*ಹಲವು ಗಣ್ಯರ ಉಪಸ್ಥಿತಿಯಲ್ಲಿ ಅನಾವರಣವಾಯಿತು ಡಾ||ಅಮರನಾಥ ರೆಡ್ಡಿ ವಿ ನಿರ್ಮಿಸಿ, ನಟಿಸಿರುವ "ಆದರ್ಶ ರೈತ" ಚಿತ್ರದ ಟ್ರೇಲರ್*
*ಇದು ರೈತನಿಂದ ರೈತರಿಗಾಗಿ ನಿರ್ಮಾಣವಾಗಿರುವ ಚಿತ್ರ*
ರೈತನ ಕುರಿತು ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ರೈತ ಏನು ಮಾಡಬೇಕು? ಏನು ಮಾಡಬಾರದು? ಎಂದು ಹೇಳುವ ಕಥಾಹಂದರ ಹೊಂದಿರುವ "ಆದರ್ಶ ರೈತ" ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ, ಹಾಡುಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ನಡೆಯಿತು. ನಟಿ ಪ್ರಿಯಾ ಹಾಸನ್, ವೇಗಸ್ ಆಸ್ಪತ್ರೆ ಮುಖ್ಯಸ್ಥರಾದ ನಾರಾಯಣ ಸ್ವಾಮಿ , ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ, ಆರ್ ವಿ ಚೌಡಪ್ಪ(ACP) ಹಾಗೂ ನಿರ್ಮಾಪಕ ಆಂತರ್ಯ ಸತೀಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ನನ್ನ ಕುಟುಂಬವೇ ಕೃಷಿಕರ ಕುಟುಂಬ. ನನ್ನ ತಂದೆ ರೈತ. ನನಗೂ ಚಿಕ್ಕಂದಿನಿಂದಲೂ ವ್ಯವಸಾಯ ಮಾಡಿ ಅಭ್ಯಾಸವಿದೆ. ವ್ಯವಸಾಯ ವೃತ್ತಿಯಿಂದಲೇ ನನ್ನ ತಂದೆ ನಮ್ಮನೆಲ್ಲಾ ವಿದ್ಯಾವಂತರನಾಗಿ ಮಾಡಿದ್ದಾರೆ. ನನಗೆ ಮೊದಲಿನಿಂದಲೂ ರೈತರ ಕುರಿತು ಸಿನಿಮಾ ಮಾಡುವ ಆಸೆ. ನಿರ್ದೇಶಕ ರಾಜೇಂದ್ರ ಕೊಣಿದೆಲ ಅವರು ಹೇಳಿದ ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಜೊತೆಗೆ ಪ್ರಮುಖ ಪಾತ್ರವನ್ನು ಕೂಡ ಮಾಡಿದ್ದೇನೆ. ಸದ್ಯದಲ್ಲೇ ನಮ್ಮ ಚಿತ್ರ ಬಿಡುಗಡೆಯಾಗಲಿದೆ ನೋಡಿ ಪ್ರೋತ್ಸಾಹಿಸಿ ಎಂದರು ನಿರ್ಮಾಪಕ ಹಾಗೂ ನಟ ಡಾ||ಅಮರನಾಥ ರೆಡ್ಡಿ ವಿ.
ತೆಲುಗು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ , ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ನನಗೆ ಇದು ಮೊದಲ ಚಿತ್ರ ಎಂದು ಮಾತು ಆರಂಭಿಸಿದ ನಿರ್ದೇಶಕ ರಾಜೇಂದ್ರ ಕೊಣದೆಲ, ರೈತನ ಕುರಿತು ಸಾಕಷ್ಟು ಚಿತ್ರಗಳು ಬಂದಿದೆ. ಆದರೆ ನಮ್ಮ ಚಿತ್ರದಲ್ಲಿ ರೈತ ಹೆಚ್ಚಿನ ಬಡ್ಡಿಗೆ ಸಾಲ ಮಾಡಬಾರದು. ಸರ್ಕಾರ ಬ್ಯಾಂಕ್ ನಿಂದ ನೀಡುವ ಸಾಲವನ್ನೇ ಪಡೆಯಬೇಕು. ಸರ್ಕಾರದ ಸವಲತ್ತುಗಳನ್ನು ಬಳಸಿಕೊಳ್ಳಬೇಕು ಹೀಗೆ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡಿದ್ದೇವೆ. ಒಬ್ಬ ರೈತ ಇಂತಹ ಅನೇಕ ವಿಷಯಗಳನ್ನು ತಿಳಿದು ವ್ಯವಸಾಯ ಮಾಡಿದಾಗ "ಆದರ್ಶ ರೈತ" ಆಗುತ್ತಾನೆ ಎಂಬುದೆ ಚಿತ್ರದ ಕಥಾಹಂದರ ಎನ್ನುತ್ತಾರೆ.
ಕಲಾವಿದರಾದ ರೇಖಾ ದಾಸ್, ಸಿದ್ಧಾರ್ಥ್, ಮೈಸೂರು ಸುಜಾತ, ಸೂಫಿಯಾ, ಖುಷಿ ಮೆಹ್ತಾ, ಸಂಗೀತ, ಎಂ.ವಿ.ಸುರೇಶ್ ಹಾಗೂ ಚಿತ್ರಕ್ಕೆ ಸಂಗೀತ ನೀಡಿರುವ ಮುರಳಿಧರ್ ನಾವಡ, ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಮುಂತಾದವರು "ಆದರ್ಶ ರೈತ" ಚಿತ್ರದ ಕುರಿತು ಮಾತನಾಡಿದರು.