Krishanavtar.News

Monday, March 25, 2024

65

 

ಕೃಷ್ಣಾವತಾರ ಶೀರ್ಷಿಕೆ ಬಿಡುಗಡೆ

ಮಾಡಿದ ಆರು ಕೃಷ್ಣರು..

 

  ಕೃಷ್ಣಾವತಾರ ಹೀಗೊಂದು ಚಿತ್ರ ತೆರೆಗೆ‌ ಬರುತ್ತಿದೆ. ಹಾಗಂತ ದ್ವಾಪರ ಯುಗದ ಶ್ರೀಕೃಷ್ಣನ ಕಥೆಯಲ್ಲ. ಪ್ರಕೃತಿ, ಪರಿಸರ ಉಳಿಸಲು ಹೊಸ ಅವತಾರ ಎತ್ತಿದವನ ಕಥೆ.  ಹಿರಿಯಸಾಹಿತಿ ಡಾ.ವಿ. ನಾಗೇಂದ್ರಪ್ರಸಾದ್  ಸಾಹಿತ್ಯ, ನಿರ್ದೇಶನದ ಜೊತೆಗೆ ಅಭಿನಯದಲ್ಲೂ ಸೈ ಎನಿಸಿಕೊಂಡವರು. ಅವರೀಗ  ಕೃಷ್ಣಾವತಾರ  ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ, ಆ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಎಸ್.ಆರ್.ವಿ. ಥಿಯೇಟರಿನಲ್ಲಿ ನಡೆಯಿತು. ಯುವಪ್ರತಿಭೆ ಸಿರಿ ವೈ.ಎಸ್.ಆರ್.  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ  ಪವನ್‌ರಾವ್ ಸಂಭಾಷಣೆ ಹೆಣೆದಿದ್ದಾರೆ. ವಿಶೇಷವಾಗಿ ಈ ಚಿತ್ರದ ಶೀರ್ಷಿಕೆಯನ್ನು ಕೃಷ್ಣ ಹೆಸರಿನ ಅತಿಥಿಗಳ ಕೈಲೇ ಬಿಡುಗಡೆ ಮಾಡಿಸಿದ್ದು  ಸಮಾರಂಭದ ವಿಶೇಷವಾಗಿತ್ತು. ಹೌದು, ವೇದಿಕೆಯಲ್ಲಿ  ಹಿರಿಯ ಛಾಯಾಗ್ರಾಹಕ ಜೆ.ಜಿ.ಕೃಷ್ಣ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಹಿರಿಯ ಪ್ರಚಾರಕರ್ತ ರಾಮಕೃಷ್ಣ, ಸಾಹಿತಿ ಮಳವಳ್ಳಿ ಸಾಯಿಕೃಷ್ಣ, ನಿರ್ಮಾಪಕ ರಾಮಕೃಷ್ಣ ಹಾಗೂ ನಟ, ನಿರ್ದೇಶಕ ನವೀನ್ ಕೃಷ್ಣ ಇವರೆಲ್ಲ ಸೇರಿ ಕೃಷ್ಣಾವತಾರ ಚಿತ್ರದ ಟೈಟಲ್ ಪೋಸ್ಟರನ್ನು ರಿವೀಲ್ ಮಾಡಿದರು. 

    ಮಾಯಾಬಜಾರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಗುರುಪ್ರಸಾದ್ ಕೆ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶುಭ ರಕ್ಷಾ, ತ್ರಿವೇಣಿ ರಾಜ್ ಚಿತ್ರದ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ  ನಾಗೇಂದ್ರ ಪ್ರಸಾದ್, ನಿರ್ದೇಶಕರು

 ಸಿನಿಮಾ ಪ್ರೀತಿ ಇರುವಂಥ ನಿರ್ಮಾಪಕರನ್ನು ಒಪ್ಪಿಸಿ ಈ ಚಿತ್ರ ಮಾಡಿದ್ದಾರೆ. ನನಗೊಂದು ಒಳ್ಳೇ ಪಾತ್ರವನ್ನೂ ಕೊಟ್ಟಿದ್ದಾರೆ. ಈ ಕಥೆಯ ಆರಂಭ, ಅಂತ್ಯ ಎರಡೂ ನನ್ನಿಂದಲೇ ಆಗುತ್ತದೆ, ಏಳೆಂಟು ಹಗಲು, ರಾತ್ರಿ ಒಟ್ಟು ೧೫ ದಿನಗಳವರೆಗೆ  ನಾನೀ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆ. ಈ ಸಿನಿಮಾ ಮೂಲಕ ನಿರ್ದೇಶಕರು ಏನೋ ಒಂದು ಹೊಸದನ್ನು ಹೇಳಲು ಹೊರಟಿದ್ದಾರೆ, ಪರಿಸರ, ಪ್ರಕೃತಿಯ ಬಗ್ಗೆ ಒಂದೊಳ್ಳೇ ಕಥೆ ಇಟ್ಟುಕೊಂಡು  ಚಿತ್ರ ನಿರ್ದೇಶನ  ಮಾಡಿದ್ದಾರೆ ಎಂದು ಹೇಳಿದರು.

  ನಾಯಕಿ ಶುಭ ರಕ್ಷ ಮಾತನಾಡಿ ಚಿತ್ರದಲ್ಲಿ ನಾನು ಚಂದನ ಎಂಬ ಶಬ್ದ ಸಂಶೋಧನೆಯ ಬಗ್ಗೆ ಅಭಿರುಚಿ ಇರುವ ಯುವತಿಯಾಗಿ ನಟಿಸಿz್ದೆÃನೆ. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದೆ, ಚಿತ್ರದಲ್ಲಿ  ನನಗೆ ಕಿತ್ತು ಹೋಗಿರುವ ಬಟ್ಟೆ ಹಾಕಿಸಿ ಓಡಿಸಿದ್ದಾರೆ. ರಾತ್ರಿಯಿಡೀ ಸ್ಮಶಾನದಲ್ಲಿ ಆಲದಮರದ ಮೇಲೆ ಕೂತಿದ್ದೇನೆ. ಜೀವಂತ ಹಾವನ್ನು ನನ್ನ ಪಕ್ಕದಲ್ಲಿಟ್ಟು ಚಿತ್ರೀಕರಿಸಿದ್ದಾರೆ ಎಂದು ತನ್ನ ಅನುಭವವನ್ನು ಹೇಳಿಕೊಂಡರು. ಮತ್ತೊಬ್ಬ ನಟಿ ತ್ರಿವೇಣಿರಾಜ್ ಮಾತನಾಡಿ ಚಿತ್ರದಲ್ಲಿ ನಾನು ಅರಣ್ಯ ಸಿಬ್ಬಂದಿ ಮಹದೇವನ ಪತ್ನಿ ಸವಿತಾಳ ಪಾತ್ರ ಮಾಡಿದ್ದೇನೆ. ಗರ್ಭಿಣಿ ಮಹಿಳೆಯಾದ ನಾನು ಚಂದನಾಳ ಹುಚ್ಚಾಟಕ್ಕೆ ಬಲಿಯಾಗಬೇಕಾಗುತ್ತದೆ ಎಂದು ಹೇಳಿದರು. ನಂತರ ನಿರ್ದೇಶಕ ಸಿರಿ ವೈ.ಎಸ್.ಆರ್. ಮಾತನಾಡುತ್ತ ಒಂದೊಳ್ಳೇ ಸಿನಿಮಾ ಆಗಿದೆ. ಈ ಸಿನಿಮಾ ಆಗಲು ನಿರ್ಮಾಪಕರ ಶ್ರೀಮತಿ ಶಾಂತಕ್ಕ ಅವರೇ  ಕಾರಣ. ನನಗೊಂದು ಭವಿಷ್ಯ ರೂಪಿಸಲು ನಿರ್ಮಾಪಕರು ತುಂಬಾ ಹಣ ಹಾಕಿದ್ದಾರೆ. ನಾವೆಲ್ಲ  ಪ್ರಾಣಿ, ಪಕ್ಷಿ ಸಂಕುಲದ ಮಧ್ಯೆ ಬದುಕುತ್ತಿದ್ದೇವೆ, ಅವುಗಳಿಗೆ ನಾವು ಏನೆಲ್ಲ ತೊಂದರೆ ಕೊಡುತ್ತಿದ್ದೇವೆ, ನಾವು ಮಾಡುವ ಒಂದು ಸಣ್ಣ ತಪ್ಪಿನಿಂದ ಮುಂದೆ ಯಾವೆಲ್ಲ ತೊಂದರೆ ಅನುಭವಿಸಬೇಕಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ನಡೆಸುವ ಹುಚ್ಚಾಟ, ಅದರಿಂದ ಏನೇನೆಲ್ಲ ತೊಂದರೆಗಳುಂಟಾಗುತ್ತವೆ ಎಂದು ನಮ್ಮ  ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು. ನಿರ್ಮಾಪಕ ಗುರುಪ್ರಸಾದ್ ಮಾತನಾಡಿ ಈ ಸಿನಿಮಾ ಆಗಬೇಕಾದರೆ  ನಾಗೇಂದ್ರ ಪ್ರಸಾದರೇ ಮುಖ್ಯ ಕಾರಣ. ನನ್ನ ಜೊತೆ ಅನೇಕ ಸ್ನೇಹಿತರು ಕೈಜೋಡಿಸಿದ್ದಾರೆ ಎಂದರು.

ಈ ಚಿತ್ರಕ್ಕೆ ರಾಜ ಶಿವಶಂಕರ್ ಅವರು ಕ್ಯಾಮೆರಾ ವರ್ಕ್ ಮಾಡಿದ್ದು, ಎಬಿಎಂ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶ್ವನಾಥ್, ಮಾನಸಿ ಸುಧೀರ್, ರಘು ರಾಮನಕೊಪ್ಪ, ಪ್ರಕಾಶ್ ತುಮ್ಮಿನಾಡ್ ಮುಂತಾದವರು  ಉಳಿದ ತಾರಾಗಣದಲ್ಲಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,