Achar & Co.Film Trailer.

Thursday, July 13, 2023

156

 

*ಟ್ರೇಲರ್ ನಲ್ಲೇ ವಿಶ್ವಾಸ ಮೂಡಿಸಿದೆ "ಆಚಾರ್ & ಕೋ"* .

 

 *ಪಿ.ಆರ್.ಕೆ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರ ಜುಲೈ 28 ರಂದು ತೆರೆಗೆ*

 

ಹೊಸಬರ ಹೊಸಪ್ರಯತ್ನಕ್ಕೆ ಪ್ರತಿಷ್ಠಿತ ಪಿ.ಆರ್.ಕೆ ಪ್ರೊಡಕ್ಷನ್ಸ್ ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಸ್ತುತ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ " "ಆಚಾರ್ & ಕೋ" ಚಿತ್ರವನ್ನು ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಟ್ರೇಲರ್ ಸಾಕಷ್ಟು ವಿಶ್ವಾಸ ಮೂಡಿಸಿದೆ. ಚಿತ್ರ ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ.

 

ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಇದು ಅರವತ್ತರ ಕಾಲಘಟ್ಟದಲ್ಲಿ ನಡೆಯುವ ಕಥೆ ಎಂದು ಮಾತು‌ ಪ್ರಾರಂಭಿಸಿದ ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ, ಬೆಂಗಳೂರಿನ ಜಯನಗರ ನಿವಾಸಿ ಮಧುಸೂದನ್ ಆಚಾರ್ - ಸಾವಿತ್ರಿ ಆಚಾರ್ ಹಾಗೂ ಅವರ ಹತ್ತು ಜನ ಮಕ್ಕಳ ಸುತ್ತ ನಡೆಯುವ ಕಥೆ. ಒಟ್ಟಿನಲ್ಲಿ ಇದೊಂದು ಕೂಡು ಕುಟುಂಬದ ಕಥೆ ಎನ್ನಬಹುದು. ಮಧುಸೂದನ್ ಆಚಾರ್ ಪಾತ್ರದಲ್ಲಿ ಹಿರಿಯ ನಟ ಅಶೋಕ್, ಸಾವಿತ್ರಿ ಆಚಾರ್ ಪಾತ್ರದಲ್ಲಿ ಸುಧಾ ಬೆಳವಾಡಿ ಅಭಿನಯಿಸಿದ್ದಾರೆ. ಹೆಚ್ಚು ಜನ ಕಲಾವಿದರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಬಹುತೇಕರು ರಂಗಭೂಮಿ ಹಿನ್ನೆಲೆಯುಳ್ಳವರು. ನಾನು ಕೂಡ ಇದರಲ್ಲಿ ಅಭಿನಯಿಸಿದ್ದೇನೆ.  ಅರವತ್ತರ ದಶಕದಲ್ಲಿ ನಡೆಯುವ ಕಥೆಯಾಗಿರುವುದರಿಂದ ಚಿತ್ರದಲ್ಲಿ ಸ್ವಲ್ಪ ಕೂಡ ಅಧುನಿಕತೆ ಕಾಣಬಾರದು ಹಾಗಾಗಿ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದ ಬಗ್ಗೆ ಪುನೀತ್ ರಾಜಕುಮಾರ್ ಅವರ ಬಳಿ ಮಾತನಾಡಿದ್ದೆ.‌ ಇಂದು ಅವರಿದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಯಾವುದೇ ಕೊರತೆ ಬರದಂತೆ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ. ನಮ್ಮ ಚಿತ್ರದ ಬಹುತೇಕ ತಂತ್ರಜ್ಞರು ಮಹಿಳೆಯರೆ ಆಗಿರುವುದು ವಿಶೇಷ. ಜುಲೈ 28 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಪ್ರೋತ್ಸಾಹ ನೀಡಿ ಎಂದರು.

 

ನಾನು ಸಿನಿಮಾ ನೋಡಿದ್ದೇನೆ. ಚೆನ್ನಾಗಿದೆ. ಸಿಂಧು ಶ್ರೀನಿವಾಸಮೂರ್ತಿ ಮತ್ತು ತಂಡಕ್ಕೆ ಶುಭವಾಗಲಿ ಎಂದು ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಸಿದರು.

 

ಹಿರಿಯ ನಟ ಅಶೋಕ್, ಸುಧಾ ಬೆಳವಾಡಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು, ಛಾಯಾಗ್ರಹಕ ಅಭಿಮನ್ಯು ಸದಾನಂದನ್ ಮುಂತಾದವರು "ಆಚಾರ್ & ಕೋ" ಚಿತ್ರದ ಕುರಿತು ಮಾತಡಿದರು.

 

ಬಿಂದು‌ಮಾಲಿನಿ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಆಶಿಕ್ ಕುಸುಗೊಳ್ಳಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಿಂಧು ಶ್ರೀನಿವಾಸಮೂರ್ತಿ ಹಾಗೂ ಕಣ್ಣನ್ ಗಿಲ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ತ್ರಿಲೋಕ್ ತ್ರಿವಿಕ್ರಮ ಬರೆದಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,