Kachori.Film News

Saturday, October 07, 2023

408

 

'ಕಚೋರಿ’ ಸ್ವಲ್ಪಸಿಹಿ, ಸ್ವಲ್ಪಖಾರ

         ಇರೋ ಪ್ರೇಮಕಥೆ

 

     ಕಚೋರಿ ಎಲ್ಲರೂ ಇಷ್ಟಪಡುವಂಥ ರುಚಿಕರವಾದ ಖಾದ್ಯ. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣವಾಗಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಸಿನಿವೇ ಸಿನಿ ಕ್ರಿಯೇಶನ್ಸ್ ಮೂಲಕ ಈ ಚಿತ್ರವನ್ನು ಆರ್ಯನ್ ಅವರು ನಿರ್ಮಾಣ ಮಾಡುವುದರ ಜೊತೆಗೆ ಆಕ್ಷನ್‌ ಕಟ್ ಕೂಡ ಹೇಳಿದ್ದಾರೆ. ಆರ್ಯನ್ ಈ ಚಿತ್ರದ ನಾಯಕನೂ ಆಗಿದ್ದು, ಇಳಾ ವಿಟ್ಲ ನಾಯಕಿ‌ ಪಾತ್ರ ನಿರ್ವಹಿಸಿದ್ದಾರೆ. ಹಿರಿಯ ನಟ ಕೀರ್ತಿರಾಜ್ ಒಬ್ಬ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃಪಾಕರ್ ಅವರ ಸಂಗೀತ ನಿರ್ದೇಶನ ಇರುವ ಈ ಚಿತ್ರದ ಪ್ರಥಮ ಪತ್ರಿಕಾಗೋಷ್ಟಿ ಇತ್ತೀಚೆಗೆ ನಡೆಯಿತು.

     ಈ ಸಂದರ್ಭದಲ್ಲಿ ಮಾತನಾಡಿದ ನಾಯಕ, ನಿರ್ದೇಶಕ ಆರ್ಯನ್, ನಾನು ಸಿನಿವೇ ಸಿನಿ ಆಕ್ಟಿಂಗ್ ಕ್ಲಾಸಸ್ ನಡೆಸುತ್ತಿದ್ದು, ಆರಂಭದಲ್ಲಿ ಒಂದು ಮಕ್ಕಳ ಚಿತ್ರ ಮಾಡಬೇಕೆಂದುಕೊಂಡಿದ್ದೆ. ನಂತರ ಕೋವಿಡ್ ಸಮಯದಲ್ಲಿ ಚಿತ್ರವನ್ನು ಆರಂಭಿಸಿದೆವು. ಸ್ನೇಹಿತರಾದ ರಮೇಶ್, ಮಂಜುನಾಥ್, ಖಾಜಾಹುಲಿ ಇವರೆಲ್ಲ ನನಗೆ ತುಂಬಾ ಸಪೋರ್ಟ್ ಮಾಡಿದರು. ಚಿತ್ರದಲ್ಲಿ ನಾಯಕ ಕಚೋರಿ ಮಾರುವ ಹುಡುಗ, ಆತ ಶ್ರೀಮಂತ ಹುಡುಗಿಯನ್ನು ಲವ್ ಮಾಡುತ್ತಾನೆ. ನಂತರ ಬ್ರೇಕಪ್ ಆಗುತ್ತೆ, ಏಕೆ ಬ್ರೇಕಪ್ ಆಯ್ತು, ಅದಕ್ಕೆ ಕಾರಣ ಏನು ? ಎಂದು ಹುಡುಕುವುದೇ ಚಿತ್ರದ ಎಳೆ. ಗಂಗಾವತಿ ಸುತ್ತಮುತ್ತ ಟಾಕೀ ಪೋರ್ಷನ್ ಮುಗಿಸಿ,  ವಿಜಯ ಪ್ರಕಾಶ್ ಹಾಡಿದ ಡ್ಯುಯೆಟ್ ಸಾಂಗನ್ನು ಮನಾಲಿಯಲ್ಲಿ ಶೂಟ್ ಮಾಡಿದ್ದೇವೆ. ಕೆಂಪೇಗೌಡ, ಮೋಹನ್ ಜುನೇಜಾ ಕಾಮಿಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಫ್ಯಾಮಿಲಿ ಕೂತು ನೋಡುವಂಥ ಚಿತ್ರ ಇದಾಗಿದ್ದು, ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ ಎಂದರು.

  ಹಿರಿಯ ನಟ ಕೀರ್ತಿರಾಜ್ ಮಾತನಾಡಿ ಚಿತ್ರದಲ್ಲಿ ನಾನೊಬ್ಬ ಡಾನ್ ಆಗಿ ನಟಿಸಿದ್ದು, ಜೀವನದಲ್ಲಿ ನೊಂದ ನಾಯಕ, ನನ್ನ ಆಶ್ರಯಕ್ಕೆ ಬಂದು ಅಲ್ಲಿ ಹೇಗೆ ಬೆಳೆಯುತ್ತಾನೆಂಬುದೇ ಕಥೆ, ಆರ್ಯನ್, ಇಳಾ ವಿಟ್ಲ ಇಬ್ಬರೂ ನನ್ನನ್ನು ತಂದೆ ಥರ ನೋಡಿಕೊಂಡರು. ಆರ್ಯನ್ ಮೊದಲ ಚಿತ್ರವಾದರೂ ಹತ್ತಾರು ಸಿನಿಮಾ ಮಾಡಿದವರಂತೆ ಕೆಲಸ ತೋರಿಸಿದ್ದಾರೆ. ತಮ್ಮ ಸಂಸ್ಥೆಯ ಮೂಲಕ ಸಾವಿರಾರು ಜನರಿಗೆ ತರಬೇತಿ ನೀಡುತ್ತಿದ್ದಾರೆ ಎಂದು ಹೇಳಿದರು.

 ಸಂಗೀತ ನಿರ್ದೇಶಕ ಕೃಪಾಕರ್ ಮಾತನಾಡಿ ಈ ಸಿನಿಮಾ ಕಚೋರಿಯಷ್ಟೇ ಚೆನ್ನಾಗಿದೆ. ಮೊದಲು ಹೊಸಬರನ್ನು ನಾಯಕರನ್ನಾಗಿ ಮಾಡಬೇಕೆಂದುಕೊಂಡಿದ್ದರು, ಕಾರಣಾಂತರಗಳಿಂದ ಅವರೇ ನಟಿಸಬೇಕಾಯ್ತು. ಚಿತ್ರದಲ್ಲಿ ೨ ಡ್ಯುಯೆಡ್, ಐಟಂ, ಟೀಸಿಂಗ್, ಫೀಲಿಂಗ್ ಸೇರಿ ೫ ವೆರೈಟಿ ಹಾಡುಗಳಿವೆ. ಹೊಸ ಪ್ರತಿಭೆ ಪ್ರತಾಪ್‌ರೆಡ್ಡಿ ಅವರಿಂದ ಹಾಡೊಂದನ್ನು ಬರೆಸಿದ್ದೇನೆ ಎಂದರು. ನಾಯಕಿ ಇಳಾವಿಟ್ಲಾ ಮಾತನಾಡಿ ನಾಯಕಿಯಾಗಿ ಇದು ನನ್ನ ೩ನೇ ಚಿತ್ರ. ಕಾಲೇಜ್ ಯುವತಿ ನಂತರ ರಾಜಕಾರಣಿಯಾಗಿ ೨ ಶೇಡ್ ಇರುವ ಪಾತ್ರ ಮಾಡಿದ್ದೇನೆ. ಯಾಕೆ ಅವಳು ಈಥರ ಮಾಡ್ತಾಳೆ ಅನ್ನೋದನ್ನು ಕಂಡುಹಿಡಿಯುವುದೇ ಚಿತ್ರದ ಎಳೆ ಎಂದರು.

 ಕೆಂಪೇಗೌಡ ಮಾತನಾಡಿ ಚಿತ್ರದುದ್ದಕ್ಕೂ ಆರ್ಯನ್ ಜೊತೆ ಇರುವ, ಆತನ ಲವ್‌ಗೆ ಸಪೋರ್ಟ್ ಮಾಡುವ ಗೆಳೆಯನ ಪಾತ್ರ ಮಾಡಿದ್ದೇನೆ ಎಂದರು. ಸಾಹಿತಿ ಪ್ರತಾಪ್‌ರೆಡ್ಡಿ ಮಾತನಾಡಿ ನಾನು ಆಕ್ಟಿಂಗ್ ಕಲಿಯಲು ಇವರಬಳಿ ಹೋಗಿದ್ದೆ. ಬರವಣಿಗೆ ನನ್ನ ಹವ್ಯಾಸ. ಮೊದಲು ಒಂದು ಹಾಡು ಬರೆಸಿದರು. ಅದು ಅವರಿಗೆ ಇಷ್ಟವಾಗಿ ಎಲ್ಲಾ ಹಾಡುಗಳನ್ನು ನನ್ನಕೈಲೇ ಬರೆಸಿದರು ಎಂದರು. ಆರ್ಯನ್ ಸ್ನೇಹಿತ ಗಂಗಾವತಿಯ ಖಾಜಾಹುಲಿ ಮಾತನಾಡಿ ನಾನೊಬ್ಬ ಸ್ಟೇಜ್ ಆರ್ಟಿಸ್ಟ್, ಒಂದು ಪಾತ್ರ ಮಾಡುವ ಜೊತೆಗೆ ಹಾಡನ್ನೂ ಹಾಡಿದ್ದೇನೆ ಎಂದರೆ, ವಿಲನ್ ಪಾತ್ರ ಮಾಡಿರುವ ಮಂಜುನಾಥ್, ಕಾಮಿಡಿ ಪಾತ್ರಧಾರಿ ದೊಡ್ಡ ಬಸವರಾಜ್ ಇವರೆಲ್ಲ ಚಿತ್ರದ ಕುರಿತು ಅಭಿಪ್ರಾಯ ಹಂಚಿಕೊಂಡರು. ವಿಶೇಷವಾಗಿ ನಟ ಧರ್ಮ ಕೀರ್ತಿರಾಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ,

Copyright@2018 Chitralahari | All Rights Reserved. Photo Journalist K.S. Mokshendra,