Cheetah.Film News

Wednesday, November 01, 2023

170

 

*ಕನ್ನಡ ರಾಜ್ಯೋತ್ಸವದಂದು ಆರಂಭವಾಯಿತು ಪ್ರಜ್ವಲ್ ದೇವರಾಜ್ ಅಭಿನಯದ "ಚೀತಾ" ಚಿತ್ರ* .

 

 *ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಈ ಚಿತ್ರದ ಮೂಲಕ ನಿರ್ದೇಶನದತ್ತ* .

 

ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಪ್ರಥಮ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿರುವ "ಚೀತಾ" ಚಿತ್ರದ ಮುಹೂರ್ತ ಸಮಾರಂಭ ಕನ್ನಡ ರಾಜ್ಯೋತ್ಸವದ ಶುಭದಿನದಂದು ಹೆಚ್ ಎಂ ಟಿ ಶಾಲೆ ಆಟದ ಮೈದಾನದಲ್ಲಿ ನೆರವೇರಿತು. ಪ್ರಜ್ವಲ್ ದೇವರಾಜ್ ಕನ್ನಡ ಭಾವುಟ ಹಾರಿಸುವುದರ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.

 

ಮುಹೂರ್ತ ಸಮಾರಂಭದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ಕಳೆದ 23 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸರ್ ಆಗಿ, ಡ್ಯಾನ್ಸ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಮಾತನಾಡಿದ ನಿರ್ದೇಶಕ ರಾಜ ಕಲೈ ಕುಮಾರ್, ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಪ್ರಜ್ವಲ್ ಅವರ ಮೂವತ್ತೊಂಭತ್ತನೇ ಚಿತ್ರವನ್ನು ನಾನು ನಿರ್ದೇಶಿಸುತ್ತಿದ್ದೇನೆ‌. ಇನ್ನು ಚಿತ್ರದ ಕುರಿತು ಹೇಳುವುದಾದರೆ, ಇದೊಂದು ಮಾರ್ಕೆಟ್ ನಲ್ಲಿ ನಡೆಯುವ ಕಥೆ. ಮಾರ್ಕೆಟ್ ನಲ್ಲಿನ ವ್ಯಾಪಾರ, ವಹಿವಾಟು ಹಾಗೂ ಅಲ್ಲಿ ಕೆಲಸ ಮಾಡುವವರು ಎಲ್ಲಾ ಸೂಪರ್ ಫಾಸ್ಟ್. ನಮ್ಮ ಚಿತ್ರದ ನಾಯಕ ಕೂಡ ಚಿರತೆಯಷ್ಟೇ ವೇಗದವನು. ಹಾಗಾಗಿ ನಮ್ಮ ಚಿತ್ರಕ್ಕೆ "ಚೀತಾ" ಎಂದು ಹೆಸರಿಟ್ಟಿದ್ದೇವೆ. ಕಲಾ ನಿರ್ದೇಶಕ ಶಿವು ಅವರು ಅದ್ದೂರಿ ಮಾರ್ಕೆಟ್ ಸೆಟ್ ನಿರ್ಮಾಣ ಮಾಡುತ್ತಿದ್ದಾರೆ. ಆ ಸೆಟ್ ನಲ್ಲೇ ಚಿತ್ರದ ಬಹುತೇಕ ಚಿತ್ರೀಕರಣ ನಡೆಯುತ್ತದೆ. ಶೃತಿ ಹರಿಹರನ್, ಗುರುರಾಜ್ ಜಗ್ಗೇಶ್,  ಶಿವರಾಜ ಕೆ.ಆರ್ ಪೇಟೆ, ತೆಲುಗು ನಟ ಸುನೀಲ್, ಗೋವಿಂದೇ ಗೌಡ, ಅಭಯ್ ಪುನೀತ್ ಮುಂತಾದವರು ನಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನವೆಂಬರ್ ಆರರಿಂದ ಚಿತ್ರೀಕರಣ ಆರಂಭವಾಗಲಿದೆ ಎಂದರು.

ಕಲೈ‌ ಮಾಸ್ಟರ್ ನೃತ್ಯ ನಿರ್ದೇಶಕರಾದಾಗ ನೃತ್ಯ ಸಂಯೋಜಿಸಿದ ಮೊದಲ ಗೀತೆಗೂ ನಾನೇ ನಾಯಕನಾಗಿದ್ದೆ. ಈಗ ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರಕ್ಕೂ ನಾನೇ ನಾಯಕ. ನಿರ್ದೇಶಕರು ಒಳ್ಳೆ ಕಥೆ ಸಿದ್ದ ಮಾಡಿಕೊಂಡಿದ್ದಾರೆ. ಮಾರ್ಕೆಟ್ ನಲ್ಲೇ ಹುಟ್ಟಿ, ಅಲ್ಲೇ ಬೆಳೆಯುವ ಹುಡುಗನ ಪಾತ್ರ ನನ್ನದು ಎಂದು ನಾಯಕ ಪ್ರಜ್ವಲ್ ದೇವರಾಜ್ ತಿಳಿಸಿದರು.

 

ನಾನು ಚಿತ್ರದಲ್ಲಿ ಪ್ರಜ್ವಲ್ ಅವರ ಸ್ನೇಹಿತನ ಪಾತ್ರ ನಿರ್ವಹಿಸುತ್ತಿರುವುದಾಗಿ ಗುರುರಾಜ್ ಜಗ್ಗೇಶ್ ಹೇಳಿದರು.

 

ಶೃತಿ ಹರಿಹರನ್, ಶಿವರಾಜ್ ಕೆ.ಆರ್ ಪೇಟೆ, ಗೋವಿಂದೇ ಗೌಡ ಮುಂತಾದ ಕಲಾವಿದರು ಚಿತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕಿ ಪ್ರತಿಭಾ ನರೇಶ್ ಎಲ್ಲರಿಗೂ ಧನ್ಯವಾದ ತಿಳಿಸಿದರು.                     

 

ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಮೊದಲ ಬಾರಿಗೆ ಸಿನಿಮಾದ ಅಷ್ಟು ತಂತ್ರಜ್ಞರ ಫೋಟೊ ಶೂಟ್ ಮಾಡಿಸುವುದರ ಮೂಲಕ ತೆರೆಯ ಹಿಂದೆ ದುಡಿಯುವ ತಂತ್ರಜ್ಞರಿಗೆ ವಿಶೇಷ ಗೌರವ ನೀಡಿದ್ದಾರೆ‌.

Copyright@2018 Chitralahari | All Rights Reserved. Photo Journalist K.S. Mokshendra,