ಶೀರ್ಷಿಕೆ ಹಳೇದು ಕಥೆ ಹೊಸತು
60ರ ದಶಕದಲ್ಲಿ ’ಗಂಗೆ ಗೌರಿ’ ಚಿತ್ರದಲ್ಲಿ ಡಾ.ರಾಜ್ಕುಮಾರ್, ಲೀಲಾವತಿ, ಭಾರತಿ ಅಭಿನಯಿಸಿದ್ದು, ಆ ಕಾಲಕ್ಕೆ ದೊಡ್ಡ ಹಿಟ್ ಆಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿ ಭಕ್ತಿ ಪ್ರಧಾನ ಸಿನಿಮಾವು ಸೆಟ್ಟೇರಿದೆ. ಬೆಂಗಳೂರಿನ ತಿಂಡ್ಲು ಸ್ಥಳದಲ್ಲಿರುವ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಅದ್ದೂರಿ ಮುಹೂರ್ತ ಸಮಾರಂಭಕ್ಕೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಮತ್ತು KTVA ಅಧ್ಯಕ್ಷರಾದ ರವಿ.ಆರ್.ಗರಣಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಶಿವಾನಂದ ದೊಡ್ಮನಿ, ಲಯನ್ ಮನೋಜ್ಕುಮಾರ್, ನಿರ್ದೇಶಕರ ಸಂಘದ ಅಧ್ಯಕ್ಷ ಎನ್‌ಆರ್ಕೆ.ವಿಶ್ವನಾಥ್ ಮುಂತಾದವರು ಉಪಸ್ತಿತರಿದ್ದರು. ಮಧುಕಾರ್ತಿಕ್-ಪ್ರಜ್ವಲ್ ಜಂಟಿಯಾಗಿ ಜಿಆರ್ ಫಿಲಂಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ತುಳಜಾ ಬಾಯಿ, ರೂಪ.ಎಸ್.ದೊಡ್ಮನಿ, ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ನಂತರ ತಂಡವು ಮಾಧ್ಯಮದ ಎದುರು ಹಾಜರಾಗಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿತು.
ಚಿತ್ರಕಥೆ-ಸಾಹಿತ್ಯ ಮತ್ತು ನಿರ್ದೇಶನ ಮಾಡುತ್ತಿರುವ ಬಿ.ಎ.ಪುರುಷೋತ್ತಮ್ ಓಂಕಾರ್ ಹೇಳುವಂತೆ, 27 ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದು, ಈ ಪೈಕಿ 23 ಪೌರಾಣಿಕ, 4 ಕಮರ್ಷಿಯಲ್ ಆಗಿರುತ್ತದೆ. ಸಿನಿಮಾವನ್ನು ವಿನೂತನ ರೀತಿಯಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಶಿವ ಪುರಾಣದಲ್ಲಿ ಗಂಗೆ ಗೌರಿ ಸಂಬಂಧ ಏನು? ಗಂಗೆ ಯಾಕೆ ಶಿವನ ತಲೆ ಮೇಲೆ ಇರುತ್ತಾಳೆ? ಗೌರಿ ಯಾಕೆ ಶಿವನ ತೊಡೆ ಮೇಲೆ ಕೂತಿರುತ್ತಾಳೆ? ಇದಕ್ಕೆ ಕಾರಣವೇನು? ಇಬ್ಬರನ್ನು ಶಿವನು ಯಾವ ರೀತಿ ಸಂಭಾಳಿಸುತ್ತಾನೆ.
ಇದರಲ್ಲಿ ಕೈಲಾಸವನ್ನು ಸೌಹಾರ್ದತೆಗೆ ಹೋಲಿಸಲಾಗಿದೆ. ಹುಲಿ, ನಂದಿ, ಹಾವು, ನವಿಲು ಹಾಗೂ ಇಲಿ. ಒಂದಕ್ಕೊಂದು ವೈರತ್ವ ಇದ್ದು, ಒಂದನ್ನು ಕಂಡರೆ ಮತ್ತೋಂದಕ್ಕೆ ಆಗುವುದಿಲ್ಲ. ಆದರೂ ಇವುಗಳು ಒಟ್ಟಿಗೆ ಇರುತ್ತವೆ. ಅದಕ್ಕೆ ಸೌಹಾರ್ದತೆ ಅಂತ ಕರೆಯಲಾಗುತ್ತದೆ. ಇಂತಹ ಅಂಶಗಳನ್ನು ಇಟ್ಟುಕೊಂಡು ಸನ್ನಿವೇಶಗಳನ್ನು ಹಣೆಯಲಾಗಿದೆ. ಜಗತ್ ರಕ್ಷಕನಾದ ಪರಮೇಶ್ವರನಿಗೂ ವಿಧಿಯ ಕಾಟ ತಪ್ಪಿಲ್ಲ. ಶನಿದೇವನಿಂದ ಮೂವರು ಕಷ್ಟ ಅನುಭವಿಸುತ್ತಾರೆ. ಇವೆಲ್ಲಾ ಅಂಶಗಳನ್ನು ತಿಳಿಯಲು ಚಿತ್ರ ನೋಡಬೇಕು. ಸ್ವರ್ಗಲೋಕ, ಬ್ರಹ್ಮಲೋಕ ದೃಶ್ಯಗಳು ಬರುವುದರಿಂದ ಸೆಟ್, ಗ್ರಾಫಿಕ್ಸ್ ಬಳಸಬೇಕಾಗಿದೆ. ಮೈಸೂರು, ಶ್ರೀರಂಗಪಟ್ಟಣ, ಊಟಿ ಸುಂದರ ತಾಣಗಳಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ ಎಂಬುದಾಗಿ ನಿರ್ದೇಶಕರು ವಿವರ ನೀಡಿದರು.
ಮೂರು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡು, ಮಧ್ಯೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಗಣೇಶ್ ರಾವ್ ಕೇಸರ್ಕರ್ ಮಾತನಾಡಿ, ಇದು ನನಗೆ 333ನೇ ಚಿತ್ರವಾಗಿದೆ. ’ಸಿದ್ದರಾಮೇಶ್ವರ’ ಚಿತ್ರದಲ್ಲಿ ಈಶ್ವರನ ಪಾತ್ರ ಮಾಡುತ್ತಿರುವಾಗ ನಡೆದ ಘಟನೆಯನ್ನು ನೆನಪು ಮಾಡಿಕೊಂಡರು. ನಂತರ ಮಾತು ಮುಂದುವರೆಸುತ್ತಾ, ಸನ್ನಿವೇಶಕ್ಕೆ ಅಗತ್ಯವಿರುವುದರಿಂದ ತಾಂಡವನೃತ್ಯ ಕಲಿಯುತ್ತಿದ್ದೇನೆ. ಈ ಹಿಂದೆ ಸಿನಿಮಾದಲ್ಲಿ ಶಿವನಾಗಿ ಕಾಣಿಸಿಕೊಂಡಿದ್ದೆ. ಪಾತ್ರವು ತುಂಬಾ ಒಪ್ಪುತ್ತದೆ. ಯಾಕೆ ಇದನ್ನೆ ದೊಡ್ಡದಾಗಿ ಮಾಡಬಾರದು ಎಂದು ಗೆಳೆಯ ಹೇಳಿದ್ದೆ, ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂದರು.
ರಂಗಭೂಮಿ ನಟಿ, ಎಂಕಾಂ ಪದವೀದರೆ, ಎಸ್‌ಐ ಹುದ್ದೆಗೆ ಆಕಾಂಕ್ಷಿಯಾಗಿರುವ, ರಾಣೆಬೆನ್ನೂರಿನ ರೂಪಾಲಿ ಮೂರು ಶೇಡ್ಗಳಲ್ಲಿ ಅಂದರೆ ಗೌರಿ, ಪಾರ್ವತಿ, ದಾಕ್ಷಾಯಿಣಿ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ಲಾಮರ್ ರೋಲ್ದಲ್ಲಿ ಮಿಂಚಿದ್ದ ನಿಖಿತಾಸ್ವಾಮಿಗೆ ಗಂಗೆಯಾಗಿ ನೂತನ ಅನುಭವ. ನಾರದನಾಗಿ ಜಯಸಿಂಹಮುಸೂರಿ, ದಕ್ಷಬ್ರಹ್ಮನಾಗಿ ಶೋಭರಾಜ್, ಶನಿದೇವರಾಗಿ ಎಸ್ಕಾರ್ಟ್ ಶ್ರೀನಿವಾಸ್, ಬ್ರಹ್ಮನಾಗಿ ಶ್ರೀನಿವಾಸಗೌಡ, ಗೌರಿ ತಂದೆಯಾಗಿ ಬಸವರಾಜದೇಸಾಯಿ. ಉಳಿದಂತೆ ಮಾಲಾಡಿಂಗ್ರಿನಾಗರಾಜ್, ಧನಲಕ್ಷಿ, ಜಿಮ್ಶಿವು, ಋತುಸ್ಪರ್ಶ, ಗೀತಾ, ರಕ್ಷಾಗೌಡ ಬಣ್ಣ ಹಚ್ಚುತ್ತಿದ್ದಾರೆ. ನಾಲ್ಕು ಹಾಡುಗಳಿಗೆ ರಾಜ್ಭಾಸ್ಕರ್ ಸಂಗೀತ, ಗೌರಿವೆಂಕಟೇಶ್ ಛಾಯಾಗ್ರಹಣ, ಸಂಕಲನ-ಗ್ರಾಫಿಕ್ಸ್-ಡಿಐ ಅನಿಲ್ ಅವರದಾಗಿದೆ.