Gumti.Film News

Tuesday, April 16, 2024

42

 

— ‘ಗುಂಮ್ಟಿ’ ಸಿನಿಮಾ ಸುದ್ದಿ ಬಿಡುಗಡೆ —-

 

*’ಗುಂಮ್ಟಿ’ ಟೈಟಲ್ ಪೋಸ್ಟರ್ ರಿಲೀಸ್*

 

*ತೆರೆಮೇಲೆ ಕುಡುಬಿ ಜನಜೀವನ ಅನಾವರಣ*

 

*ಕಡಲತಡಿಯ ಕಥೆಗೆ ಚಿತ್ರರೂಪ*

 

*ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ‘ಗುಂಮ್ಟಿ’ ನಿರತ*

 

ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ‘ಕತ್ತಲೆ ಕೋಣೆ’ ಮತ್ತು ‘ಇನಾಮ್ದಾರ್’ ಸಿನಿಮಾಗಳನ್ನು ನಿರ್ದೇಶಿಸಿ ಕಂಟೆಂಟ್ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಸಂದೇಶದ ಶೆಟ್ಟಿ ಆಜ್ರಿ, ಈ ಬಾರಿ ಮತ್ತೊಂದು ಅಂಥದ್ದೇ ಕಂಟೆಂಟ್ ಆಧಾರಿತ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದ್ದಾರೆ.

 

ಹೌದು, ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ತಮ್ಮ ಮೂರನೇ ಸಿನಿಮಾಕ್ಕೆ ‘ಗುಂಮ್ಟಿ’ ಎಂದು ಹೆಸರಿಟ್ಟಿದ್ದು, ಈ ಸಿನಿಮಾದಲ್ಲಿ ಸಂದೇಶ್ ಶೆಟ್ಟಿ ತೆರೆಮೇಲೆ ನಾಯಕನಾಗಿ, ತೆರೆಹಿಂದೆ ನಿರ್ದೇಶಕನಾಗಿ ‘ಡಬಲ್ ರೋಲ್’ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ!

 

ಇನ್ನು ‘ಗುಂಮ್ಟಿ’ ಸಿನಿಮಾದಲ್ಲಿ ಕರ್ನಾಟಕದ ಕರಾವಳಿ ತೀರದ ಕುಡುಬಿ ಜನಾಂಗದ ಕಥೆಯೊಂದು ತೆರೆಮೇಲೆ ಅನಾವರಣವಾಗಲಿದೆ. ಕುಡುಬಿ ಜನಾಂಗದ ಸಂಪ್ರದಾಯ, ಆಚಾರ-ವಿಚಾರ, ಬದುಕು ಮತ್ತು ಆಧುನಿಕತೆಯ ನಡುವಿನ ಸಂಘರ್ಷವನ್ನು ‘ಗುಂಮ್ಟಿ’ ಸಿನಿಮಾದಲ್ಲಿ ಮನಮುಟ್ಟುವಂತೆ ಹೇಳಲು ಹೊರಟಿದೆ ಚಿತ್ರತಂಡ.

ಈಗಾಗಲೇ ಸದ್ದಿಲ್ಲದೆ ಉಡುಪಿ, ಕುಂದಾಪುರ, ಶಿರಸಿ, ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹೀಗೆ ಕರಾವಳಿ-ಮಲೆನಾಡು ಮತ್ತು ಪಶ್ಚಿಮ ಘಟ್ಟದ ಸುತ್ತಮುತ್ತ ಸುಮಾರು 25ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರತಂಡ ‘ಗುಂಮ್ಟಿ’ ಚಿತ್ರೀಕರಣವನ್ನು ಯಶಸ್ವಿಯಾಗಿ  ಮುಗಿಸಿದೆ. ಇದೀಗ ‘ಗುಂಮ್ಟಿ’ ಸಿನಿಮಾದ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ ಇನ್ನು ಎರಡು-ಮೂರು ತಿಂಗಳಿನಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

 

ಇನ್ನು ‘ತಸ್ಮೈ ಪ್ರೊಡಕ್ಷನ್ಸ್’ ಮತ್ತು ‘ಜ್ಯೋತಿ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ ‘ಗುಂಮ್ಟಿ’ ಸಿನಿಮಾವನ್ನು ವಿಕಾಸ್ ಎಸ್. ಶೆಟ್ಟಿ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ನಾಯಕ ಸಂದೇಶ್ ಶೆಟ್ಟಿ ಆಜ್ರಿ ಅವರಿಗೆ ವೈಷ್ಣವಿ ನಾಡಿಗ್ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ರಂಜನ್ ಛತ್ರಪತಿ, ಕರಣ್ ಕುಂದರ್, ಯಶ್ ಆಚಾರ್ಯ, ಪ್ರಭಾಕರ ಕುಂದರ್, ರಘು ಪಾಂಡೇಶ್ವರ, ಚೇತನ ನೈಲಾಡಿ, ಚಿತ್ರಕಲಾ, ನೂರ್ ಅಹ್ಮದ್, ಸ್ವರಾಜ್ ಲಕ್ಷ್ಮಿ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗುಂಮ್ಟಿ’ ಸಿನಿಮಾ ಅನೀಶ್ ಡಿಸೋಜಾ ಕ್ಯಾಮರದ ಕೈಚಳಕದಲ್ಲಿ ಮೂಡಿ ಬಂದಿದ್ದು, ಸಿನಿಮಾಕ್ಕೆ ಮೋಹನ್  ಸಂಗೀತ ಸಂಯೋಜಿಸಿದ್ದಾರೆ.

 

‘ಗುಂಮ್ಟಿ’ ಸಿನಿಮಾಕ್ಕೆ ಶಿವರಾಜ್ ಮೇಹು ಸಂಕಲನವಿದೆ. ‘ಯುಗಾದಿ’ ಹಬ್ಬದ ಸಂದರ್ಭದಲ್ಲಿ ‘ಗುಂಮ್ಟಿ’ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ‘ಗುಂಮ್ಟಿ’ ಫಸ್ಟ್ ಲುಕ್ ಮತ್ತು ಟೈಟಲ್ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

Copyright@2018 Chitralahari | All Rights Reserved. Photo Journalist K.S. Mokshendra,