My Name Is Raj.News

Friday, April 19, 2024

27

 

*ಡಾ||ರಾಜ್ ಹುಟ್ಟುಹಬ್ಬದಂದು "ಮೈ ನೇಮ್ ಇಸ್ ರಾಜ್"(ಭಾಗ ೩)* .

 

 *ಖ್ಯಾತ ಗಾಯಕ ಮನೋಜವಂ ಆತ್ರೇಯ ಸಾರಥ್ಯದಲ್ಲಿ "ರಾಜ್ ಗೀತ ನಮನ"*

 

ಏಪ್ರಿಲ್ 24, ನಟ ಸಾರ್ವಭೌಮ ಡಾ||ರಾಜಕುಮಾರ್ ಅವರ 95 ನೇ ಹುಟ್ಟುಹಬ್ಬ. ಅಂದು ಸಂಜೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ "ಮೈ ನೇಮ್ ಇಸ್ ರಾಜ್"(ಭಾಗ 3) ಕಾರ್ಯಕ್ರಮ ನಡೆಯಲಿದೆ. ಸ್ವಾಮಿ ವಿವೇಕಾನಂದ ಟ್ರಸ್ಟ್ ಹಾಗೂ ಟೀಮ್ ಆತ್ರೇಯ ಈ ಸಮಾರಂಭವನ್ನು ಆಯೋಜಿಸಿದೆ. ಈ ಬಾರಿ " ರಾಜ್ ಗೀತ ನಮನ" ಎಂಬ ಹೆಸರಿನಲ್ಲಿ ಖ್ಯಾತ ಗಾಯಕ ಮನೋಜವಂ ಆತ್ರೇಯ ಅವರ ಸಾರಥ್ಯದಲ್ಲಿ ಹೆಸರಾಂತ ಗಾಯಕರು ಡಾ||ರಾಜ್ ಅವರ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ. ಈ ಕಾರ್ಯಕ್ರಮದ  ಕುರಿತು  ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ವಿವರಣೆ ನೀಡಿದರು.

 

ನಾನು ಹಾಗೂ ನನ್ನ ಕುಟುಂಬದವರು ಡಾ||ರಾಜಕುಮಾರ್ ಅವರ ಅಭಿಮಾನಿಗಳು. ಅವರ ಹುಟ್ಟುಹಬ್ಬದ ದಿನ ಏನಾದರೂ ಸಮಾರಂಭ ಮಾಡಬೇಕೆಂದುಕೊಂಡು ಟೀಮ್ ಆತ್ರೇಯ ತಂಡದಿಂದ ( Team Aatreya ) ಪ್ರತಿವರ್ಷ "ಮೈ ನೇಮ್ ಇಸ್ ರಾಜ್" ಎಂಬ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದೇವೆ. ಇದರ ಜೊತೆಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ. ಈ ಬಾರಿ ನಮ್ಮೊಂದಿಗೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಕೂಡ ಜೊತೆಯಾಗಿದೆ. ಏಪ್ರಿಲ್ 24 ರ ಸಂಜೆ ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ "ಮೈ ನೇಮ್ ಇಸ್ ರಾಜ್" ಕಾರ್ಯಕ್ರಮ ನಡೆಯಲಿದೆ. "ಸರಿಗಮಪ" ಖ್ಯಾತಿಯ ಚನ್ನಪ್ಪ ಹುದ್ದರ್ , ಪೃಥ್ವಿ ಭಟ್, ಮೈತ್ರಿ ಅಯ್ಯರ್ ಸೇರಿದಂತೆ ಹೆಸರಾಂತ ಗಾಯಕರು ಅಂದು ಹಾಡಲಿದ್ದಾರೆ. 

. ಹನ್ನೆರಡಕ್ಕೂ ಅಧಿಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ವಾದ್ಯ ಕಲಾವಿದರು ಈ ಕಾರ್ಯಕ್ರಮದಲ್ಲಿರುತ್ತಾರೆ. ಡಾ||ರಾಜಕುಮಾರ್ ಅವರು ಸಿನಿಮಾ, ಧ್ವನಿಸುರುಳಿ ಸೇರಿದಂತೆ 5000 ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಡಾ||ರಾಜ್, ಕೇವಲ ಹಾಡುಗಾರರಷ್ಟೇ ಆಗಿರಲಿಲ್ಲ. ಕೆಲವು ವಾದ್ಯಗಳನ್ನು ನುಡಿಸುತ್ತಿದ್ದರು. ಅವರೊಬ್ಬ ಸರಸ್ವತಿ ಪುತ್ರ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.‌ ಅದಕ್ಕೆ ಅವರು ಹಾಡಿರುವ ಮಾಣಿಕ್ಯ ವೀಣಾ, ನಾದಮಯ, ಮೇಘ ಬಂತು ಮೇಘ ಮುಂತಾದ  ಹಾಡುಗಳೆ ಸಾಕ್ಷಿ.‌ ಈ ಬಾರಿ "ಡಾ ರಾಜ್ ಗೀತ ನಮನ" ಎಂಬ ಹೆಸರಲ್ಲಿ ಅವರು ಹಾಡಿರುವ ಸಂಗೀತಮಯ ಹಾಡುಗಳನ್ನು ಪ್ರಸ್ತುತ ಪಡಿಸುತ್ತಾ ಅಣ್ಣವ್ರಲ್ಲಿದ್ದ ಒಬ್ಬ ಶ್ರೇಷ್ಠ ಸಂಗೀತಗಾರನನ್ನು ಗೌರವಿಸಿ ಈ ಕಾರ್ಯಕ್ರಮವನ್ನು ಸಮರ್ಪಿಸುತಿದ್ದೇವೆ.

ಹೆಚ್ಚಿನ ಜನರೂ ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಟೀಮ್ ಆತ್ರೇಯ ಪರವಾಗಿ ಮನೋಜವಂ ಆತ್ರೇಯ ತಿಳಿಸಿದರು.

 

ನಾನು ಸಹ "ಮೈ ನೇಮ್ ಇಸ್ ರಾಜ್" ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೆ ಎಂದು ಮಾತಾನಾಡಿದ ಸ್ವಾಮಿ ವಿವೇಕಾನಂದ ಟ್ರಸ್ಟ್ ನ ಪಾಟೀಲ್ ಅವರು, ಈ ಬಾರಿ ನಾವು ಮನೋಜವಂ ಅವರ ಜೊತೆಯಾಗಿದ್ದೆವೆ. ಡಾ||ರಾಜ್ ಕುಟುಂಬದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ಸಾಕಷ್ಟು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಟಿಕೇಟ್ ಗಳು ಬುಕ್ ಮೈ ಶೋ ನಲ್ಲಿ ಲಭ್ಯವಿದೆ. ನಮ್ಮ ಸಮಾರಂಭಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು. ಟೀಂ ಆತ್ರೇಯ ತಂಡದ ಮನೋಜ್ ಹೊಸಮನಿ, ಶರಣ್, ವೇದಾಂತ್ ನರಸಿಂಹ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Copyright@2018 Chitralahari | All Rights Reserved. Photo Journalist K.S. Mokshendra,