Partner.Film News

Tuesday, March 26, 2024

126

 

"ಪಾರ್ಟ್ನರ್" ಇದು ಸ್ನೇಹಿತರ ಕಥೆ

 

ಚಿತ್ರದ ಟ್ರೈಲರ್ ಗೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಚಾಲನೆ...

 

   ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ  ಸಹ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಇರುವ  ಟಿ.ಆರ್.ಗೌತಂಗೌಡ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಪಾರ್ಟ್ ನರ್.  ನವಿಲು ವಾಯುಪುತ್ರ ಕಂಬೈನ್ಸ್  ಬ್ಯಾನರ್ ಅಡಿ ಈ ಚಿತ್ರವನ್ನು  ನಾಗರಾಜ.ಆರ್. ಹಾಗೂ ಟಿ.ಕೆ.ರವಿ ಸೇರಿ ನಿರ್ಮಾಣ ಮಾಡಿದ್ದಾರೆ.  ಚೇತಸ್ ಆರ್. ಮತ್ತು ಸತೀಶ್ ಕೃಷ್ಣಶೆಟ್ಟಿ ಚಿತ್ರದ  ನಾಯಕರಾಗಿ ನಟಿಸಿದ್ದು, ಅಗ್ನಿಸಾಕ್ಷಿ  ಖ್ಯಾತಿಯ ಸುಕೃತಾನಾಗ್ ಹಾಗೂ ಪ್ರೀತಿ ಮಿರಾಜ್ಕರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

   ಈ ಚಿತ್ರದ ಟ್ರೈಲರ್, ಆಡಿಯೋ  ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸಮಾರಂಭದಲ್ಲಿ  ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು  ಟ್ರೈಲರ್‌ಗೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.

   ಈ ಚಿತ್ರದಲ್ಲಿ ೫ ಹಾಡುಗಳಿದ್ದು ಈಗಾಗಲೇ ೨ ಹಾಡುಗಳು ಮತ್ತು ಟೀಸರ್ ಪ್ರೇಕ್ಷಕರ ಗಮನ ಸೆಳೆದಿದೆ. ಮೆಹಬೂಬ್‌ಸಾಬ್ ಹಾಡಿರುವ ’ಓ ಗೆಳೆಯಾ ಓ ಗೆಳೆಯ..’ ಹಾಡು ಈಗಾಗಲೇ ಯೂ ಟ್ಯೂಬ್‌ನಲ್ಲಿ  ವೈರಲ್ ಆಗಿದೆ.

     ಈ ಸಂದರ್ಭದಲ್ಲಿ ಮಾತನಾಡಿದ ಗೌತಂಗೌಡ ನಾನು ಮೂಲತ: ಆಂದ್ರದವನು. ಮೊದಲಬಾರಿಗೆ ನಿರ್ದೇಶನ ಮಾಡಿದ್ದೇನೆ. ಇಬ್ಬರು ಸ್ನೇಹಿತರ, ಸ್ನೇಹದ ಸುತ್ತ ನಡೆಯುವ ಕಥೆ ಇದಾಗಿದ್ದು, ಫ್ಯಾಮಿಲಿ ಎಮೋಷನ್ಸ್, ಲವ್‌ ಸ್ಟೋರಿ, ಮದರ್ ಸೆಂಟಿಮೆಂಟ್‌ನಂಥ ಎಲ್ಲ ಎಲಿಮೆಂಟ್ ಈ ಚಿತ್ರದಲ್ಲಿದೆ. ಯಾವುದನ್ನೂ ಅನವಶ್ಯಕವಾಗಿ ಸೇರಿಸಿಲ್ಲ,  ಚಿತ್ರವನ್ನು ಕೋವಿಡ್ ಟೈಮ್‌ನಲ್ಲೇ ಶುರು ಮಾಡಿದ್ದೆವು. ೧೫ ದಿನ ಶೂಟಿಂಗ್ ನಂತರ ಸ್ಟಾಪ್ ಮಾಡಬೇಕಾಯಿತು, ಆಮೇಲೆ ಸ್ವಲ್ಪ ತಡವಾಯಿತು. ಚಿತ್ರದಲ್ಲಿ ಎಣ್ಣೆ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ. ಜೆ.ಡಿ. ಹರೀಶ್, ಆನಂದ್ ಕೊರಿಯೋಗ್ರಾಫ್ ಮಾಡಿದ್ದು,  ನರಸಿಂಹ, ವಿನೋದ್ ಆಕ್ಷನ್ ಕಂಪೋಜ್ ಮಾಡಿದ್ದಾರೆ. ಮುಂಜಾನೆ ಮಂಜು ಅವರ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಚೇತಸ್ ಹಾಗೂ ಸತೀಶ್‌ಕೃಷ್ಣಶೆಟ್ಟಿ ಇವರಿಬ್ಬರ ಪಾತ್ರಗಳನ್ನು ಲೀಡ್ ಆಗಿಟ್ಟುಕೊಂಡು ಸ್ಕ್ರಿಪ್ಟ್ ಪ್ರಾರಂಭಿಸಿದೆವು. ನಂತರ ಉಳಿದ ಪಾತ್ರಗಳನ್ನು ಡೆವಲಪ್ ಮಾಡಿದೆವು. ಬ.ಲ. ರಾಜವಾಡಿ, ಶಿವರಾಜ್ ಕೆ.ಆರ್.ಪೇಟೆ, ರಾಬರ್ಟ್ ಲೂಯಿಸ್ ಪ್ರಮುಖ ಪಾತ್ರಗಳಲ್ಲಿದ್ದಾರೆ ಎಂದರು. ನಾಯಕ ಹಾಗೂ ನಿರ್ಮಾಪಕರೂ ಆದ ಚೇತಸ್ ಮಾತನಾಡಿ ನಮ್ಮ ಚಿತ್ರ ಇಲ್ಲಿಯವರೆಗೆ ಬಂದಿದೆ ಎಂದರೆ, ಚಿತ್ರತಂಡ ನೀಡಿದ ಸಹಕಾರವೇ ಕಾರಣ, ನಾನು ಅರ್ಜುನ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು.

    ಮತ್ತೊಬ್ಬ ನಾಯಕ ಸತೀಶ್ ಕೃಷ್ಣ ಮಾತನಾಡುತ್ತ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ.  ಕೃಷ್ಣ, ಅರ್ಜುನರ ನಡುವಿನ ಸ್ನೇಹಸಂಬಂಧ  ಹೇಗಿತ್ತು ಅಂತ ಚಿತ್ರದಲ್ಲಿ ತೋರಿಸಿದ್ದೇವೆ ಎಂದರು, ಪೋಷಕ ನಟಿ ರಾಧಿಕಾ ಮಾತನಾಡಿ ತಾನು ನಾಯಕನ ತಾಯಿಯಾಗಿ ನಟಿಸಿರುವುದಾಗಿ ಹೇಳಿದರು. ವಿಲನ್ ಪಾತ್ರ ನಿರ್ವಹಿಸಿರುವ ರಾಬರ್ಟ್ ಮಾತನಾಡಿ ನಾನು ಸುಮಾರು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದೇನೆ, ಈ ಚಿತ್ರದಲ್ಲೂ ಒಂದು ನೆಗೆಟಿವ್ ಶೇಡ್ ಪಾತ್ರ ಮಾಡಿದ್ದೇನೆ ಎಂದರು.  ನಾಯಕಿ ಸುಕೃತಾ ಮಾತನಾಡಿ ಕಿರುತೆರೆಯಲ್ಲಿ ಅಭಿನಯಿಸಿದ್ದ ನನಗೂ ಇದು ಮೊದಲ ಚಿತ್ರ,  ಬಜಾರಿ ಥರದ, ರಾಬರಿ  ಮಾಡುತ್ತ ಓಡಾಡಿಕೊಂಡಿರೋ ಹುಡುಗಿ ಪಾತ್ರ ತನ್ನದು ಎಂದು ಹೇಳಿದರು. ಉಳಿದಂತೆ ಚಿತ್ರದ ಆಡಿಯೋ ಹೊರತಂದಿರುವ ಸಿರಿ ಮ್ಯೂಸಿಕ್‌ನ ಸುರೇಶ್ ಚಿಕ್ಕಣ್ಣ, ವಿತರಣೆ ಮಾಡುತ್ತಿರುವ ಸುನಿಲ್ ಕುಂಬಾರ್  ಸಿನಿಮಾ ಕುರಿತಂತೆ ಮಾತನಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,