Crazy Keerthy.Film News

Saturday, September 02, 2023

119

 

*"ಕ್ರೇಜಿ ಕೀರ್ತಿ" ಚಿತ್ರದ ಟ್ರೇಲರ್ ಬಿಡುಗಡೆ* :

 *ಯುವಕರಿಗೊಂದು ಸ್ಪೆಷಲ್ ಸಿನಿಮಾ*

 

ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಸಿನಿಮಾಗಳು‌ ಬಂದಿವೆ. ಆ ಸಾಲಿಗೆ ಈಗ ’ಕ್ರೇಜಿ ಕೀರ್ತಿ’ ಎಂಬ ಸಿನಿಮಾ‌ ಕೂಡ ಸೇರಿದೆ. ಚಿತ್ರರಂಗದಲ್ಲಿ ಹೊಸ ಕ್ರೇಜ್ ಹುಟ್ಟು ಹಾಕುವ ಉತ್ಸುಕದಲ್ಲಿದೆ.

 

ಪ್ರಿಯ ಬಾಲಾಜಿ ಪ್ರೊಡಕ್ಷನ್ಸ್ ಮೂಲಕ ತಯಾರಾಗಿರುವ ಈ ಚಿತ್ರಕ್ಕೆ ಬಾಲಾಜಿ ಮಾಧವ ಶೆಟ್ಟಿ ನಿರ್ದೇಶಕರು. ಚಿತ್ರದ ನಿರ್ಮಾಪಕರು ಕೂಡ ಅವರೆ.   ಟ್ರೇಲರ್ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದಿದೆ. ಇನ್ನು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರತಂಡ, ಮಾಧ್ಯಮ ಮುಂದೆ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿತು.

 

ನಿರ್ದೇಶಕ, ನಿರ್ಮಾಪಕರಾಗಿರುವ ಬಾಲಾಜಿ ಮಾಧವ ಶೆಟ್ಟಿ ಮಾತನಾಡಿ, ಇದು ಮೊದಲ ಸಿನಿಮಾ. ಸಾಕಷ್ಟು ಶ್ರಮ ವಹಿಸಿ ಸಿನಿಮಾ‌ ಮಾಡಿದ್ದೇವೆ. ಇದೊಂದು ಯುವಜನತೆಯ ಮೇಲೆ ಮಾಡಿರುವ ಸಿನಿಮಾ. ಕಾಲೇಜಿನ ವಿದ್ಯಾರ್ಥಿಗಳ ಲೈಫ್ ಸ್ಟೈಲ್ ಕುರಿತ ಕಥೆ ಇದೆ. ಒಂದೊಳ್ಳೆಯ ರೊಮ್ಯಾಂಟಿಕ್ ಕಥಾಹಂದರ ಸಿನಿಮಾದಲ್ಲಿದೆ. ಮನಸ್ಸಿಗೆ ಇಷ್ಟವಾಗುವಂತಹ ಹಾಡುಗಳು ಸಿನಿಮಾದ ಪ್ಲಸ್. ಇನ್ನು, ಈ ಸಿನಿಮಾ ಇಷ್ಟೊಂದು‌ ಚೆನ್ನಾಗಿ ಮೂಡಿ ಬರಲು ಕಾರಣ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್. ಅವರಿಗೆ ಇಲ್ಲೊಂದು ವಿಶೇಷ ಎನಿಸುವ ಪಾತ್ರವಿದೆ. ಪಾತ್ರದ ಜೊತೆಗೆ ಸಿನಿಮಾ ಹೇಗೆ ಬರಬೇಕು, ಹೇಗಿರಬೇಕು ಎಂಬ ವಿಷಯಗಳ ಬಗ್ಗೆ ತಿಳಿಹೇಳುವ ಮೂಲಕ ಓಂ ಪ್ರಕಾಶ್ ರಾವ್ ಸಿನಿಮಾ ಅಚ್ಚುಕಟ್ಟಾಗಿ ಮೂಡಿ ಬರಲು ಕಾರಣರಾಗಿದ್ದಾರೆ.

ಈ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಎಂದರು.

ಈ ಸಿನಿಮಾದಲ್ಲಿ ನನಗೆ ಕೆಲಸ ಮಾಡಲು ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ. ಮೊದಲು ಒಂದು ಪಾತ್ರವಿದೆ. ಅದನ್ನು ನೀವೆ ಮಾಡಬೇಕು ಅಂತ ಹೇಳಿದಾಗ, ಕಥೆ ಕೇಳಿದೆ. ಚೆನ್ನಾಗಿತ್ತು. ಒಪ್ಪಿಕೊಂಡೆ. ಇನ್ನು, ಕೊರೊನಾ ಸಮಯದಲ್ಲಿ ನನಗೆ ಈ ಸಿನಿಮಾದಲ್ಲಿ ಕೆಲಸ‌ ಮಾಡುವ ಅವಕಾಶ ಕೊಟ್ಟಿದ್ದು ವಿಶೇಷ. ಆ ಕಾರಣಕ್ಕೆ ನಾನು ಸಿನಿಮಾದ ತೆರೆಯ ಮೇಲೂ ಮತ್ತು ಹಿಂದೆಯೂ ಇದ್ದು, ಒಂದೊಳ್ಳೆಯ ಸಿನಿಮಾ ಆಗಲು ಅವರ ಜೊತೆ ಕೈ ಜೋಡಿಸಿದ್ದೇನೆ ಎಂದು ಓಂಪ್ರಕಾಶ್ ರಾವ್ ತಿಳಿಸಿದರು.

 

ಹೀರೋ ಅಭಿಲಾಶ್ ಅವರಿಗೆ ಒಳ್ಳೆಯ ಭವಿಷ್ಯವಿದೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ‌ ಮಾಡಿದ್ದಾರೆ. ಸಿನಿಮಾ ಯಶಸ್ಸು ಕಾಣಲಿ ಎಂದುವ ಓಂ ಪ್ರಕಾಶ್ ರಾವ್ ಹಾರೈಸಿದರು.

 

ನಾಯಕ ಅಭಿಲಾಶ್ ಮಾತನಾಡಿ, ಇಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ. ಇದು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ, ಎಲ್ಲಾ ವರ್ಗದವರು ನೋಡಬಹುದಾದ ಸಿನಿಮಾ. ಮನರಂಜನೆಗೆ ಇಲ್ಲಿ ಸಾಕಷ್ಟು ಜಾಗವಿದೆ. ಕ್ರೇಜಿ ಹುಡುಗಿ ಏನೆಲ್ಲಾ ಮಾಡುತ್ತಾಳೆ ಎಂಬುದನ್ನು‌ ಸಿನಿಮಾದಲ್ಲೇ ನೋಡಬೇಕು ಎಂದರು‌.

 

ನಾಯಕಿ ಸಾರಿಕ ರಾವ್ ಅವರಿಗೆ ಇಲ್ಲಿ‌ ಲವಲವಿಕೆಯ ಪಾತ್ರ ಇದೆಯಂತೆ. ಕೀರ್ತಿ ಎಂಬುದು ಅವರ ಪಾತ್ರದ ಹೆಸರು. ಅವರೇ ಹೇಳುವಂತೆ, ಸಿನಿಮಾದಲ್ಲಿ‌ ಸಾಕಷ್ಟು ಅನುಭವ ಆಗಿದೆ. ಓಂ ಪ್ರಕಾಶ್ ರಾವ್ ಅವರಿಂದ ಸಾಕಷ್ಟು ತಿಳಿದುಕೊಳ್ಳಲು ಸಾಧ್ಯವಾಗಿದೆ. ಅವರಿಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ‌ ಮಾಡಿದ್ದಾರೆ. ಹೊಸತನ ಕಥೆ ಇಲ್ಲಿದೆ. ಹೊಸ ಜಾನರ್ ಸಿನಿಮಾಗೆ ನಿಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದರು.

 

ಸಂಗೀತ ನಿರ್ದೇಶನ ಮಾಡಿರುವ ಲಯ ಕೋಕಿಲ ಅವರು, ಇಲ್ಲಿ ಎರಡು ಹಾಡು ಹಾಗು ಹಿನ್ನೆಲೆ ಸಂಗೀತ ನೀಡಿದ ಬಗ್ಗೆ ಮಾತಾಡಿದರು.

 

ಮತ್ತೊಬ್ಬ ನಾಯಕಿ ರಿಶಾ ಗೌಡ ಅವರಿಗೆ ಇದು‌ ಮೊದಲ ಸಿನಿಮಾ. ಅವರ ಪಾತ್ರದ ಬಗ್ಗೆ ಹೆಚ್ಚೇನೂ ಹೇಳದ ಅವರು, ಆ ಪಾತ್ರ ಸಿನಿಮಾದ ಹೈಲೆಟ್. ಅದನ್ನು‌ ಸಿನಿಮಾದಲ್ಲೇ ನೋಡಬೇಕು ಎಂದರು ರಿಶಾ ಗೌಡ.

 

ಸಂದೀಪ್ ಮಾಧವ ಶೆಟ್ಟಿ ಇತರರು ಇದ್ದರು. ಚಿತ್ರದಲ್ಲಿ ರಂಗಾಯಣ ರಘು, ಪದ್ಮಜಾ ರಾವ್, ಪ್ರಕಾಶ್ ಶೆಣೈ, ಆಶಾ ಸುಜಯ್ ಇತರರು ಇದ್ದಾರೆ. ಮನೋಹರ ಅವರ ಛಾಯಾಗ್ರಹಣವಿದೆ. ಲಕ್ಷ್ಮಿನಾರಾಯಣ ರೆಡ್ಡಿ ಸಂಕಲನ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,