*ಜಾಗತಿಕ ತಾಪಮಾನದ ಕುರಿತು ಜಾಗೃತಿ ಮೂಡಿಸುವ "ಬೆಳಕೆ"* .
*ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿಗೆ ದನಿಯಾಗಿದ್ದಾರೆ ಆದರ್ಶ ಅಯ್ಯಂಗಾರ್* .
ಈಗಷ್ಟೇ ಬೇಸಿಗೆ ಆರಂಭ. ಅಗಲೇ ಎಲ್ಲೆಡೆ ನೀರಿಗೆ ಹಾಹಾಕಾರ. ಇದಕ್ಕೆ ಕಾರಣ ಪರಿಸರ ನಾಶ ಹಾಗೂ ಜಾಗತಿಕ ತಾಪಮಾನದ ಏರಿಕೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ "ಬೆಳಕೆ" ಹಾಡು ಬಿಡುಗಡೆಯಾಗಿದೆ. "ಹೊಂಬಣ್ಣ" ಚಿತ್ರದ ಖ್ಯಾತಿಯ ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿರುವ ಈ ಹಾಡಿಗೆ ಆದರ್ಶ ಅಯ್ಯಂಗಾರ್, ದನಿಯಾಗುವುದರ ಜೊತೆಗೆ ನಟನೆಯನ್ನು ಮಾಡಿದ್ದಾರೆ. ಈ ಹಾಡಿನ ಕುರಿತು ಚಿತ್ರತಂಡದವರು ಹೇಳಿದ್ದು ಹೀಗೆ.
ನಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ಈಗಾಗಲೇ ಜನರಿಗೆ ಉತ್ತಮ ಸಂದೇಶ ನೀಡುವ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. "ತಿಮ್ಮನ ಮೊಟ್ಟೆಗಳು" ಚಿತ್ರ ಸಹ ನಿರ್ಮಾಣವಾಗಿ, ಬಿಡುಗಡೆ ಹಂತದಲ್ಲಿದೆ. ಮತ್ತೊಂದು ಉತ್ತಮ ಸಂದೇಶವುಳ್ಳ ಹಾಡನ್ನು ನಿರ್ಮಿಸುವ ಸಲುವಾಗಿ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರ ಜೊತೆ ಚರ್ಚಿಸಿದಾಗ ಅವರು ಜಾಗತಿಕ ತಾಪಮಾನದ ಕುರಿತು ಜನರಿಗೆ ಜಾಗೃತಿ ಮೂಡಿಸುವ ಈ ಹಾಡನ್ನು ಮಡೋಣ ಎಂದು ಸಲಹೆ ನೀಡಿದರು. ಜನರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ "ಬೆಳಕೆ" ಹಾಡನ್ನು ನಿರ್ಮಾಣ ಮಾಡಿದ್ದೇವೆ. ನಾನು ಹಾಡುವುದರೊಟ್ಟಿಗೆ ಅಭಿನಯವನ್ನು ಮಾಡಿದ್ದೇನೆ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿದ್ದಾರೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣದಲ್ಲಿ ಹಾಡು ಸುಂದರವಾಗಿ ಮೂಡಿಬಂದಿದೆ. ಸುಧೀರ್ ಎಸ್ ಜೆ ಈ ಹಾಡಿನ ಸಂಕಲನಕಾರರು ಎಂದರು ಗಾಯಕ ಹಾಗೂ ನಾಯಕ ಆದರ್ಶ ಅಯ್ಯಂಗಾರ್.
ಮುಂಚೆ ಬೆಂಗಳೂರಿನಲ್ಲಿ ತಾಪಮಾನ ಕಡಿಮೆ ಇರುತ್ತಿತ್ತು. ಈಗ ಗಮಿನಿಸಿದರೆ ಬೆಂಗಳೂರು, ಮಲೆನಾಡು ಹಾಗೂ ಉತ್ತರ ಕರ್ನಾಟಕ ಎಲ್ಲಾ ಕಡೆ ಹೆಚ್ಚು ಕಡಿಮೆ ಒಂದೇ ತಾಪಮಾನವಿರುತ್ತದೆ. ಇದಕ್ಕೆ ಕಾರಣ ಪರಿಸರ ನಾಶ. ಗಿಡ ಬೆಳಸುವುದು ಹಾಗೂ ಈಗಿರುವ ಗಿಡಗಳನ್ನು ಉಳಿಸುವುದೆ ಇದಕ್ಕೆ ಪರಿಹಾರ. ಇಲ್ಲದಿದ್ದರೆ ಮುಂದೆ ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ವಿಷಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಹಾಡೊಂದನ್ನು ಮಾಡೋಣ ಎಂದು ನಾನು, ಆದರ್ಶ ಅಯ್ಯಂಗಾರ್ ಅವರಿಗೆ ಹೇಳಿದಾಗ ಸಂತೋಷದಿಂದ ಒಪ್ಪಿದರು. ಈ ಹಾಡು ಈಗ ನಿಮ್ಮ ಮುಂದೆ ಇದೆ. ಎಲ್ಲರೂ ನೋಡಿ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಿಳಿಸಿದರು.
ನಾನು ಸಾಕಷ್ಟು ಚಿತ್ರಗಳಿಗೆ ಹಾಡು ಬರೆಯುತ್ತಿದ್ದೇನೆ. ಆದರೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಈ ಹಾಡನ್ನು ಬರೆಯಲು ತುಂಬಾ ಸಂತೋಷವಾಯಿತು. ತುಂಬಾ ಬಿಸಿಲಿದೆ. ದಯವಿಟ್ಟು ಎಲ್ಲರೂ ತಮ್ಮ ಮನೆಯ ಮಹಡಿಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಎಂದರು ಗೀತರಚನೆಕಾರ ಪ್ರಮೋದ್ ಮರವಂತೆ. ಛಾಯಾಗ್ರಾಹಕ ಗುರುಪ್ರಸಾದ್ ನಾರ್ನಾಡ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.