ರಾಣೆಬೆನ್ನೂರಿನಲ್ಲಿ ಗರಡಿ ಸದ್ದು
ನವೆಂಬರ್ ೧೦ರಂದು ‘ಗರಡಿ’ ಚಿತ್ರವು ಬಿಡುಗಡೆಯಾಗುತ್ತಿದೆ. ಪ್ರಚಾರದ ಕೊನೆ ಹಂತವಾಗಿ ರಾಣೆಬೆನ್ನೂರಿನಲ್ಲಿ ಅದ್ದೂರಿ ಟ್ರೇಲರ್ ಅನಾವರಣ ಕಾರ್ಯಕ್ರಮ ನಡೆಯಿತು. ದರ್ಶನ್ ಹಾಜರಿದ್ದುದು ಕಳೆ ತಂದುಕೊಟ್ಟಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯೋಗರಾಜಭಟ್ ಇಲ್ಲಿಯವರೆಗೂ ಮಾಡಿದ ಸಿನಿಮಾಗಳಿಗಿಂತ ಇದು ವಿಭಿನ್ನವಾಗಿದೆ. ರಾಣೆಬೆನ್ನೂರಿನಲ್ಲಿ ಹಲವಾರು ಕುಸ್ತಿಪಟುಗಳು ಇದ್ದಾರೆ. ಈ ಚಿತ್ರ ಅವರಿಗೆ ಉತ್ಸಾಹ ತುಂಬುತ್ತದೆ. ಯುವ ಕಲಾವಿದರು ಜೀವನದಲ್ಲಿ ತಾಳ್ಮೆ ಇಟ್ಟುಕೊಳ್ಳಬೇಕು. ಎಲ್ಲರಿಗೂ ಟೈಮ್ ಬಂದೇ ಬರುತ್ತದೆ. ಬಂದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಲು. ಸಿಂಗಾರಿ ಚಿತ್ರದಿಂದ ಸೂರ್ಯ ನನ್ನ ಜತೆ ಇದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದಂತೆ ಮುಂದೆಯೂ ಇದನ್ನು ಮುಂದುವರೆಸಿಕೊಂಡು ಹೋಗುವುದು ಕ್ಷೇಮ. ಉತ್ತರ ಕರ್ನಾಟಕ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳಸಿ ಎಂದರು.
ದರ್ಶನ್ ಆಸೆಯಂತೆ ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೆಬೆನ್ನೂರಿನಲ್ಲಿ ಆಯೋಜಿಸಲಾಗಿದೆ. ಪ್ರಾಚೀನತೆ, ಪರಂಪರೆಯ ಪ್ರತೀಕವಾಗಿರುವ ಜನಪದ ಮತ್ತು ಸಂಸ್ಕ್ರತಿ ಪ್ರತಿಬಿಂಬಿಸುವ ನಮ್ಮ ಅಪ್ಪಟ ದೇಸಿ ಗರಡಿ ಮನೆಯ ಕುಸ್ತಿ ಕಲೆಗಳು ಮರೆಯಾಗುತ್ತಿದೆ. ಅವುಗಳನ್ನು ಉಳಿಸಿ, ಇಂದಿನ ಯುವ ಜನಾಂಗಕ್ಕೆ ಪರಿಚಯಿಸುವ ಚಿತ್ರ ಇದಾಗಿದೆ. ನಮ್ಮ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡುತ್ತಿರುವ ೧೮ನೇ ಸಿನಿಮಾ ಇದಾಗಿದೆ ಎಂದು ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.
ನಾಯಕ ಯಶಸ್‌ಸೂರ್ಯ ಭಾವುಕರಾಗಿ ದರ್ಶನ್‌ರನ್ನು ಹೊಗಳಲು ಸಮಯ ಮೀಸಲಿಟ್ಟರು. ನಾಯಕಿ ಸೋನಾಲ್‌ಮಾಂಥೇರೋ, ಅತಿಥಿಯಾಗಿ ವಿನೋಧ್‌ಪ್ರಭಾಕರ್ ಮುಂತಾದವರು ಉಪಸ್ತಿತರಿದ್ದರು.