Yuva.Film News

Friday, March 15, 2024

146

 

*ಹೊಂಬಾಳೆ ಫಿಲಂಸ್ ನಿರ್ಮಾಣದ "ಯುವ" ಚಿತ್ರದ "ಅಪ್ಪುಗೆ" ಹಾಡು ಪುನೀತ್ ರಾಜಕುಮಾರ್ ಪುತ್ರಿ ವಂದಿತ ಅವರಿಂದ ಬಿಡುಗಡೆ‌* .

 

 ಹೊಂಬಾಳೆ ಫಿಲಂಸ್ ಲಾಂಛನಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿರುವ, ಸಂತೋಷ್ ಆನಂದರಾಮ್ ನಿರ್ದೇಶನದ ಹಾಗೂ ಯುವ ರಾಜಕುಮಾರ್ ನಾಯಕನಾಗಿ ನಟಿಸಿರುವ "ಯುವ" ಚಿತ್ರದ "ಅಪ್ಪುಗೆ" ಹಾಡು ಇತ್ತೀಚಿಗೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಪುನೀತ್ ರಾಜಕುಮಾರ್ ಅವರ ದ್ವಿತೀಯ ಪುತ್ರಿ ವಂದಿತ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.     

 

"ಯವ", ಕೌಟುಂಬಿಕ ಹಾಗೂ ಆಕ್ಷನ್ ಕಥಾಹಂದರ ಹೊಂದಿರುವ ಸಿನಿಮಾ. ತಂದೆ - ಮಗನ ಬಾಂಧವ್ಯದ ಚಿತ್ರವೂ ಹೌದು. ಒಂದು ಕುಟುಂಬಕ್ಕಾಗಿ ಅಪ್ಪ ಏನೆಲ್ಲಾ ಮಾಡುತ್ತಾನೆ. ಆದರೆ ಆತ ಯಾರಿಂದಲೂ ಏನನ್ನು ನಿರೀಕ್ಷಿಸುವುದಿಲ್ಲ. ಕುಟುಂಬದಲ್ಲಿ ಅಪ್ಪನ ಪಾತ್ರ ಬಹಳ ದೊಡ್ಡದು. ಅಂತಹ ಅಪ್ಪನ ಗುಣಗಳನ್ನು ವರ್ಣಿಸುವ ನಮ್ಮ ಚಿತ್ರದ "ಅಪ್ಪುಗೆ" ಹಾಡು ಬಿಡುಗಡೆಯಾಗಿದೆ. ಈ ಹಾಡನ್ನು ನಾನೇ ಬರೆದಿದ್ದೇನೆ. ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಅಪ್ಪನ ಕುರಿತಾದ ಹಾಡಾಗಿರುವುದರಿಂದ ಈ ಹಾಡನ್ನು ವಂದಿತ ಅವರಿಂದ ಬಿಡುಗಡೆ ಮಾಡಿಸೋಣ ಅಂದುಕೊಂಡೆವು‌. ಹಾಡು ಬಿಡುಗಡೆ ಮಾಡಿಕೊಟ್ಟ ವಂದಿತ ಅವರಿಗೆ ಧನ್ಯವಾದ. ಇನ್ನು, ಮಾರ್ಚ್ 21 ರಂದು "ಯುವ" ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ. ಮಾರ್ಚ್ 23 ರಂದು ಹೊಸಪೇಟೆಯಲ್ಲಿ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಚಿತ್ರ ಮಾರ್ಚ್ 29ಕ್ಕೆ ತೆರೆಗೆ ಬರಲಿದೆ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ತಿಳಿಸಿದರು.

ಈ ಚಿತ್ರದ ಕಥೆಗೂ ಹಾಗೂ ನನ್ನ ಜೀವನದ ಕಥೆಗೂ ಸುಮಾರು ವಿಷಯಗಳು ಹೋಲುತ್ತದೆ ಎಂದು ಮಾತು ಆರಂಭಿಸಿದ ನಾಯಕ ಯುವ ರಾಜಕುಮಾರ್, ತಂದೆ - ಮಗನ ಸಂಬಂಧ ಬೇರೆ ರೀತಿಯದೆ ಸಂಬಂಧ. ತಂದೆಯ ಜವಾಬ್ದಾರಿ ನಮಗೆ ಅರ್ಥವಾಗುವುದೇ ಇಲ್ಲ.  ನಾವು ದುಡಿಯುವುದಕ್ಕೆ ಶುರು ಮಾಡಿದಾಗ ನಮಗೆ ತಂದೆಯ ಜವಾಬ್ದಾರಿ ತಿಳಿಯುತ್ತಾ ಹೋಗುತ್ತದೆ. ಈ ಚಿತ್ರದಲ್ಲಿ ಅಚ್ಯುತಕುಮಾರ್ ಅವರು ನನ್ನ ತಂದೆ ಪಾತ್ರ ಮಾಡಿದ್ದಾರೆ‌. ಅವರೊಂದಿಗೆ ಕೆಲವು ಸನ್ನಿವೇಶಗಳಲ್ಲಿ ನಟಿಸಬೇಕಾದರೆ ನನಗೆ ನಮ್ಮ ಅಪ್ಪ ಕಣ್ಣ ಮುಂದೆ ಬರುತ್ತಿದ್ದರು. ಅಂತಹ ಅಪ್ಪ - ಮಗನ ನಡುವಿನ ಸಂಬಂಧವನ್ನು ಬಣ್ಣಿಸುವ ಈ "ಅಪ್ಪುಗೆ" ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತದೆ ಎಂದರು.

 

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಎರಡು ಹಾಡುಗಳು ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. "ಅಪ್ಪುಗೆ" ಮೂರನೇ ಹಾಡಾಗಿ ಬಿಡುಗಡೆಯಾಗಿದೆ. ಅಪ್ಪ - ಮಗನ ಸಂಬಂಧದ ಈ ಹಾಡು ತುಂಬಾ ಚೆನ್ನಾಗಿದೆ. ಈ ಹಾಡು ಕೇಳಿದಾಗಲ್ಲೆಲ್ಲಾ ನನಗೆ ನಮ್ಮ ತಂದೆ ನೆನಪಾಗುತ್ತಾರೆ ಎಂದು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಭಾವುಕರಾದರು. 

 

"ಯುವ" ಚಿತ್ರದ ಆಡಿಯೋ ಹಕ್ಕನ್ನು ನಮ್ಮ ಆನಂದ್ ಆಡಿಯೋ ಸಂಸ್ಥೆಗೆ ನೀಡಿರುವುದಕ್ಕೆ ಹೊಂಬಾಳೆ ಫಿಲಂಸ್ ಸಂಸ್ಥೆಗೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಸಂಸ್ಥೆ ಆರಂಭವಾಗಿ 25 ವರ್ಷಗಳಾಗುತ್ತಿದೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಆನಂದ್ ಆಡಿಯೋ ಶ್ಯಾಮ್.

 

ಛಾಯಾಗ್ರಾಹಕ ಶ್ರೀಶ ಕುದುವಳ್ಳಿ, ಸಂಕಲನಕಾರ ಆಶಿಕ್ ಕುಸುಗೊಳ್ಳಿ ಹಾಗೂ ಕಾರ್ಯಕಾರಿ ನಿರ್ಮಾಪಕ ಯೋಗಿ ಜಿ ರಾಜ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. .

Copyright@2018 Chitralahari | All Rights Reserved. Photo Journalist K.S. Mokshendra,