*ಗಿರೀಶ್ ಕಾಸರವಳ್ಳಿ - ಜೋಗಿ ಅವರಿಂದ ಬಿಡುಗಡೆಯಾಯಿತು "ಕೋಳಿ ಎಸ್ರು" ಹಾಗೂ "ಹದಿನೇಳೆಂಟು" ಚಿತ್ರಗಳ ಟ್ರೇಲರ್* .
*ಪ್ರಶಸ್ತಿ ವಿಜೇತ ಈ ಎರಡು ಚಿತ್ರಗಳು ಜನವರಿ 26 ರಂದು ತೆರೆಗೆ*
ಚಂಪಾ.ಪಿ. ಶೆಟ್ಟಿ ನಿರ್ದೇಶನದ "ಕೋಳಿ ಎಸ್ರು" ಹಾಗೂ ಪೃಥ್ವಿ ಕೊಣನೂರು ನಿರ್ದೇಶಿಸಿರುವ "ಹದಿನೇಳೆಂಟು" ಚಿತ್ರಗಳ ಟ್ರೇಲರ್ ಬಿಡುಗಡೆಯಾಗಿದೆ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು "ಕೋಳಿ ಎಸ್ರು" ಚಿತ್ರದ ಟ್ರೇಲರ್ ಅನ್ನು ಹಾಗೂ ಜನಪ್ರಿಯ ಲೇಖಕ & ಪತ್ರಕರ್ತ ಜೋಗಿ ಅವರು "ಹದಿನೇಳೆಂಟು" ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಚಂಪಾ ಶೆಟ್ಟಿ ಅವರು ಹಿಂದೆ “ಅಮ್ಮಚ್ಚಿಯೆಂಬ ನೆನಪು” ಚಿತ್ರವನ್ನು, ಪೃಥ್ವಿ ಕೋಣನೂರು ಅವರು ರೈಲ್ವೇ ಚಿಲ್ಡ್ರನ್” ಹಾಗೂ “ಪಿಂಕಿ ಎಲ್ಲಿ ” ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ಇವರಿಬ್ಬರು ತಮ್ಮ ನಿರ್ದೇಶನದ "ಕೋಳಿ ಎಸ್ರು" ಹಾಗೂ "ಹದಿನೇಳೆಂಟು" ಚಿತ್ರಗಳನ್ನು ಜನವರಿ 26 ರಂದು ತೆರೆಗೆ ತರುತ್ತಿದ್ದಾರೆ. ಎರಡು ತಂಡಗಳು ಸೇರಿ ಬಿಡುಗಡೆಗೆ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಆ ಕುರಿತು ನಿರ್ದೇಶಕ ದ್ವಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
‘ಕೋಳಿ ಎಸ್ರು’ ಮತ್ತು ‘ಹದಿನೇಳೆಂಟು’ ಚಲನಚಿತ್ರಗಳು, “ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “MAMI”, “ಹಾಂಗ್ ಕಾಂಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “ಕೋಲ್ಕತ್ತಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, , “ಕೇರಳದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “TIFF ಕಿಡ್ಸ್”, “Zlin ಚಲನಚಿತ್ರೋತ್ಸವ”, "ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್" “IFFI ಗೋವಾ”, “ಪ್ರೇಗ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”, “ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ “ "ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್" ಮುಂತಾದ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆ ಆಗಿದ್ದು ಮಾತ್ರವಲ್ಲ ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ನಾಮ ನಿರ್ದೇಶನ ಗೊಂಡು ಸುಮಾರು 24ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿವೆ. ಇಂತಹ ಸದಭಿರುಚಿಯ ಚಿತ್ರಗಳು ಜನವರಿ 26 ರಂದು ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ಸಲುವಾಗಿ ನಾವು ಎರಡು ತಂಡದವರು ಸೇರಿ ಹೊಸ ಯೋಜನೆ ಹಾಕಿಕೊಂಡಿದ್ದೇವೆ. ಪರಸ್ಪರ.ಲೈವ್ ಎಂಬ ವೆಬ್ ಸೈಟ್ ಮೂಲಕ ಎರಡು ಚಿತ್ರಗಳ ಟಕೇಟ್ ಗಳನ್ನು ಮಾರಾಟ ಮಾಡಲು ಆರಂಭಿಸಿದ್ದೇವೆ. 400 ರೂಪಾಯಿ ಪಾವತಿಸಿ ಎರಡು ಚಿತ್ರಗಳ ಒಂದೊಂದು ಟಿಕೇಟ್ ಪಡೆಯಬಹುದು. ಒಂದಕ್ಕಿಂತ ಹೆಚ್ಚು ಟಿಕೆಟ್ ಗಳನ್ನೂ ಪಡೆಯಬಹುದು. ಈಗಿಂದಲೇ ಬುಕಿಂಗ್ ಓಪನ್ ಇದೆ. ನೀವು ಟಿಕೇಟ್ ಬುಕ್ ಮಾಡಿಕೊಂಡಿರಬಹುದು. ಬಿಡುಗಡೆಯ ಹಿಂದಿನ ದಿನ ನಿಮಗೆ ಯಾವ ಮಲ್ಟಿಪ್ಲೆಕ್ಸ್ ಅನುಕೂಲವಾಗುತ್ತದೆಯೋ ಅಲ್ಲಿ ಟಿಕೇಟ್ ವ್ಯವಸ್ಥೆ ಮಾಡಿಕೊಡುತ್ತೇವೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದು ನಿರ್ದೇಶಕರಾದ ಚಂಪಾ ಶೆಟ್ಟಿ ಹಾಗೂ ಪೃಥ್ವಿ ಕೋಣನೂರು ತಿಳಿಸಿದರು.
"ಕೋಳಿ ಎಸ್ರು" ಚಿತ್ರದಲ್ಲಿ ಅಭಿನಯಿಸಿರುವ ಅಕ್ಷತ ಪಾಂಡವಪುರ, ಅಪೇಕ್ಷ ನಾಗರಾಜ್ ಹಾಗೂ "ಹದಿನೇಳೆಂಟು" ಚಿತ್ರದಲ್ಲಿ ನಟಿಸಿರುವ ನೀರಜ್ ಮ್ಯಾಥ್ಯೂ, ಶೆರ್ಲಿನ್ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು.