Kenda.Film News

Tuesday, April 16, 2024

32

 

ಮನಸಿಗಂಟಿಕೊಳ್ಳುವ ಕೆಂಡದ `ಧೂಳು’ ಲಿರಿಕಲ್ ವೀಡಿಯೋ ಸಾಂಗ್!

ರೂಪಾ ರಾವ್ ನಿರ್ಮಾಣ ಮತ್ತು ಸಹದೇವ್ ಕೆಲವಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಕೆಂಡ’. ಆರಂಭದಿಂದ ಇಲ್ಲಿಯವರೆಗೂ  ಒಂದಷ್ಟು ಕುತೂಹಲಕರ ವಿಚಾರಗಳೊಂದಿಗೇ ಈ ಸಿನಿಮಾ ಪ್ರೇಕ್ಷಕರನ್ನು ತಲುಪುತ್ತಾ ಬಂದಿದೆ. ಇದೀಗ ಸಂಪೂರ್ಣವಾಗಿ ಚಿತರ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಜ್ಜುಗೊಂಡಿರುವ `ಕೆಂಡ’ದ ಕಡೆಯಿಂದೀಗ ಸಮ್ಮೋಹಕ ಹಾಡುಗಳ ಹಂಗಾಮಾ ಶುರುವಾಗಿದೆ. ಈಚೆಗಷ್ಟೇ ಚೆಂದದ್ದೊಂದು ಹಾಡು ಬಿಡುಗಡೆಗೊಂಡಿತ್ತು. ಇದೀಗ ಮತ್ತೊಂದು ಲಿರಿಕಲ್ ವೀಡಿಯೋ ಸಾಂಗ್ ಅನಾವರಣಗೊಂಡಿದೆ.

ದಾರಿಯಲ್ಲಿ ಧೂಳು... ದೂರ ಎಲ್ಲೋ ಊರು... ಅಂತ ತೆರೆದುಕೊಳ್ಳೋ ಈ ಹಾಡು ನವಿರು ಸಾಹಿತ್ಯ, ಅದಕ್ಕೊಪ್ಪುವ ಸಂಗೀತ ಹಾಗೂ ಧ್ವನಿಯೊಂದಿಗೆ ಮೆಲ್ಲಗೆ ಮನಸಿಗಿಳಿಯುವಂತಿದೆ. ವಿಶೇಷವೆಂದರೆ, ರಿತ್ವಿಕಕ್ ಕಾಯ್ಕಿಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು, ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಡಿದ್ದಾರೆ. ಪ್ರತಿಯೊಂದರಲ್ಲಿಯೂ ಹೊಸತನ, ಪ್ರಯೋಗಾತ್ಮಕ ಗುಣಗಳೊಂದಿಗೆ ಮುಂದುವರೆಯುತ್ತಿರುವ ಚಿತ್ರತಂಡ, ಈ ವಿಚಾರದಲ್ಲಿಯೂ ಗಮನ ಸೆಳೆದಿದೆ.

ಜಯಂತ್ ಕಾಯ್ಕಿಣಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದಕ್ಕೆ ಅವರ ಪುತ್ರ ರಿತ್ವಿಕ್ ಮೆಲುವಾದ ಸಂಗೀತ ಸ್ಪರ್ಶ ನೀಡಿದ್ದಾರೆ. ಮೊದಲ ಹಾಡಿನ ಮೂಲಕ ಗಮನ ಸೆಳೆದಿದ್ದ ರಿತ್ವಿಕ್ ಕಾಯ್ಕಿಣಿ, ಎರಡನೇ ಈ ಹಾಡಿನ ಮೂಲಕ ಮತ್ತಷ್ಟು ಭರವಸೆ ಮೂಡಿಸಿರೋದು ಸತ್ಯ. ಮತ್ತೆ ಮತ್ತೆ ಕೇಳಿಸಿಕೊಂಡು, ವಿವರಿಸಲಾಗದಂಥಾ ಧ್ಯಾನಕ್ಕೆ ದೂಡುವ ಗುಣದ ಈ ಹಾಡು ಕೇಳುಗರನ್ನೆಲ್ಲ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಹೀಗೆ ಹಾಡುಗಳ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಕೆಂಡ ಇದೇ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ.

ಈಗಾಗಲೇ ಗಂಟುಮೂಟೆ ಚಿತ್ರದ ಮೂಲಕ ನಿರ್ದೇಶಕಿಯಾಗಿ ನೆಲೆ ಕಂಡುಕೊಂಡಿರುವವರು ರೂಪಾ ರಾವ್. ಅವರು ಕೆಂಡದ ಮೂಲಕ ನಿರ್ಮಾಪಕಿಯಾಗಿ ರೂಪಾಂತರಗೊಂಡಿದ್ದಾರೆ. ಗಂಟುಮೂಟೆಯ ಭಾಗವಾಗಿದ್ದ ಸಹದೇವ್ ಕೆಲವಡಿ ಕೆಂಡದೊಂದಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈಗಾಗಲೇ ಸಹದೇವ್ ಒಂದೊಳ್ಳೆ ಕಥೆಗೆ ಪರಿಣಾಮಕಾರಿಯಾಗಿ ದೃಷ್ಯರೂಪ ನೀಡಿರುವ ಸ್ಪಷ್ಟ ಲಕ್ಷಣಗಳು ಗೋಚರಿಸಿವೆ. ಇದೀಗ ಕೆಂಡದ ಎರಡನೇ ಹಾಡು ಬಿಡುಗಡೆಗೊಂಡಿದೆ. ಅದರ ಬೆನ್ನಲ್ಲಿಯೇ ಮತ್ತೊಂದಷ್ಟು ವಿಚಾರಗಳೊಂದಿಗೆ ಕೆಂಡದ ನಿಖರವಾದ ಬಿಡುಗಡೆ ದಿನಾಂಕ ಜನಾಹೀರಾಗುವ ಸಾಧ್ಯತೆಗಳಿದ್ದಾವೆ!

Copyright@2018 Chitralahari | All Rights Reserved. Photo Journalist K.S. Mokshendra,