ಅಕ್ಟೋಬರ್ ೮ರಿಂದ ಬಿಗ್ಬಾಸ್
ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ ಬಿಗ್‌ಬಾಸ್ ೧೦ನೇ ಆವೃತ್ತಿ ಎಂದಿನಂತೆ ಇದೇ ಅಕ್ಟೋಬರ್ ೮ರಿಂದ ಚಾಲನೆ ಸಿಗಲಿದೆ. ಪ್ರತಿ ವರ್ಷದಂತೆ ಈ ಸಲವೂ ಸುದೀಪ್ ನಿರೂಪಣೆಯ ಜವಬ್ದಾರಿಯನ್ನು ಹೊತ್ತುಕೊಳ್ಳುತ್ತಿದ್ದಾರೆ. ಕಲರ‍್ಸ್ ಕನ್ನಡ ವಾಹಿನಿ ನೂತನ ಮುಖ್ಯಸ್ಥ ಪ್ರಶಾಂತ್‌ನಾಯಕ್ ಹೇಳುವಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿನ ೧೬-೧೮ ಸ್ಪರ್ಧಿಗಳು ಮನೆಯೊಳಗೆ ಹೋಗುತ್ತಾರೆ. ಪ್ರಸ್ತುತ ಅನೇಕ ಹೊಸತುಗಳು ಇರಲಿದ್ದು, ಶೋ ಪ್ರಾರಂಭಗೊಂಡಾಗ ಎಲ್ಲವು ತಿಳಿಯುತ್ತದೆ. ಸ್ಪರ್ಧಿಗಳ ಆಯ್ಕೆಗೆ ಅದರದ್ದೇ ಆದ ಮಾನದಂಡಗಳಿವೆ. ಮನೆ ಎಂದಾಗ ಎಲ್ಲಾ ರೀತಿಯ ಪಾತ್ರಗಳು ಅವಶ್ಯಕತೆ ಇರುತ್ತದೆ. ಟಿವಿ ಅಲ್ಲದೆ ಜಿಯೋ ಸಿನಿಮಾದಲ್ಲಿ ೨೪ ಗಂಟೆಗಳ ಕಾಲ ಬಿಗ್‌ಬಾಸ್ ಲೈವ್‌ನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.
೬ನೇ ಸೀಸನ್ ಮುಗಿದ ಬಳಿಕ ಇನ್ನು ಮಾಡುವುದು ಬೇಡ ಅನಿಸಿತ್ತು. ಆದರೆ ವಾಹಿನಿಯವರು ಬಿಡದೆ ನನ್ನನ್ನು ಒಪ್ಪಿಸಿದ್ದರಿಂದಲೇ ೧೦ನೇ ಸೀಸನ್‌ವರೆಗೂ ಬಂದಿದೆ. ಇದು ಜನ ಮಾತಾಡುವಂತೆ ಚಿತ್ರಕಥೆ ಬರೆದಿರುವ ಶೋ ಅಂತೂ ಖಂಡಿತ ಅಲ್ಲ. ನಾನು ವಾರಾಂತ್ಯದಲ್ಲಿ ನೀಡುವ ತೀರ್ಪುಗಳು ಅಲ್ಲಿಯೇ ತೆಗೆದುಕೊಳ್ಳುವ ತೀರ್ಮಾನಗಳು ಆಗಿರುತ್ತದೆ. ಅದನ್ನು ಸ್ಕ್ರಿಪ್ಟ್ ಮಾಡಲು ಸಾಧ್ಯವಿಲ್ಲ. ವೇದಿಕೆಗೂ ಬರುವವರೆಗೂ ಸ್ಪರ್ಧಿಗಳು ಯಾರಂತ ತಿಳಿದಿರುವುದಿಲ್ಲ. ಹಾಗೆಯೇ ಎಲಿಮಿನೇಷನ್ ವೇಳೆಯೂ ಹಾಗೇ. ಅಕಸ್ಮಾತ್ ಬಾಯಿತಪ್ಪಿ ಅವರ ಹೆಸರು ಹೇಳಿಬಿಟ್ಟರೆ ಪ್ರಮಾದವಾಗುತ್ತದೆಯೆಂದು ಅವರುಗಳ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಅದಕ್ಕೋಸ್ಕರ ಮಾಧ್ಯಮದವರು ಕೇಳುವ ಯಾವ ಹೆಸರುಗಳು ಪೂರ್ತಿ ಸತ್ಯ ಅಥವಾ ಸುಳ್ಳು ಆಗಿರುವುದಿಲ್ಲವೆಂದು ಸುದೀಪ್ ಹೇಳಿಕೊಳ್ಳುತ್ತಾರೆ.