Ranaksha.Film News

Saturday, December 30, 2023

391

 

ಸಸ್ಪೆನ್ಸ್, ಥ್ರಿಲ್ಲರ್ "ರಣಾಕ್ಷ" ಫಸ್ಟ್ ಲುಕ್,

 

ಕಾಮಿಡಿಯಿಂದ ಥ್ರಿಲ್ಲರ್ ನತ್ತ

 ಸೀರುಂಡೆ ರಘು

  

  ಈ‌ ಹಿಂದೆ ಮರೆಯದೆ ಕ್ಷಮಿಸು ಎಂಬ ಚಿತ್ರ ನಿರ್ದೇಶಿಸಿದ್ದ ಕೆ.ರಾಘವ ಅವರ ನಿರ್ದೇಶನದ ಮತ್ತೊಂದು ಚಿತ್ರ ರಣಾಕ್ಷ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಚಲನಚಿತ್ರ  ವಾಣಿಜ್ಯಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಮೊದಲನೋಟಕ್ಕೆ ಚಾಲನೆ ನೀಡಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕಿರುತೆರೆಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು, ರಕ್ಷಾ ಹನುಮಂತು ಹಾಗೂ ರೋಹಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆವಿಆರ್. ಪಿಕ್ಚರ್ಸ್ ಮೂಲಕ ಹೆಚ್.ಎಸ್.ರಾಮು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶೋಭಾ ಶಿವಾಜಿರಾವ್ ಸಹ ನಿರ್ಮಾಪಕರಾಗಿದ್ದಾರೆ.

     ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ರಾಘವ ಚಿತ್ರದ ಕುರಿತಂತೆ ಮಾತನಾಡುತ್ತ ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ, ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮಾಸ್ ಎಂಟರ್ಟೈನರ್ ಚಿತ್ರ. ಮೊದಲ ಬಾರಿಗೆ ರಘು ಕಾಮಿಡಿ ಬಿಟ್ಟು, ಕ್ಲಾಸ್, ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ರಕ್ಷಾ ಪಾತ್ರ ವಿಶೇಷವಾಗಿದೆ. ಇಡೀ ಕಥೆ ಒಬ್ಬ ಹುಡುಗಿ ಮೇಲೆ ನಿಂತಿರುತ್ತೆ. ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸುತ್ತಮುತ್ತ ಶೂಟಿಂಗ್ ನಡೆಸಿದ್ದೇವೆ. ಚಿತ್ರದಲ್ಲಿ 3 ಹಾಡು, 3 ಸಾಹಸ ದೃಶ್ಯಗಳಿವೆ. ವಿಶಾಲ್ ಆಲಾಪ್ ಮ್ಯೂಸಿಕ್, ದೀಪಕ್ ಕುಮಾರ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಚಿತ್ರವೀಗ ರಿರೆಕಾರ್ಡಿಂಗ್ ಹಂತದಲ್ಲಿದ್ದು, ಫೆಬ್ರವರಿಗೆ ರಿಲೀಸ್ ಮಾಡೋ ಪ್ಲಾನಿದೆ. ಸದ್ಯದಲ್ಲೇ ಆಡಿಯೋ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

   ನಿರ್ಮಾಪಕ ರಾಮು ಮಾತನಾಡುತ್ತ ನಿರ್ದೇಶಕರು ಕಥೆ ಹೇಳಿದ ಶೈಲಿ, ಕಾನ್ಸೆಪ್ಟ್ ನನಗೆ ತುಂಬಾ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ. ನನಗೆ ತಂದೆ ಸ್ಥಾನದಲ್ಲಿ ನಿಂತು ಹನುಮಂತರಾಯಪ್ಪ ಅವರು ಸಪೋರ್ಟ್ ಮಾಡಿದರು. ತುಂಬಾ ಪ್ರೀತಿಯಿಂದ ಈ ಸಿನಿಮಾ ಮಾಡಿದ್ದೇವೆ. ಜನತೆ ನಮ್ಮನ್ನು ಗೆಲ್ಲಿಸಿದರೆ ಮತ್ತಷ್ಟು ಹೊಸತನದ ಸಿನಿಮಾಗಳನ್ನು ಮಾಡಲು ಸಹಾಯವಾಗುತ್ತದೆ ಎಂದರು.

ನಾಯಕ ಸೀರುಂಡೆ ರಘು ಮಾತನಾಡುತ್ತ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸೈಡ್ ರೋಲ್ ಮಾಡಿದ್ದೆ. ಮೊದಲಬಾರಿಗೆ ಲೀಡ್ ರೋಲ್ ಮಾಡ್ತಿರುವೆ. 4 ಜನ ಸ್ನೇಹಿತರ ಜೊತೆ ಸಾಗುವ ಪಾತ್ರ ಎಂದರು.

ನಾಯಕಿ ರಕ್ಷಾ ಮಾತನಾಡಿ ನನ್ನದು ಮುಗ್ಧ ಹಳ್ಳಿ ಹುಡುಗಿಯ ಪಾತ್ರೆ ಎಂದರೆ, ಮತ್ತೊಬ್ಬ ನಟಿ ರೋಹಿ ಮಾತನಾಡಿ ಮೊದಲಬಾರಿಗೆ  ಕ್ಯಾಮೆರಾ ಎದುರಿಸಿರುವುದಾಗಿ ಹೇಳಿದರು.

 ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ ನಿರ್ದೇಶಕರು ಚಿತ್ರಕ್ಕೆ ತುಂಬಾ ಎಫರ್ಟ್ ಹಾಕಿರುವುದು ತೆರೆಮೇಲೆ ಕಾಣಿಸುತ್ತೆ. ಕಲಾವಿದರೂ ಅದಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ ಎಂದರು. ಛಾಯಾಗ್ರಾಹಕ ದೀಪಕ್, ಉಮೇಶ್ ಬಣಕಾರ್, ಹನುಮಂತರಾಯಪ್ಪ, ವೆಂಕಟೇಶ್ ಚಿತ್ರದ ಕುರಿತಂತೆ ಮಾತನಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,