Color Hanuma.News

Tuesday, December 05, 2023

131

 

ಕಲರ್ಗಿಂತ ಕಪ್ಪು ಬಿಳುಪು ಯುಗ ಚೆನ್ನಾಗಿತ್ತು - ಡಾ.ಹಂಸಲೇಖ

       ನಾದಬ್ರಹ್ಮ ಡಾ.ಹಂಸಲೇಖ ಗರಡಿಯಲ್ಲಿ ಪಳಗಿರುವ ಸಾಕಷ್ಟು ವಿದ್ಯಾರ್ಥಿಗಳು ಚಿತ್ರರಂಗದಲ್ಲಿ ಗಾಯಕ, ನಿರ್ದೇಶಕ, ಸಂಗೀತ ಸಂಯೋಜಕ, ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಅದೇ ಹಾದಿಯಲ್ಲಿ ಬೆಂಗಳೂರಿನ ಯಶ್ಜಿತ್ಗೌಡ ’ಕಲರ್ ಹನುಮ’ ಎನ್ನುವ ಕಿರುಚಿತ್ರಕ್ಕೆ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇವರ ಶ್ರಮಕ್ಕೆ ಜಗದೀಶ.ಎಂ.ದೇವನಹಳ್ಳಿ ಬಂಡವಾಳ ಹೂಡಿರುವುದು ಹೊಸ ಅನುಭವ.

        ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಚಿತ್ರ ವೀಕ್ಷಿಸಿದ ಹಂಸಲೇಖ, ಶಿಷ್ಯನ ಹಾಗೂ ಪ್ರಸಕ್ತ ಚಿತ್ರರಂಗದ ವಿದ್ಯಾಮಾನಗಳ ಬಗ್ಗೆ ಮಾತನಾಡಿದರು. ಎಕೆ 47 ನಂತಹ ಹಿಂಸೆಯ ವಿಚಿತ್ರವಾದ ಆಯುಧಗಳನ್ನು ಯಾರು ಬಿಟ್ಟಿಲ್ಲ. ಎಲ್ಲರೂ ಮಚ್ಚು, ಲಾಂಗ್ಗಳಲ್ಲಿ ಹೊಡಿತಾ ಇದ್ದಾರೆ. ಈತ ಮಾತ್ರ ಬರೀ ಗೋಲಿಯಲ್ಲಿ ಗ್ರೀನ್ ಗೋಲಿ ಹೊಡೆದಿದ್ದಾನೆ. ಶಾಲೆಯಲ್ಲಿ ಸೈಲೆಂಟ್, ಮೃಧು ಸ್ವಭಾವದವನಾಗಿದ್ದರಿಂದ ಹಾಗಾಗ್ಗೆ ಚಾರ್ಜ್ ಮಾಡುತ್ತಿದ್ದೆ. ಈಗ ನೋಡಿದರೆ ಅದೇ ರೀತಿ ಇರುವುದು ಒಳ್ಳೆಯದೇ ಆಗಿದೆ. ಈಗಿನ ವಾತಾವರಣದಲ್ಲಿ ಅವೆಲ್ಲಾವನ್ನು ಮೀರಿಸಲು ಬೇರೆ ದಾರಿ ಹುಡುಕಿಕೊಂಡಿರುವುದಕ್ಕೆ ಅಭಿನಂದಿಸಬೇಕಾಗಿದೆ. ಕಥೆಯ ಆಯ್ಕೆ ಬಹಳ ಚೆನ್ನಾಗಿದೆ.

       ’ಅಮರಶಿಲ್ಪಿ ಜಕಣಚಾರಿ’ ಸಿನಿಮಾ ಬರೋವರೆಗೂ ಎಲ್ಲವು ಕಪ್ಪು ಬಿಳುಪು ಆಗಿತ್ತು. ಬದುಕಿನಲ್ಲಿ ಬರೀ ಬಣ್ಣಗಳನ್ನು ನೋಡಿ, ಟಾಕೀಸಿಗೆ ಹೋದರೆ ಅಲ್ಲಿ ಬ್ಲಾಕ್ ಅಂಡ್ ವೈಟ್ ನೋಡ್ತಾ ಇದ್ದುದು ಸಂತಸ ತರಿಸುತ್ತಿತ್ತು. ನಂತರ ಬಣ್ಣದ ಲೋಕ ಬಂದು ಎಲ್ಲರನ್ನು ಶಾಂತಿಭಂಗ ಮಾಡುತ್ತಿದೆ. ಕಪ್ಪು ಬಿಳುಪು ಸತ್ಯ ಮತ್ತು ಸುಳ್ಳುಗಳನ್ನು ಪ್ರತಿಬಿಂಬಿಸುತ್ತಿತ್ತು. ಕಲರ್ ಬಂದ ಮೇಲೆ ವ್ಯತ್ಯಾಸವೇ ಇಲ್ಲದಂತಾಗಿದೆ. ಇಂದು ಬಣ್ಣದ ಲೋಕದಲ್ಲಿದ್ದರೂ ಮನುಷ್ಯ ಚಿತ್ರಮಂದಿರ ಒಳಹೊಕ್ಕರೆ ಕತ್ತಲು, ಗಾಳಿ, ರಕ್ತ ಕಾಣಿಸಿಕೊಂಡು, ಆತನು ತನಗೆ ಗೊತ್ತಿಲ್ಲದಂತೆ ಕತ್ತಲೆ ಕಡೆ ಹೋಗುತ್ತಿದ್ದಾನೆ. ’ತಾರೆ ಜಮೀನ್ ಪರ್’ದಲ್ಲಿ ಅಮೀರ್ಖಾನ್ ಒಂದು ಸಮಸ್ಯೆ ಇಟ್ಟುಕೊಂಡು ದೊಡ್ಡ ಸಿನಿಮಾ ಮಾಡಿದ್ದರು. ಅದರಂತೆ ನೀನು ಸಹ ’ಕಲರ್ ಬ್ಲೈಂಡ್’ ವಿಷಯವನ್ನು ತೆಗೆದುಕೊಂಡು ಚಿತ್ರ ಮಾಡು. ತಾಂತ್ರಿಕತೆ ಸಹಾಯ ಮಾಡಲು ಸಿದ್ದನಿದ್ದೇನೆ. ನಿನಗೆ ಒಳ್ಳೆಯ ಭವಿಷ್ಯ ಸಿಗಲೆಂದು ಶಿಷ್ಯನಿಗೆ ಹರಸಿದರು.

      ತಾರಾಗಣದಲ್ಲಿ ನವೀನ್.ಎಸ್.ಆರ್, ದೀಪಶ್ರೀಗೌಡ, ಚೇತನ್ತ್ರಿವೇಣ್, ಕುಶಾಲ್ನಾರಾಯಣ್ಗೌಡ, ಮಹರ್ಷಿ, ಲಲಿತಾ, ತೇಜಸ್ವಿನಿಗೌಡ ನಟಿಸಿದ್ದಾರೆ. ಸಂಗೀತ ರವಿರಾಜ್, ಛಾಯಾಗ್ರಹಣ ಬೆನಕರಾಜು, ಸಂಕಲನ ಸುರೇಶ್‌ಅರಸ್ ನಿರ್ವಹಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

Copyright@2018 Chitralahari | All Rights Reserved. Photo Journalist K.S. Mokshendra,