*ಹೊಸಪೇಟೆಯಲ್ಲಿ ಅದ್ದೂರಿಯಾಗಿ ನೆರವೇರಿತು ಹೊಂಬಾಳೆ ಫಿಲಂಸ್ ನಿರ್ಮಾಣದ "ಯುವ" ಚಿತ್ರದ ಪ್ರೀ ರಿಲೀಸ್ ಇವೆಂಟ್* .
*ಯುವ ರಾಜಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ಸಂತೋಷ್ ಆನಂದರಾಮ್ ನಿರ್ದೇಶನ* .
"ರಾಜಕುಮಾರ", "ಕೆಜಿಎಫ್", " ಕಾಂತಾರ" ದಂತಹ ಜನಪ್ರಿಯ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರ್ ಅವರು ನಿರ್ಮಿಸಿರುವ "ಯುವ" ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚಿಗೆ ಹೊಸಪೇಟೆಯಲ್ಲಿ ಅದ್ದೂರಿಯಾಗಿ ನೆರವೇರಿತು. ಯುವ ರಾಜಕುಮಾರ್ ಈ ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಸಂತೋಷ್ ಆನಂದರಾಮ್ ನಿರ್ದೇಶಿಸಿದ್ದಾರೆ.
ಹೊಸಪೇಟೆಯ ಪುನೀತ್ ರಾಜಕುಮಾರ್ ಮೈದಾನದಲ್ಲಿ ಅದ್ದೂರಿಯಾಗಿ ಈ ವರ್ಣರಂಜಿತ ಸಮಾರಂಭ ನಡೆಯಿತು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ವಿನಯ್ ರಾಜಕುಮಾರ್, ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದರಾಮ್, ನಾಯಕ ಯುವ ರಾಜಕುಮಾರ್, ಚಿತ್ರದಲ್ಲಿ ನಟಿಸಿರುವ ಅಚ್ಯುತಕುಮಾರ್, ಸುಧಾರಾಣಿ, ಹಿತ, ಗಿರಿರಾಜ್, ರಾಘು ಶಿವಮೊಗ್ಗ ಮುಂತಾದವರು ಭಾಗವಹಿಸಿದ್ದರು. ಚಿತ್ರದ ಅನೇಕ ತಂತ್ರಜ್ಞರು ಸಹ ಉಪಸ್ಥಿತರಿದ್ದರು.
"ಯುವ" ಚಿತ್ರ ಆಗಲು ಅಶ್ವಿನಿ ಪುನೀತ್ ರಾಜಕುಮಾರ್ ಅವರೆ ಕಾರಣ. ಅವರು ವಿಜಯ್ ಕಿರಗಂದೂರ್ ಅವರಿಗೆ ಫೋನ್ ಮಾಡಿ ನಮ್ಮ ಗುರು(ಯುವ ರಾಜಕುಮಾರ್)" ವನ್ನು ನಿಮ್ಮ ಸಂಸ್ಥೆಯ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿ ಎಂದರು. ವಿಜಯ್ ಕಿರಗಂದೂರ್ ಅವರು ಒಪ್ಪಿ ಈ ಚಿತ್ರ ನಿರ್ಮಾಣ ಮಾಡಿದರು. ಯುವ ರಾಜಕುಮಾರ್ ಕೂಡ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದಾರೆ. ಯುವ ಅವರು ಓಡುವ ಸನ್ನಿವೇಶವನ್ನು ಚಿತ್ರದ ಮೊದಲ ಸನ್ನಿವೇಶವಾಗಿ ಚಿತ್ರಿಸಿಕೊಳ್ಳಲಾಗಿದೆ. ಕಾರಣ, ಯುವ ಅವರು ಯಾವಾಗಲೂ ಚಿತ್ರರಂಗದಲ್ಲಿ ಓಡುವ ಕುದುರೆಯಾಗಿರಲಿ ಎಂದು. ಇನ್ನು ನನ್ನ ಚಿತ್ರತಂಡದ ಸಹಕಾರದಿಂದ ಈ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಇದೇ ಮಾರ್ಚ್ 29 ರಂದು ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಿ. ಈ ಸಂದರ್ಭದಲ್ಲಿ ನಾನು ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ, ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ, ನನ್ನ ತಂಡಕ್ಕೆ ಹಾಗೂ ವಿಶೇಷವಾಗಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಸಂತೋಷ್ ಆನಂದರಾಮ್.
ನಾನು ಮೊದಲು ನನ್ನ ಚಿಕ್ಕಪ್ಪ ಪುನೀತ್ ರಾಜಕುಮಾರ್ ಹಾಗೂ ಚಿಕ್ಕಮ್ಮ ಪುನೀತ್ ರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮಾತನಾಡಿದ ಯುವ ರಾಜಕುಮಾರ್, ಏಕೆಂದರೆ ನನ್ನನ್ನು ನಾಯಕನನ್ನಾಗಿ ಮಾಡಿ ಎಂದು ಅವರಿಬ್ಬರು ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ಸರ್ ಗೆ ಹೇಳಿದ್ದಾರೆ. ಅವರಿಂದಲೇ ಸಾಕಷ್ಟು ಹಿಟ್ ಚಿತ್ರಗಳನ್ನು ಕೊಟ್ಟಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರದಲ್ಲಿ ನಟಿಸಲು ಸಾಧ್ಯವಾಗಿದೆ. ನಿರ್ಮಾಪಕರಾದ ವಿಜಯ್ ಕಿರಗಂದೂರ್ ಹಾಗೂ ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೂ ನಾನು ಚಿರ ಋಣಿ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಹಿರಿಯ ನಟರಾದ ಅಚ್ಯುತಕುಮಾರ್, ಸುಧಾರಾಣಿ ಮುಂತಾದವರಿಂದ ಸಾಕಷ್ಟು ಕಲಿತಿದ್ದೇನೆ. ನಾಯಕಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಇಡೀ ತಂಡದ ಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನನ್ನ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದರು.
ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ವಿನಯ್ ರಾಜಕುಮಾರ್ ಮುಂತಾದವರು "ಯುವ" ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಮಾರಂಭದಲ್ಲಿ ಕರ್ನಾಟಕದ ಹೆಸರಾಂತ ಕಲಾವಿದರ ಗಾಯನ, ನೃತ್ಯ ಮುಂತಾದ ಮನೋರಂಜನಾ ಕಾರ್ಯಕ್ರಮಗಳು ಸಹ ಅದ್ಭುತವಾಗಿ ಮೂಡಿಬಂತು.