ಘೋಸ್ಟ್ದಲ್ಲಿ ಶಿವಣ್ಣ ಮೂರು ಶೇಡ್ಸ್
‘ಘೋಸ್ಟ್’ ಚಿತ್ರವು ಗುರುವಾರದಂದು ಬಿಡುಗಡೆಯಾಗಲಿದೆ. ಇದರ ಅಂಗವಾಗಿ ಕೊನೆ ಹಂತ ಎನ್ನುವಂತೆ ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿ ಒಂದಷ್ಟು ವಿಷಯಗಳನ್ನು ಹೇಳಿಕೊಂಡಿತು. ನಿರ್ಮಾಪಕ ಸಂದೇಶ್ ಹೇಳುವಂತೆ ಇಲ್ಲಿಯತನಕ ೩೭೫ ಕೇಂದ್ರಗಳು ಫೈನಲ್ ಆಗಿದ್ದು, ಇನ್ನು ಮೂರು ದಿನದೊಳಗೆ ಹೆಚ್ಚಾಗುವ ಸಾಧ್ಯತೆ ಇದೆ. ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದ್ದು, ಒಂದು ವಾರದ ನಂತರ ತೆಲುಗುದಲ್ಲಿ ರಿಲೀಸ್ ಆಗಲಿದೆ. ನಮ್ಮ ಸಂಸ್ಥೆಯಿಂದ ಶಿವಣ್ಣ ಮಾಡಿರುವ ಮೂರನೇ ಚಿತ್ರ. ಅಂದುಕೊಂಡ ಹಾಗೆ ವರ್ಷದೊಳಗೆ ಬರುತ್ತಿದ್ದೇವೆ. ಇಷ್ಟು ವ್ಯವಸ್ಥಿತವಾಗಿ ಮೂಡಿಬರಲು ನಿರ್ದೇಶಕರ ಶ್ರಮ ಕಾರಣವಾಗಿದೆ. ಅಮೇರಿಕಾ, ಯುಕೆ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸಿಂಗಪೂರ್, ಯುರೋಪ್ ಸೇರಿದಂತೆ ಹಲವಾರು ಸಾಗರದಾಚೆಯ ದೇಶಗಳಲ್ಲಿ ಚಿತ್ರವನ್ನು ನೋಡಬಹುದು. ಹಿಂದಿನ ರಾತ್ರಿ ೧೨ಕ್ಕೆ ಅಭಿಮಾನಿಗಳಿಗಂತಲೇ ವಿಶೇಷ ಪ್ರದರ್ಶನ ಇರಲಿದೆ ಎಂದರು.
ಇದರಲ್ಲಿ ನನಗೆ ಮೂರು ಶೇಡ್ಸ್ ಇರುತ್ತದೆ. ಪಾರ್ಟ್ ೨,೩, ಹೀಗೆ ಎಷ್ಟು ಬೇಕಾದರೂ ಬೆಳಸಬಹುದು. ಅನುಪಮ್‌ಖೇರ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದು ಖುಷಿ ನೀಡಿದೆ. ಮುಂಬೈಗೆ ಹೋದಾಗ ಒಳ್ಳೆ ಪ್ರತಿಕ್ರಿಯೆ ಸಿಕ್ಕಿತು. ಘೋಸ್ಟ್ ಯಾರು ಅನ್ನೋದೇ ಕುತೂಹಲ ಅಂತ ಶಿವಣ್ಣ ಪಾತ್ರದ ಪರಿಚಯ ಮಾಡಿಕೊಂಡರು.
೪೮ ಗಂಟೆಗಳಲ್ಲಿ ನಡೆಯುವ ಘಟನೆಗಳನ್ನು ಒಳಗೊಂಡಿದೆ. ಸ್ಕ್ರಿಪ್ಟ್ ಸಿದ್ದಮಾಡಿಕೊಳ್ಳುವಾಗಲೇ ಶಿವಣ್ಣ ಅಂತ ನಿರ್ಧಾರ ಮಾಡಿದ್ದೇವು. ಅವರಿಗೆ ಶಕ್ತಿಧಾಮದಲ್ಲಿ ಒನ್ ಲೈನ್ ಹೇಳಿದಾಗ ಒಪ್ಪಿಕೊಂಡರು. ಶೇಕಡ ೭೦ ಭಾಗ ದೃಶ್ಯಗಳು ಜೈಲಲ್ಲೆ ಸಾಗುತ್ತದೆ. ಅದಕ್ಕಾಗಿ ಮಿನರ್ವ ಮಿಲ್‌ದಲ್ಲಿ ಸೆಟ್ ಹಾಕಲಾಗಿ, ನಮ್ಮದೆ ಕೊನೆಯ ಚಿತ್ರವಾಗಿದೆ. ನಂತರ ಅಲ್ಲಿ ಯಾರಿಗೂ ಅವಕಾಶ ನೀಡಿಲ್ಲ. ಶಿವಣ್ಣ ಪೂರ್ತಿ ಆಸಕ್ತಿವಹಿಸಿಕೊಂಡು ಸಿನಿಮಾ ಮುಗಿಸಿಕೊಟ್ಟರು. ಸಮಾಜದಲ್ಲಿ ಏನೋ ಒಂದು ವ್ಯವಸ್ಥೆ ಏರು ಪೇರಾದರೆ ಏನಾಗಬಹುದು ಎಂಬುದನ್ನು ಹೇಳಲಾಗಿದೆ ಅಂತ ನಿರ್ದೇಶಕ ಶ್ರೀನಿ ಮಾಹಿತಿ ಬಿಚ್ಚಿಟ್ಟರು. ಮಹೇಂದ್ರಸಿಂಹ ಛಾಯಾಗ್ರಹಣ, ಅರ್ಜನ್‌ಜನ್ಯಾ ಸಂಗೀತ ಇರಲಿದೆ.