ಅಭಿಮಾನಿಗಳಿಂದ ಅರ್ದಂಬರ್ದ
ಪ್ರೇಮಕಥೆಯ ಹಾಡು...
ಬಿಗ್‌ಬಾಸ್ ಜೋಡಿ ದಿವ್ಯಾ ಉರಡುಗ ಹಾಗೂ ಬೈಕ್ ರೇಸರ್ ಅರವಿಂದ್ ಕೆಪಿ. ಈಗ ಬೆಳ್ಳಿತೆರೆಯ ಮೇಲೂ ಯುವ ಪ್ರೇಮಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹುಲಿರಾಯ ಖ್ಯಾತಿಯ ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಅರ್ದಂಬರ್ದ ಪ್ರೇಮಕಥೆ. ಮುಂದಿನ ತಿಂಗಳು ರಿಲೀಸ್ ಗೆ ಸಿದ್ದವಾಗಿರುವ ಈ ಚಿತ್ರದ ಹಾಡೊಂದನ್ನು ಅಭಿಮಾನಿಗಳೇ ಬಿಡುಗಡೆ ಮಾಡಿದರು. ನಿರ್ದೇಶಕರೇ ಸಾಹಿತ್ಯ ರಚಿಸಿದ ’ಹುಚ್ಚುಮನಸಿನ ಹುಡುಗಿ’ ಎಂಬ ಹಾಡಲ್ಲಿ ನಾಯಕ, ನಾಯಕಿಯ ಮನದ ಭಾವನೆಗಳನ್ನು ತೆರೆದಿಡಲಾಗಿದೆ. ಮ್ಯಾಜಿಕಲ್ ಕಂಪೋಜರ್ ಅರ್ಜುನ್ ಜನ್ಯ ಈ ಹಾಡಿಗೆ ಮ್ಯೂಸಿಕ್ ಕಂಪೋಜ್ ಮಾಡಿದ್ದು, ವಾಸುಕಿ ವೈಭವ್, ಪೃಥ್ವೀ ಭಟ್ ದನಿಯಾಗಿದ್ದಾರೆ,
ಈಗಾಗಲೇ ಅರ್ದಂಬರ್ದ ಪ್ರೇಮಕಥೆ
ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದಿದ್ದು ಸೆನ್ಸಾರ್ ಪ್ರಕ್ರಿಯೆ ನಡೆಯುತ್ತಿದೆ. ಅರವಿಂದ್ ಕೌಶಿಕ್ ನಿರ್ದೇಶನದ ನಮ್ ಏರಿಯಾಲ್ ಒಂದಿನ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಸಂಗೀತ ಸಂಯೋಜಕರಾಗಿದ್ದ ಅರ್ಜುನ್ ಜನ್ಯ ಮತ್ತೊಮ್ಮೆ ಅರವಿಂದ್ ಜೊತೆ ಸೇರಿ ಚೆಂದದ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಅರವಿಂದ್ ಕೌಶಿಕ್ ನಾನು ಈ ಕಥೆ ಶುರು ಮಾಡಿದಾಗಲೇ ನಾಯಕಿ ಪಾತ್ರಕ್ಕೆ ದಿವ್ಯ ಅವರನ್ನು ಆಯ್ಕೆ ಮಾಡಿದೆ. ಅವರನ್ನು ಒಪ್ಪಿಸಿದ ಮೇಲೆ ಅರವಿಂದ್ ಹೀರೋ ಪಾತ್ರ ಮಾಡಿದರೆ ಹೇಗೆ ಅನಿಸಿತು, ದಿವ್ಯಾ ಮೂಲಕ ಅವರನ್ನು ಕೇಳಿದಾಗ ಉತ್ತರ ಹೇಳಲು 2 ದಿನ ತಗೊಂಡರು. ಅಲ್ಲದೆ ಅರ್ಜುನ್‌ಜನ್ಯ ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲೂ 4 ಅದ್ಭುತವಾದ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಇವತ್ತಿನ ಕಾಲದಲ್ಲಿ ಪ್ರೀತಿ ಎನ್ನುವುದು ಒಂದು ಭಾವನೆ, ನಮ್ಮ ಕನಸುಗಳ ಜೊತೆಗೇ ಬೆಳೆಯುತ್ತೆ, ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದನ್ನು ನಿಭಾಯಿಸಿಕೊಂಡು ಹೋಗೋದು ಕಷ್ಟ. ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಅದು ಬದುಕಬೇಕಾಗಿರುತ್ತೆ, ಇವತ್ತಿನ ಹಾಡು ಚಿತ್ರದ ಕಥೆಯನ್ನೇ ಹೇಳುತ್ತೆ, ಇದರ ನಂತರ ಇವರಿಬ್ಬರು ಲವ್ ಮಾಡ್ತಾರಾ ಇಲ್ವಾ ಅನ್ನೋದೇ ಕುತೂಹಲ, ಚಿತ್ರವೀಗ ಬಿಡುಗಡೆಯ ಹಂತದಲ್ಲಿದ್ದು, ಈಗ ಪ್ರಚಾರ ಶುರು ಮಾಡಿದ್ದೇವೆ, ನವೆಂಬರ್‌ನಲ್ಲಿ ತೆರೆಗೆ ತರೋ ಪ್ಲಾನಿದೆ ಎಂದರು.
ನಾಯಕ ಅರವಿಂದ್ ಮಾತನಾಡಿ ಅಭಿನಯ ನಿಜವಾಗಿಯೂ ಕಷ್ಟದ ಕೆಲಸವೇ. ಒಂದಷ್ಟು ದಿನ ವರ್ಕ್ಷಾಪ್ ಮಾಡಿ ನಂತರ ಬಣ್ಣ ಹಚ್ಚಿದೆ. ಆರಂಭದ 2-3 ದಿನ ಸ್ವಲ್ಪ ಕಷ್ಟವಾಗಿತ್ತು, ನಿರ್ದೇಶಕ ಅರವಿಂದ್ ಹಾಗೂ ದಿವ್ಯಾ ಇಬ್ಬರೂ ನನಗೆ ತುಂಬಾ ಹೇಳಿಕೊಟ್ಟರು. ನಾನೇನೇ ಮಾಡಿದ್ರೂ ಅದಕ್ಕೆ ನಿರ್ದೇಶಕರೇ ಕಾರಣ ಎಂದು ಹೇಳಿದರು,
ನಾಯಕಿ ದಿವ್ಯಾ ಮಾತನಾಡಿ ಈ ಹಾಡನ್ನು ಅಭಿಮಾನಿಗಳಿಗೋಸ್ಕರ ಡೆಡಿಕೇಟ್ ಮಾಡೋಣ ಎಂದು ಅವರಿಂದಲೇ ರಿಲೀಸ್ ಮಾಡಿಸಿದ್ದೇವೆ, ನನ್ನ ಪಾತ್ರದ ಬಗ್ಗೆ ಹೇಳೋದಾದ್ರೆ ಆಕೆ ಸ್ವಲ್ಪ ಮುಂಗೋಪಿಯಾದರೂ, ಮನಸು ಹೂವಿನಂಥದ್ದು, ಜನ ಅವಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲ್ಲ, ಆಕೆಗಿರುವ ರಿಯಲ್ ಲೈಫ್ ಪ್ರಾಬ್ಲಂಗಳಿಂದ ಹಾಗೆ ನಡೆದುಕೊಳ್ತಾಳೆ ಅಷ್ಟೇ ಎಂದು ತನ್ನ ಪಾತ್ರದ ಕುರಿತು ವಿವರಿಸಿದರು.
ಬಕ್ಸಾಸ್ ಮೀಡಿಯಾ, ಆರ್‌ಎಸಿ ವಿಷುವಲ್ಸ್ ಮತ್ತು ಲೈಟ್ಹೌಸ್ ಮೀಡಿಯಾದ ಸಹಕಾರದೊಂದಿಗೆ ಈ ಚಿತ್ರವನ್ನು ನಿರ್ಮಿಸಿದೆ. ಬಕ್ಸಸ್ ಪರವಾಗಿ ದಿವ್ಯಾ ಉತ್ತಪ್ಪ, ಲೈಟ್ ಹೌಸ್ ನ ಸಂತೋಷ್ ಉಪಸ್ಥಿತರಿದ್ದರು. ರ‍್ಯಾಪರ್ ಅಲೋಕ್, ಶ್ರೇಯಾ ಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಿರಿಯನಟ ದ್ವಾರಕೀಶ್ ಪುತ್ರ ಅಭಿಲಾಷ್ ವಿಶೇಷ ಪಾತ್ರದ ಮೂಲಕ 25 ವರ್ಷಗಳ ನಂತರ ನಟನೆಗೆ ಮರಳಿದ್ದಾರೆ. ಸೂರ್ಯ ಅವರ ಛಾಯಾಗ್ರಹಣ, ಶಿವರಾಜ್ ಮೇಹು ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.