Sila Nodigalil.Tamil Film.News

Saturday, November 11, 2023

191

 

*ನಟಿ ಶರ್ಮಿಳಾ ಮಾಂಡ್ರೆ ಸಾರಥ್ಯದಲ್ಲಿ ನಿರ್ಮಾಣವಾಗಿದೆ "ಸಿಲ ನೋಡಿಗಳಿಲ್" ತಮಿಳು ಚಿತ್ರ* .

 

" *ಮುಂದಿನ ನಿಲ್ದಾಣ" ಚಿತ್ರದ ನಿರ್ದೇಶಕ ವಿನಯ್ ಭಾರದ್ವಾಜ್ ನಿರ್ದೇಶನದ ಈ ಚಿತ್ರ ನವೆಂಬರ್ 24 ರಂದು ಬಿಡುಗಡೆ* .

 

"ಸಜನಿ" ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ, "ಗಾಳಿಪಟ" ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ನಟಿ ಶರ್ಮಿಳಾ ಮಾಂಡ್ರೆ ಈಗ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿದ್ದಾರೆ. ಮಲೇಷಿಯಾ ಮೂಲದ ಪುನ್ನಗೈ ಪೂ ಗೀತಾ ನಿರ್ಮಾಣದ ಈ ಚಿತ್ರದ ಸಂಪೂರ್ಣ ಜವಾಬ್ದಾರಿ ಶರ್ಮಿಳಾ ಮಾಂಡ್ರೆ ಹೊತ್ತಿಕೊಂಡಿದ್ದಾರೆ‌. ಈ ಹಿಂದೆ "ಮುಂದಿನ ನಿಲ್ದಾಣ" ಎಂಬ ಯಶಸ್ವಿ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಭಾರದ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

 

ನಾಲ್ಕು ವರ್ಷಗಳ ಹಿಂದೆ ನಾನು ನಿರ್ದೇಶಿಸಿದ್ದ "ಮುಂದಿನ ನಿಲ್ದಾಣ" ಚಿತ್ರ ತೆರೆಕಂಡು ಎಲ್ಲರ ಮೆಚ್ಚುಗೆ ಗಳಿಸಿತು ಎಂದು ಮಾತನಾಡಿದ ನಿರ್ದೇಶಕ ವಿನಯ್ ಭಾರದ್ವಾಜ್, "ಸಿಲ ನೋಡಿಗಳಿಲ್" ಚಿತ್ರ ನನಗೆ ಸಿಗಲು "ಲೂಸಿಯಾ" ಪವನ್ ಕುಮಾರ್ ಕಾರಣ. ಅವರ ಮೂಲಕ ನನಗೆ ಶರ್ಮಿಳಾ ಮಾಂಡ್ರೆ ಅವರ ಪರಿಚಯವಾಯಿತು. ಮಲೇಷಿಯಾದಲ್ಲಿ ಖ್ಯಾತ ಆರ್ ಜೆ ಆಗಿ ಕಾರ್ಯನಿರ್ವಹಿಸುತ್ತಿರುವ "ಪುನ್ನಗೈ" ಪೂ ಗೀತಾ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಮೂರು ಪ್ರಮುಖ ಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ರಿಚರ್ಡ್ ರಿಷಿ, ಪುನ್ನಗೈ ಪೂ ಗೀತಾ ಹಾಗೂ ಯಶಿಕಾ ಆನಂದ್ ಪ್ರಮುಖಪಾತ್ರಗಳಲ್ಲಿ ನಟಿಸಿದ್ದಾರೆ. 

ಲಂಡನ್ ನಲ್ಲಿ ವಾಸವಿರುವ ಗಂಡ - ಹೆಂಡತಿ ನಡುವೆ ಮತ್ತೊಬ್ಬ ಯುವತಿಯ ಆಗಮನವಾಗುತ್ತದೆ. ಅಲ್ಲೊಂದು ಕೊಲೆ ಕೂಡ ಆಗುತ್ತದೆ. ಈ ಕೊಲೆ ಮಾಡಿದ್ದು ಯಾರು? ಇದು ನಿಜವಾಗಿಯೂ ಕೊಲೆನಾ? ಎಂಬ ಕುತೂಹಲಕಾರಿ ಅಂಶಗಳು ನಮ್ಮ ಚಿತ್ರದಲ್ಲಿದೆ. "ಸಿಲ ನೋಡಿಗಳಿಲ್" ಎಂದರೆ "ಕೆಲವೇ ಕ್ಷಣಗಳಲಿ" ಎಂದು ಅರ್ಥ. ಐದು ಹಾಡುಗಳು ಈ ಚಿತ್ರದಲ್ಲಿದ್ದು, ಐದು ಖ್ಯಾತ ಸಂಗೀತ ನಿರ್ದೇಶಕರು ಸಂಗೀತ ಸಂಯೋಜನೆ ಮಾಡಿದ್ದಾರೆ. ಹೆಸರಾಂತ ತಂತ್ರಜ್ಞರ ಕೈಚಳಕ ನಮ್ಮ ಚಿತ್ರದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಮೊದಲು ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿ ಬಿಡುಗಡೆಯಾಗುತ್ತಿದೆ. ನಂತರದ ದಿನಗಳಲ್ಲಿ ಕನ್ನಡದಲ್ಲಿಯೂ ನಿರ್ಮಿಸುವ ಯೋಜನೆ ಇದೆ ಎಂದರು.

 

"ಗಾಳಿಪಟ 2" ಚಿತ್ರದ ನಂತರ ನಾನು ಪವನ್ ಕುಮಾರ್ ಅವರ ಜೊತೆ ಈ ಚಿತ್ರದ ಬಗ್ಗೆ ಮಾತನಾಡಿದ್ದೆ. ಅವರು ಧೂಮಂ ಚಿತ್ರದಲ್ಲಿ ಬ್ಯುಸಿಯಾಗಿದ್ದರಿಂದ ವಿನಯ್ ಅವರನ್ನು ಪರಿಚಯಿಸಿದರು. "ಮುಂದಿನ ನಿಲ್ದಾಣ" ಚಿತ್ರ ನೋಡಿದೆ‌. ವಿನಯ್ ಅವರ ನಿರ್ದೇಶನ ಇಷ್ಟವಾಯಿತು. ಈ ಚಿತ್ರವನ್ನು ವಿನಯ್ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ನಟಿಸಿಲ್ಲ. ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ನಿರ್ಮಾಪಕರು ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ. ನವೆಂಬರ್ 24 ರಂದು ಪ್ರಪಂಚದಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ ಎಂದು ನಟಿ ಶರ್ಮಿಳಾ ಮಾಂಡ್ರೆ ತಿಳಿಸಿದರು.

Copyright@2018 Chitralahari | All Rights Reserved. Photo Journalist K.S. Mokshendra,