ಯುವ ಅಪ್ಪ ಮಗನ ಬಾಂಧವ್ಯ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಣ್ಣನ ಮಗ ಅಂದರೆ ರಾಘವೇಂದ್ರರಾಜ್‌ಕುಮಾರ್ ದ್ವಿತೀಯ ಪುತ್ರ ಯುವರಾಜ್‌ಕುಮಾರ್ ಅಭಿನಯಿಸಿರುವ ‘ಯುವ’ ಚಿತ್ರವು ಮಾರ್ಚ್ ೨೯ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅಲ್ಲದೆ ಇದೇ ೨೩ರಂದು ಹೊಸಪೇಟೆಯಲ್ಲಿರುವ ಪುನೀತ್‌ರಾಜ್‌ಕುಮಾರ್ ಮೈದಾನದಲ್ಲಿ ಪ್ರಿ ರಿಲೀಸ್ ಇವೆಂಟ್ ನಡೆಯಲಿದೆ. ಇದೆಲ್ಲದರ ನಡುವೆ ಮೊನ್ನೆ ವಿಶೇಷವಾಗಿ ಮಾಧ್ಯಮದವರಿಗೆಂದೆ ಸುದ್ದಿಗೋಷ್ಟಿಯನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ಏರ್ಪಾಟು ಮಾಡಿದ್ದರು. ನಾಯಕ ಯುವ ರಾಜ್‌ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದರಾಮ್ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡರು.
ಯುವ ರಾಜ್‌ಕುಮಾರ್ ಮಾತನಾಡಿ ಕುಟುಂಬದಲ್ಲಿ ತಾತ, ದೊಡ್ಡಪ್ಪ, ಚಿಕ್ಕಪ್ಪ, ಅಪ್ಪ ಸೇರಿದಂತೆ ಎಲ್ಲರೂ ಚಿತ್ರರಂಗದಲ್ಲಿ ಇರುವುದರಿಂದ ಸಹಜವಾಗಿ ನನಗೂ ಬಣ್ಣದಲೋಕದ ಮೇಲೆ ಆಸೆ ಚಿಗುರಿತ್ತು. ಅದರಲ್ಲೂ ಸಂತೋಷ್‌ಆನಂದರಾಮ್ ಅವರೊಂದಿಗೆ ಕೆಲಸ ಮಾಡಬೇಕೆಂಬ ಬಯಕೆ ಇತ್ತು. ಚಿಕ್ಕಪ್ಪನ ‘ಯುವರತ್ನ’ ಟೈಂದಲ್ಲೆ ನನಗೊಂದು ಚಿತ್ರ ಮಾಡಿ ಎಂದು ಕೇಳಿಕೊಂಡಿದ್ದೆ. ಚಿಕ್ಕಪ್ಪನಿಂದ ಸಾಕಷ್ಟು ಕಲಿತುಕೊಂಡಿದ್ದೇನೆ. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಚಿತ್ರದಲ್ಲಿ ಎಲ್ಲಾ ರೀತಿಯ ಅಂಶಗಳು ಇರಲಿದೆ. ಎಮೋಶನ್ಸ್, ಫ್ಯಾಮಿಲಿ ಬಾಂಡಿಂಗ್, ಆಕ್ಷನ್ ಇದೆ. ವಿರಾಮದ ವರೆಗೂ ಕಾಲೇಜು ವಿದ್ಯಾರ್ಥಿ, ನಂತರ ಡಿಲಿವರಿ ಬಾಯ್ ಆಗಿ ಕಾಣಿಸಿಕೊಂಡಿದ್ದೇನೆ. ಅನುಭವಿ ಕಲಾವಿದರೊಂದಿಗೆ ನಟಿಸಿದ್ದು ಅನುಕೂಲವಾಯಿತು. ತನ್ನ ಕುಟಂಬಕ್ಕೆ ಕಂಟಕರಾಗೋ ವ್ಯಕ್ತಿಗಳ ಮೇಲೆ ನನ್ನ ಹೋರಾಟ ಹೇಗಿರುತ್ತೆ ಎಂಬುದನ್ನು ನೀವು ನೋಡಿ ಹೇಳಬೇಕು ಎಂದರು.
ಮಗನನ್ನು ಅರ್ಥ ಮಾಡಿಕೊಳ್ಳದ ತಂದೆ, ಅಪ್ಪನನ್ನು ಅರ್ಥ ಮಾಡಿಕೊಳ್ಳದ ಮಗ. ಇದರಲ್ಲಿ ಅಪ್ಪ ಮಗನ ಬಾಂಧವ್ಯವನ್ನು ಹೆಚ್ಚಾಗಿ ತೋರಿಸಲಾಗಿದೆ. ಎಲ್ಲರ ಮನೆಯಲ್ಲಿ ನಡೆಯುವ ಘಟನೆಗಳನ್ನು ಚಿತ್ರರೂಪಕ್ಕೆ ಬಳಸಲಾಗಿದೆ. ನೋಡುಗರಿಗೆ ನಮ್ಮ ಮನೆಯಲ್ಲಿ ನಡೆದುದಲ್ಲ ಅನಿಸುತ್ತದೆ. ಒಂದು ಹಂತದಲ್ಲಿ ಇವರಿಬ್ಬರ ಸಂಘರ್ಷ ಬರುತ್ತದೆ. ಕೊನೆಗೆ ಜ್ಘಾನೋದಯವಾಗುತ್ತದೆ. ಕಿಶೋರ್, ಅಚ್ಯುತಕುಮಾರ್, ಸುಧಾರಾಣಿ, ಹಿತಾಚಂದ್ರಶೇಖರ್ ಸೇರಿದಂತೆ ಅರವತ್ತಕ್ಕೂ ಹೆಚ್ಚು ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ನಿರ್ಮಾಪಕರು ಯುವನನ್ನು ಲಾಂಚ್ ಮಾಡಬೇಕು ಅಂದಾಗ ಇದೇ ಕಥೆಯನ್ನು ಹೇಳಿದೆ. ಅವರು ಒಪ್ಪಿಕೊಂಡಿದ್ದಕ್ಕೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಸಿನಿಮಾ ಎಂಡ್ ಅಂತ ಇರೋಲ್ಲ. ಸಿನಿಮ್ಯಾಟಿಕ್ ಎಂಡ್ ಇದೆ. ಮುಂದೆ ನೋಡೋಣ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಆನಂದರಾಮ್.