"ಪ್ರಣಯಂ" ಶ್ರೀಮಂತಿಕೆಗೆ ಹಾಟ್ ಟ್ರೈಲರ್
ಪಲ್ಲಕ್ಕಿ, ಗಣಪ, ಪಾರಿಜಾತದಂಥ ಅದ್ಭುತ ಚಿತ್ರಗಳನ್ನು ನೀಡಿದ ಪರಮೇಶ್ ಅವರೀಗ ಮತ್ತೊಂದು ಇನ್ ಟೆನ್ಸ್ ಲವ್ ಸ್ಟೋರಿಯನ್ನು ಪ್ರಣಯಂ ಚಿತ್ರದ ಮೂಲಕ ಪ್ರೇಕ್ಷಕರಿಗೆ ನೀಡಲಿದ್ದಾರೆ.
ಮನಸ್ವಿ ವೆಂಚರ್ಸ್ ಹಾಗೂ ಪಿಟು ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಪರಮೇಶ್ ಅವರೇ ಕಥೆ ಬರೆದು ನಿರ್ಮಿಸಿರುವ ಈ ಚಿತ್ರಕ್ಕೆ ಎಸ್. ದತ್ತಾತ್ರೇಯ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.
ಬಿಚ್ಚುಗತ್ತಿ ಖ್ಯಾತಿಯ ನಟ ರಾಜವರ್ಧನ್, ನೈನಾ ಗಂಗೂಲಿ ಚಿತ್ರದ ನಾಯಕ, ನಾಯಕಿಯಾಗಿ ಅಭಿನಯಿಸಿದ್ದಾರೆ.
ಫೆಬ್ರವರಿ 9ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮಾಜಿ ಉಪ ಮೇಯರ್ ಮೋಹನ್ ರಾಜು ಟ್ರೈಲರ್ ರಿಲೀಸ್ ಮಾಡಿ ಈ ಟೈಟಲ್ ಕನ್ನಡದ ಜೊತೆ ತೆಲುಗು ಭಾಷೆಗೂ ಹತ್ತಿರವಾಗುವಂತಿದೆ. ಹಾಡು, ಕಾನ್ಸೆಪ್ಟ್ ಎರಡೂ ಚೆನ್ನಾಗಿದೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಚಿತ್ರದಲ್ಲಿ ಜಯಂತ್ ಕಾಯ್ಕಿಣಿ ಅವರು ೩ ಹಾಡುಗಳನ್ನು ಬರೆದಿದ್ದು, ಮನೋಮೂರ್ತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ.ನಾಗೇಶ್ ಆಚಾರ್ಯ ಕ್ಯಾಮೆರಾ ವರ್ಕ್ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಗೀತ ನಿರ್ದೇಶಕ ಮನೋಮೂರ್ತಿ ಚಿತ್ರದಲ್ಲಿ ೫ ಹಾಡಿದ್ದು, ಕ್ಯಾಮೆರಾ ವರ್ಕ್ ಅದ್ಭುತವಾಗಿ ಮೂಡಿಬಂದಿದೆ. ಪ್ರಣಯಂ ಅಂದ್ರೆ ಲವ್, ಅದನ್ನಿಲ್ಲಿ ಢಿಫರೆಂಟಾಗಿ ಹೇಳಿದ್ದಾರೆ. ಖಂಡಿತ ಈ ವರ್ಷದ ಮೊದಲ ಹಿಟ್ ಸಿನಿಮಾ ಆಗುತ್ತೆ ಎಂದರು.
ನಂತರ ಜಯಂತ್ ಕಾಯ್ಕಿಣಿ ಮಾತನಾಡಿ
ಪರಮೇಶ್ ತುಂಬಾ ಜೋಷ್ ಇರುವಂಥ ಪ್ರೊಡ್ಯೂಸರ್ ಸಿನಿಮಾಗಾಗಿ ತುಂಬಾ ಕಷ್ಟಪಡುತ್ತಾರೆ. ಮನೋಮೂರ್ತಿ ಹಾಗೂ ನಮ್ಮ ದಾಂಪತ್ಯಕ್ಕೆ ೧೭ ವರ್ಷ ಆಯ್ತು. ಆಗಿದ್ದ ಕುತೂಹಲ, ಚಡಪಡಿಕೆ ಈಗಲೂ ಇದೆ. ಹಿಂದೆ ಪರಮೇಶ್ ಅವರ ಕರಿಯ, ಗಣಪ, ಪಾರಿಜಾತ ಚಿತ್ರಗಳಿಗೂ ನಾನೇ ಸಾಂಗ್ ಬರೆದಿದ್ದೆ. ಇದರಲ್ಲಿ ೩ ಹಾಡನ್ನು ಬರೆದಿದ್ದೇನೆ ಎಂದು ಹೇಳಿದರು.
ನಿರ್ದೇಶಕ ದತ್ತಾತ್ರೇಯ ಮಾತನಾಡುತ್ತ ನಾನು
ಈ ಸ್ಕ್ರಿಪ್ಟ್ ಮಾಡಿಕೊಂಡು ಬಂದಾಗ ನಿರ್ಮಾಪಕರು ತುಂಬಾ ಚೆನ್ನಾಗಿ ಬಂದಿದೆ ಎಂದು ಖುಷಿಯಿಂದ ಹಗ್ ಮಾಡಿದರು. ಸುಮಾರು ಲೊಕೇಶನ್ ಗಳನ್ನು ನೋಡಿ ಕೊನೆಗೆ ಮಡಿಕೇರಿಯಲ್ಲಿ ನಮಗೆ ಬೇಕಾದ ಲೊಕೇಶನ್ ಸಿಕ್ತು. ಎಲ್ಲಾ ಲೆಜೆಂಡರಿಗಳ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಬಂದಿದೆ. ನಾಗೇಶ್ ನನಗೆ ಇನ್ನೊಂದು ಕಣ್ಣಿದ್ದ ಹಾಗೆ. ತುಂಬಾ ಚೆನ್ನಾಗಿ ಶೂಟ್ ಮಾಡಿಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ನಾಯಕ ರಾಜವರ್ಧನ್ ಮಾತನಾಡುತ್ತ ಬಿಚ್ಚುಗತ್ತಿಗೂ ಮುಂಚೆಯೇ ಪರಮೇಶ್ ಈ ಕಥೆಯನ್ನು ಹೇಳಿದರು .ಇವತ್ತಿನ ಫ್ಯಾಮಿಲಿಗಳಲ್ಲಿ ಈ ಥರದ ಘಟನೆಗಳು ನಡೆಯುತ್ತಲೇ ಇವೆ. ಅಂಥಾ ಒಂದು ಸ್ಟ್ರಾಂಗ್ ಕಂಟೆಂಟ್ ಇಟ್ಟುಕೊಂಡು ನಾವೀ ಸಿನಿಮಾ ಮಾಡಿದ್ದೇವೆ. ಬಿ.ಸಿ. ಸೆಂಟರ್ ಆಡಿಯನ್ಸ್ ಗಳಿಗೆ ಬೇಕಾದ ಕಾನ್ಸೆಪ್ಟ್ ಚಿತ್ರದಲ್ಲಿದೆ.
ಆಗಿನ್ನೂ ವಿದೇಶದಿಂದ ಬರುವ ಗೌತಂ ಎಂಬ ಪಾತ್ರ ಮಾಡಿದ್ದೇನೆ. ಆತ 5-10 ದಿನದಲ್ಲಿ ಸ್ವಂತ ರಿಲೇಶನ್ ನಲ್ಲೇ ಹುಡುಗಿಯೊಬ್ಬಳನ್ನು ಮದುವೆಯಾಗ್ತಾನೆ. ಆನಂತರ 15-20 ದಿನಗಳಲ್ಲಿ ನಡೆಯುವ ಕಥೆ, ನನ್ನದು ತುಂಬಾ ಇನ್ ಟೆನ್ಸಿವ್ ಆಗಿರುವ ಪಾತ್ರ. ಮನೋಮೂರ್ತಿ, ಜಯಂತ್ ಕಾಯ್ಕಿಣಿ ಅವರಂಥ ಲೆಜೆಂಡರಿಗಳ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದರು.
ನಿರ್ಮಾಪಕ ಪರಮೇಶ್ ಮಾತನಾಡುತ್ತ ನಮ್ಮ ಚಿತ್ರವನ್ನು ಫೆ.9ರಂದು ರಿಲೀಸ್ ಮಾಡುತ್ತಿದ್ದೇವೆ. ನಾನು ಈವರೆಗೆ 9 ಸಿನಿಮಾ ಮಾಡಿದ್ದೇನೆ. ಆದರೂ ಗಾಂಧಿನಗರದಲ್ಲಿ ಪ್ರೊಡ್ಯೂಸರ್ ಗೆ ನೆಲೆಯೆ ಇಲ್ಲದಾಗಿದೆ. ನಮ್ಮದು ತುಂಬಾ ಕ್ರಿಟಿಕಲ್ ಫೀಲ್ಡ್. ಈಗ ಸಿನಿಮಾ ಹೇಗೋ ಮಾಡಿಬಿಡಬಹುದು. ರಿಲೀಸ್ ಮಾಡೋದು ತುಂಬಾ ಕಷ್ಟ. ರಿಲೀಸ್ ಡೇಟ್ ಅನೌನ್ಸ್ ಮಾಡಲಿಕ್ಕೇ ಭಯವಾಗುತ್ತೆ. ಬಿಡುಗಡೆಗೇ 2ಕೋಟಿ ಬೇಕಾಗುತ್ತೆ, ಎಲ್ಲಿಂದ ತರೋದು. ಹಾಗೂ, ರಿಲೀಸ್ ಮಾಡಲು ಮೂರು ಸಲ ಟ್ರೈ ಮಾಡಿದೆ. ಆಗಲಿಲ್ಲ. ಈಗ ಧೈರ್ಯ ಮಾಡಿದ್ದೇನೆ. ಇಂಡಸ್ಟ್ರಿಗೆ ಒಂದೊಳ್ಳೆ ಸಿನಿಮಾ ಕೊಟ್ಟಿದ್ದೇನೆ. ಜನ ಕೈ ಹಿಡಿಯುತ್ತಾರೆಂಬ ನಂಬಿಕೆಯಿದೆ ಎಂದರು.
ಚಿಕ್ಕಮಗಳೂರು, ಮಡಿಕೇರಿಯಂಥ ಸುಂದರ ಲೊಕೇಶನ್ ಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಝಂಕಾರ್ ಮ್ಯೂಸಿಕ್ ಈ ಚಿತ್ರದ ಹಾಡುಗಳನ್ನು ಹೊರತಂದಿದೆ. ಕುನಾಲ್ ಗಾಂಜಾವಾಲ, ಶ್ರೇಯಾ ಘೋಷಾಲ್ ಇತರರು ದನಿಯಾಗಿದ್ದಾರೆ. ಚಿತ್ರದಲ್ಲಿ ಗೋವಿಂದೇಗೌಡ, ಮಂಥನ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ.
ಮನೋಮೂರ್ತಿ ಅವರ ಸಂಗೀತ ನಿರ್ದೇಶನ, ವಿ. ನಾಗೇಶ್ ಆಚಾರ್ಯ ಅವರ ಛಾಯಾಗ್ರಹಣ. ಮದನ್ ಹರಿಣಿ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ ಮಾದ ಅವರ ಸಾಹಸ ನಿರ್ದೇಶನ ಪ್ರಣಯಂ ಚಿತ್ರಕ್ಕಿದೆ.