Arsayyana Prema Prasanga.News

Saturday, September 16, 2023

137

 

*"ಅರಸಯ್ಯನ ಪ್ರೇಮಪ್ರಸಂಗ"ದಲ್ಲಿ ಬಂತು "ಅಯ್ಯಯ್ಯೋ ರಾಮ" ಹಾಡು* .

 

"ಫ್ರೆಂಚ್ ಬಿರಿಯಾನಿ" , "ಗುರು ಶಿಷ್ಯರು" ಚಿತ್ರದ ಮೂಲಕ ಜನಪ್ರಿಯರಾಗಿರುವ ಮಹಾಂತೇಶ್ ಹಿರೇಮಠ್ ಪ್ರಮುಖ ಪಾತ್ರದಲ್ಲಿ ನಟಿಸಿರುವ "ಅರಸಯ್ಯನ ಪ್ರೇಮಪ್ರಸಂಗ" ಚಿತ್ರಕ್ಕಾಗಿ ಕೃಷ್ಣ ರಿತ್ತಿ ಬರೆದಿರುವ "ಅಯ್ಯಯ್ಯೋ ರಾಮ" ಚಿತ್ರದ ಹಾಡು ಬಿಡುಗಡೆಯಾಗಿದೆ. ಪ್ರವೀಣ್ - ಪ್ರದೀಪ್ ಸಂಗೀತ ನೀಡಿದ್ದಾರೆ‌. ಶಂಕರ್ ಭಾರತಿಪುರ ಹಾಡಿದ್ದಾರೆ. ಗ್ರಾಮೀಣ ಸೊಗಡಿನ ಈ ಹಾಡು A2. Music ಮೂಲಕ ಬಿಡುಗಡೆಯಾಗಿ ಜನಪ್ರಿಯವಾಗುತ್ತಿದೆ. ಇತ್ತೀಚೆಗೆ ಈ ಹಾಡನ್ನು ನಟ ನವೀನ್ ಶಂಕರ್ ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಿಡುಗಡೆ ಮಾಡಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ನಾನು ಅಭಿನಯ ತರಂಗದಲ್ಲಿ ನಟನೆ ಹಾಗೂ ನಿರ್ದೇಶನದ ತರಬೇತಿ ಪಡೆದಿದ್ದೇನೆ ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ಜೆ.ವಿ.ಆರ್ ದೀಪು, ನಿರ್ಮಾಪಕ ರಾಜೇಶ್ ಸಹ ಅಭಿನಯ ತರಂಗದ ವಿದ್ಯಾರ್ಥಿಯಾಗಿದ್ದರು. ಈ ಚಿತ್ರದ ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು.  ಈ ಚಿತ್ರ ಕಾಮಿಡಿ ಡ್ರಾಮ ಎನ್ನಬಹುದು. ಹಾಡಿನ ಬಗ್ಗೆ ಹೇಳಬೇಕಾದರೆ, ಹಳ್ಳಿಗಳಲ್ಲಿ ಯಾರಾದರೂ ಸತ್ತಾಗ ರಾತ್ರಿ ಸಮಯದಲ್ಲಿ ಭಜನೆ ಮಾಡುತ್ತಾರೆ. ಆ ರೀತಿ ನಮ್ಮ ಚಿತ್ರದಲ್ಲೂ ಬರುವ ಒಂದು ಪ್ರಸಂಗದಲ್ಲಿ ಈ ಹಾಡು ಬರುತ್ತದೆ. ಪ್ರವೀಣ್ - ಪ್ರದೀಪ್ ಸಂಗೀತದಲ್ಲಿ, ಶಂಕರ್ ಭಾರತಿಪುರ ಅವರ ಕಂಠಸಿರಿಯಲ್ಲಿ ಈ ಹಾಡು ಚೆನ್ನಾಗಿ ಬಂದಿದೆ. ಸದ್ಯದಲ್ಲೇ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

.

ನಾನು ಕೂಡ ಅಭಿನಯ ತರಂಗದ ವಿದ್ಯಾರ್ಥಿ. ನಿರ್ದೇಶಕ ದೀಪು ಈ ಕಥೆ ಹೇಳಿದಾಗ, ಗ್ರಾಮೀಣ ಸೊಗಡಿನ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ನನ್ನ ಪತ್ನಿ ಮೇಘಶ್ರೀ ರಾಜೇಶ್ ಈ ಚಿತ್ರದ ನಿರ್ಮಾಪಕಿ. ಇಂದು ಹಾಡು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದರು ರಾಜೇಶ್.

 

ನಾನು ನಾಯಕ ಎಂದು ಯಾವತ್ತೂ ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ. ಪೋಷಕ ನಟನಾಗಿರುವುದಕ್ಕೆ ಇಷ್ಟ ಪಡುತ್ತೇನೆ. ನಿರ್ಮಾಪಕರು, ನಿರ್ದೇಶಕರು ನೀನೇ ಈ ಚಿತ್ರದ ನಾಯಕ ಎಂದಾಗ ಆಶ್ಚರ್ಯವಾಯಿತು. ದೀಪು ಹಳ್ಳಿಸೊಗಡಿನ ಅದ್ಭುತ ಕಥೆ ಆಯ್ಕೆ ಮಾಡಿಕೊಂಡು, ಅಷ್ಟೇ ಚೆನ್ನಾಗಿ ಚಿತ್ರ ಮಾಡಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಕೂಡ ಜನಪ್ರಿಯವಾಗಲಿದೆ‌‌‌. ಚಿತ್ರ ಕೂಡ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ನಟ ಮಹಾಂತೇಶ್ ಹಿರೇಮಠ್ ತಿಳಿಸಿದರು.

 

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಪ್ರವೀಣ್ - ಪ್ರದೀಪ್ ಮಾಹಿತಿ ನೀಡಿದರು. ಗಾಯಕ ಶಂಕರ್ ಭಾರತಿಪುರ ಗಾಯನದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ನಟಿಸಿರುವ ನಾಯಕಿ ರಶ್ಮಿತಾ ಗೌಡ, ವಿಜಯ್ ಚೆಂಡೂರ್, ರಘು ರಾಮನಕೊಪ್ಪ, ಪಿ.ಡಿ.ಸತೀಶ್  ಸೇರಿದಂತೆ ಅನೇಕ ಕಲಾವಿದರು, ಛಾಯಾಗ್ರಾಹಕ ಗುರುಪ್ರಸಾದ್ ನರ್ನಾಡ್ , ಸಂಕಲನಕಾರ ಸುನೀಲ್ ಕಶ್ಯಪ್ ಮುಂತಾದ ತಂತ್ರಜ್ಞರು "ಅರಸಯ್ಯನ ಪ್ರೇಮಪ್ರಸಂಗ" ದ ಬಗ್ಗೆ ಮಾತನಾಡಿದರು. .

Copyright@2018 Chitralahari | All Rights Reserved. Photo Journalist K.S. Mokshendra,