸರ ಏನಾಗುತ್ತಿದೆ ಎಂದಿದೆ. ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಈ ಹಾಡನ್ನು ಕೇಳುವುದೆ ಸೊಗಸು. ಅಷ್ಟೇ ಚೆನ್ನಾಗಿ ಸಾದ್ವಿನಿ ಸಂಗೀತ ನೀಡಿದ್ದಾರೆ. ರಜನೀಶ್,
ನಾಗಶ್ರೀ ಬೇಗಾರ್ ಈ ಚಿತ್ರದ ನಾಯಕ, ನಾಯಕಿ. ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ .ಮಲೆನಾಡ ರಂಗಭೂಮಿ ಪ್ರತಿಭೆಗಳು ಹೆಚ್ಚಾಗಿ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವುದಾಗಿ ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದರು.
ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ನನ್ನ ಗುರುಗಳು ಎಂದು ಮಾತು ಪ್ರಾರಂಭಿಸಿದ ನಿರ್ಮಾಪಕ ರವೀಂದ್ರ ತುಂಬರಮನೆ, ಪರಿಸರದ ಬಗ್ಗೆ ಅರಿವು ಮೂಡಿಸುವ ಚಿತ್ರ ನಿರ್ಮಿಸಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಮಲೆನಾಡ ಸೊಗಡಿನ ಈ ಚಿತ್ರ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು.
ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಕೆಲವು ಬಿಟ್ಸ್ ಗಳಿದೆ. ಈ ಹಾಡಿನ ಸಾಹಿತ್ಯ ನೋಡಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ಧ್ವನಿ ಸೂಕ್ತವೆನಿಸಿತು. ತಮ್ಮ ಕಾರ್ಯದೊತ್ತಡದ ನಡುವೆಯೂ ಈ ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದ ಎಂದರು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ.
ಚಿತ್ರದ ನಾಯಕ ರಜನೀಶ್ ಹಾಗೂ ನಾಯಕಿ ನಾಗಶ್ರೀ ಬೇಗಾರ್ "ಜಲಪಾತ" ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು.