Rc Stuios.5 Movies Launch

Tuesday, January 23, 2024

138

 

*ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆರ್ ಚಂದ್ರು ಅವರ ಆರ್ ಸಿ ಸ್ಟುಡಿಯೋಸ್ ಅನಾವರಣ* .

 

 *ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಒಂದೇ ಸಲ ಐದು ಚಿತ್ರಗಳಿಗೆ ಚಾಲನೆ*

 

ಖ್ಯಾತ ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು ಸಾರಥ್ಯದ ಆರ್ ಸಿ ಸ್ಟುಡಿಯೋಸ್ ಉದ್ಘಾಟನೆಯಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆರ್ ಸಿ ಸ್ಟುಡಿಯೋಸ್ ಉದ್ಘಾಟಿಸಿದರು. ಆರ್ ಸಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗಲಿರುವ ಐದು ಚಿತ್ರಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು.

ರಿಯಲ್ ಸ್ಟಾರ್ ಉಪೇಂದ್ರ, ಮಾಜಿ ಸಚಿವ ಎಚ್‍.ಎಂ. ರೇವಣ್ಣ, ಮುಂಬೈನ ಖ್ಯಾತ ನಿರ್ಮಾಪಕ ಮತ್ತು ವಿತರಕರಾದ ಆನಂದ್‍ ಪಂಡಿತ್‍, ನಿರ್ಮಾಪಕ ಜಾಕ್‍ ಮಂಜು, ಅಲಂಕಾರ್ ಪಾಂಡಿಯನ್‍,ಉದ್ಯಮಿಗಳಾದ ರಾಮಚಂದ್ರೇ ಗೌಡ, ಮಂಜುನಾಥ ಹೆಗಡೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಶ್ರೀಮತಿ  ಗೀತಾ ಶಿವರಾಜಕುಮಾರ್ ವಿಡಿಯೋ ಮೂಲಕ ಆರ್ ಸಿ ಸ್ಟುಡಿಯೋಸ್ ಗೆ ಶುಭ ಕೋರಿದರು. ‘ಶ್ರೀ ರಾಮ ಬಾಣ’, ‘ಕಬ್ಜ 2’, ‘ಪಿಓಕೆ’, ‘ಫಾದರ್’ ಮತ್ತು ‘ಡಾಗ್’ ಚಿತ್ರಗಳ ಅಧಿಕೃತ ಘೋಷಣೆ ಈ ಸಂದರ್ಭದಲ್ಲಿ ಆಗಿದೆ. ಈ ಪೈಕಿ ‘ಕಬ್ಜ 2’ ಚಿತ್ರವನ್ನು ಮಾತ್ರ ಆರ್ ಚಂದ್ರು ಅವರು ನಿರ್ದೇಶಿಸುತ್ತಿದ್ದು, ಮಿಕ್ಕ ಚಿತ್ರಗಳನ್ನು  ಬೇರೆಬೇರೆ ನಿರ್ದೇಶಕರು ನಿರ್ದೇಶಿಸಲಿದ್ದಾರೆ. ಈ ಎಲ್ಲಾ ಚಿತ್ರಗಳನ್ನು ಆರ್.ಸಿ. ಸ್ಟುಡಿಯೋಸ್‍ ನಿರ್ಮಿಸಲಿದೆ.

 

ಈ ಸಂದರ್ಭದಲ್ಲಿ ಮಾತನಾಡಿದ ಆರ್ ಚಂದ್ರು, ನಮ್ಮ ಆರ್ ಸಿ ಸ್ಟುಡಿಯೋಸ್ ಗೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈ ಸಂಸ್ಥೆಯಿಂದ ಏಕಕಾಲಕ್ಕೆ ನಿರ್ಮಾಣವಾಗಲಿರುವ ಐದು ಚಿತ್ರಗಳು ಇಂದು ಅಧಿಕೃತವಾಗಿ ಆರಂಭವಾಗಿದೆ. ಆರ್ ಸಿ ಸ್ಟುಡಿಯೋಸ್ ನನ್ನದೊಬ್ಬನ್ನದಲ್ಲ. ಇಲ್ಲಿರುವ ಮಂಜುನಾಥ ಹೆಗಡೆ, ಸೋದರ ಸಮಾನರಾದ ರಾಮಚಂದ್ರೇ ಗೌಡರು, ಮುಂಬೈನಿಂದ ಬಂದಿರುವ ಆನಂದ್ ಪಂಡಿತ್  ಹಾಗೂ ಅಲಂಕಾರ್ ಪಾಂಡಿಯನ್ ಎಲ್ಲರೂ ನಮ್ಮ ಸಂಸ್ಥೆಯ ಆಧಾರ ಸ್ತಂಭಗಳು. ಅವರೆಲ್ಲರ ಸಹಕಾರಕ್ಕೆ ನಾನು ಚಿರ ಋಣಿ.

 ಕಲ್ಲು ಹೊಡೆದರೆ ಲೈಟ್ ಕಂಬಕ್ಕೆ ಹೊಡೆಯಬಾರದು.‌ ಚಂದ್ರನಿಗೆ ಹೊಡೆಯಬೇಕು.  ನಾನು ಸಹ ‘ಕಬ್ಜ’ ಮೂಲಕ ಅದೇ ರೀತಿ ಪ್ರಯತ್ನಪಟ್ಟೆ. ನಾನು ನನ್ನದೇ ಹಣದಿಂದ ಪ್ರಯತ್ನಪಟ್ಟೆ. ಲ್ಯಾಂಡಿಂಗ್‍ ವೇಳೆ ಚಿಕ್ಕ ಕ್ರಾಶ್‍ ಆಯ್ತು. ಅದು ಸೋಲಲ್ಲ. ಮಿಕ್ಕಂತೆ ಎಲ್ಲವೂ ಸಕ್ಸಸ್‍ ಆಯಿತು. ಹಾಗಾಗಿದ್ದರಿಂದ ಇಂದು ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿ ಐದು ಸಿನಿಮಾಗಳನ್ನು ಘೋಷಿಸಿದ್ದೀನಿ. ನಾನು ಸಹ ದುಡ್ಡನ್ನು ರಿಯಲ್‍ ಎಸ್ಟೇಟ್‍ಗೆ ಹಾಕಬಹುದಿತ್ತು. ಆದರೆ, ದೇವರು ನನ್ನನ್ನು ಇಲ್ಲಿ ತಂದು ಹಾಕಿದ್ದಾರೆ, ಇಲ್ಲಿರು ಅಂತ. ಸಿನಿಮಾ ಮಾಡಿದರೆ, ಚಿತ್ರರಂಗದ ಎಲ್ಲಾ ವಲಯದವರು ಅದರಿಂದ ಊಟ ಮಾಡುತ್ತಾರೆ’ ಎಂದರು.

 

ಮೊದಲು ನಾವು ಎಲ್ಲರನ್ನು ಗೌರವಿಸುವುದನ್ನು ಕಲಿಯಬೇಕು ಎಂದ ಅವರು, ’ನಾವು ಒಳ್ಳೆಯ ಸಿನಿಮಾ ಮಾಡೋದಕ್ಕೆ ಪ್ರಯತ್ನ ಮಾಡೋಣ. ಮಾಡಿದ ಸಿನಿಮಾ ಎಲ್ಲಾ ದೊಡ್ಡ ಹಿಟ್‍ ಆಗುವುದಿಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳ ಸಿನಿಮಾ ಸಹ ಫ್ಲಾಪ್‍ ಆಗುತ್ತದೆ. ನಮ್ಮದು ಸಹ ಸಣ್ಣ ಕ್ರಾಶ್‍ ಆಗಿರಬಹುದು.  ಸರಕಾರಕ್ಕೆ ನಾನು 20 ಕೋಟಿ ಟ್ಯಾಕ್ಸ್ ಕಟ್ಟಿದ್ದೀನಿ. ಅದು ‘ಕಬ್ಜ’ದಿಂದ. ಇದನ್ನು ಯಾರೂ ಬಹಿರಂಗವಾಗಿ ಹೇಳುವುದಿಲ್ಲ. ನಾನು ಹೇಳುತ್ತೇನೆ. ಅದರಿಂದ ಎಷ್ಟು ಜನ ಊಟ ಮಾಡಿರುತ್ತಾರೆ. ಅದರಿಂದ ಚಿತ್ರರಂಗದಲ್ಲಿ ಎಷ್ಟು ಜನ ಬದುಕಬಹುದು? ಇದೆಲ್ಲವನ್ನೂ ಯೋಚಿಸಬೇಕು. ಸುಮ್ಮನೆ ಏನೇನೋ ಮಾತನಾಡಬಾರದು’ ಎಂದು ಹೇಳಿದರು.

 

ಎಲ್ಲರೂ ಚಿತ್ರವನ್ನು ಗೆಲ್ಲಿಸಬೇಕು ಅಂತಲೇ ಮಾಡುತ್ತಾರೆ, ಸೋಲಬೇಕು ಅಂತ ಯಾರೂ ಮಾಡುವುದಿಲ್ಲ ಎಂದ ಚಂದ್ರು, ಕನ್ನಡ ನಿರ್ದೇಶಕರಿಗೆ ಅವಕಾಶ ಕೊಡಬೇಕು ಎಂದು ಈ ಸಂಸ್ಥೆ ಕಟ್ಟಿದ್ದೇನೆ. ನಾನು ಬೇರೆ ಯಾವುದೋ ಭಾಷೆಗೆ ಹೋಗಿ ಈ ಸಂಸ್ಥೆ ಶುರು ಮಾಡಿಲ್ಲ. ಬೆಂಗಳೂರಿನಲ್ಲಿ ನಿಂತು ಆರ್.ಸಿ. ಸ್ಟುಡಿಯೋಸ್‍ ಪ್ರಾರಂಭಿಸಿದ್ದೇನೆ. ಈ ಸಂಸ್ಥೆಯ ಮೂಲಕ ನಿರಂತರವಾಗಿ ಚಿತ್ರ ಮಾಡುತ್ತೇನೆ’ ಎಂದರು

Copyright@2018 Chitralahari | All Rights Reserved. Photo Journalist K.S. Mokshendra,