*ಜನರ ಮನ ಗೆಲ್ಲುತ್ತಿದೆ "ರವಿಕೆ ಪ್ರಸಂಗ"* .
*ವಿಜೇತರಿಗೆ ಬಹುಮಾನ ವಿತರಿಸಿದ ಚಿತ್ರತಂಡ* . .
ಹೆಣ್ಣುಮಕ್ಕಳಿಗೆ ಸೀರೆಯಷ್ಟೇ ರವಿಕೆಯೂ ಅಚ್ಚುಮೆಚ್ಚು. ಅಂತಹ "ರವಿಕೆ" ಯ ಸುತ್ತ ಹೆಣೆಯಲಾದ ಕಥಾಹಂದರ ಹೊಂದಿರುವ "ರವಿಕೆ ಪ್ರಸಂಗ" ಚಿತ್ರ ಕಳೆದವಾರ ಬಿಡುಗಡೆಯಾಗಿ ಜನರ ಮನ ಗೆಲುತ್ತಿದೆ. "ರವಿಕೆ" ಯ ಕುರಿತಾದ ಸಿನಿಮಾ ಆಗಿರುವುದರಿಂದ ಚಿತ್ರತಂಡ ವಿಶೇಷ ಡಿಸೈನ್ ರವಿಕೆ ಹೊಲಿಯುವವರಿಗಾಗಿ ಸ್ಪರ್ಧೆ ಆಯೋಜಿಸಿತ್ತು. ಆ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಹೊಲಿಗೆ ಯಂತ್ರ, ನಗದು ಸೇರಿದಂತೆ ಅನೇಕ ಬಹುಮಾನಗಳನ್ನು ನೀಡಲಾಯಿತು. ನಿರ್ದೇಶಕ ಸಂತೋಷ್ ಕೊಡೆಂಕೆರಿ, ಕಥೆ ಬರೆದಿರುವ ಪಾವನ ಸಂತೋಷ್, ನಟಿ ಗೀತಾಭಾರತಿ ಭಟ್, ಉದ್ಯಮಿ ಮತ್ತು ರಾಧಾಕೃಷ್ಣ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಗಿರೀಶ್, ಶಿವರುದ್ರಯ್ಯ, ಕಂದಯ್ಯ ಶೆಟ್ಟಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಕೆಲವು ವಿಷಯಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡರು.
ಫೆಬ್ರವರಿ 16 ರಂದು ನಮ್ಮ ಚಿತ್ರ ಬಿಡುಗಡೆಯಾಯಿತು. ಚಿತ್ರ ನೋಡಿದವರು ಹಾಗೂ ಮಾಧ್ಯಮದವರು ನಮ್ಮ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆದರೆ, ಕೆಲವರು ನಮ್ಮ ಚಿತ್ರವನ್ನು ಈ ವಾರದಲ್ಲಿ ನೋಡುತ್ತೇವೆ. ಎನ್ನುತ್ತಿದ್ದಾರೆ. ಹಾಗಾಗಿ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಅದರಿಂದ ಚಿತ್ರಮಂದಿರಕ್ಕೆ ಹೆಚ್ಚು ಜನ ಬರಬೇಕು. ಒಳ್ಳೆಯ ಕಂಟೆಂಟ್ ವುಳ್ಳ ಚಿತ್ರ ಮಾಡಿದ್ದೇವೆ. ದಯವಿಟ್ಟು ಎಲ್ಲರು ಚಿತ್ರ ನೋಡಿ ಪ್ರೋತ್ಸಾಹಿಸಿ. ಈ ಮಧ್ಯೆ ಲಕ್ಷಾಂತರ ರೂಪಾಯಿ ಪಡೆದು ಚಿತ್ರಮಂದಿರವನ್ನು ಜನರಿಂದ ಭರ್ತಿ ಮಾಡಲು ಕೆಲವು ಏಜನ್ಸಿಗಳಿದೆ. ಆದರೆ ಈ ಏಜೆನ್ಸಿಗಳಿಗೆ ಯಾವುದೇ ರೀತಿಯ ಮಾನದಂಡಗಳಿರುವುದಿಲ್ಲ. ಆ ರೀತಿ ಜನರನ್ನು ತುಂಬಿಸುವುದರಿಂದ ಏನು ಪ್ರಯೋಜನವಾಗುವುದಿಲ್ಲ. ಅಲ್ಲಿ ಬರುವವರು ಯಾರು ಸಿನಿಮಾ ನೋಡುವುದು ಇಲ್ಲ. ಅದರ ಬಗ್ಗೆ ಪ್ರಚಾರ ಮಾಡುವುದೂ ಇಲ್ಲ. ಈ ರೀತಿ ಜನ ತುಂಬಿಸುವ ಪ್ರಕ್ರಿಯೆಯನ್ನು ನಿಲ್ಲಿಸಲು ಸಂಬಂಧಪಟ್ಟವರು ಕ್ರಮ ತೆಗೆದುಕೊಳ್ಳಲು ಮನವಿ ಮಾಡಿಕೊಳ್ಳುತ್ತೇವೆ. ನಮ್ಮ ಚಿತ್ರದಲ್ಲಿ ಖ್ಯಾತ ನಟಿ ಸುಮನ್ ರಂಗನಾಥ್ ಹಾಗೂ ದಕ್ಷಿಣ ಕನ್ನಡದ ಪ್ರತಿಭೆ ರಾಕೇಶ್ ಮಯ್ಯ ನಟಿಸಿದ್ದಾರೆ. ಅವರಿಂದ ಚಿತ್ರ ಸಂಪೂರ್ಣವಾಗಲು ಯಾವುದೇ ತೊಂದರೆಯಾಗಿಲ್ಲ. ಆದರೆ, ಅವರಿಬ್ಬರು ನಮ್ಮ ಚಿತ್ರದ ಟೀಸರ್ ರಿಲೀಸ್ ಗಾಗಲಿ, ಟ್ರೇಲರ್ ರಿಲೀಸ್ ಗಾಗಲಿ, ಪ್ರೀ ರಿಲೀಸ್ ಗಾಗಲಿ ಯಾವುದೇ ಇವೆಂಟ್ ಗಳಿಗೆ ಬರಲಿಲ್ಲ. ಅವರು ಪ್ರಚಾರಕ್ಕೆ ಬಂದಿದ್ದರೆ, ಚಿತ್ರ ಇನ್ನೂ ಹೆಚ್ಚು ಜನರಿಗೆ ತಲುಪುತ್ತಿತ್ತು ಎಂಬುದು ನನ್ನ ಅಭಿಪ್ರಾಯ. ಈ ವಿಷಯದ ಬಗ್ಗೆ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕನೂ ಆಗಿರುವ ನನಗೆ ತುಂಬಾ ಬೇಸರವಾಗಿದೆ. ಒಂದು ಚಿತ್ರವನ್ನು ಜನರಿಗೆ ತಲುಪಿಸಲು ಇಡೀ ಚಿತ್ರತಂಡ ನಿರ್ಮಾಪಕರ ಜೊತೆ ನಿಲ್ಲಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು ನಿರ್ದೇಶಕ ಸಂತೋಷ್ ಕೊಡೆಂಕೆರಿ. ಕಥೆ ಬರೆದಿರುವ ಪಾವನ ಸಂತೋಷ್ ಅವರು ಇದೇ ಅಭಿಪ್ರಾಯವನ್ನು ತಿಳಿಸಿದರು.
ನಮ್ಮ ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ ಎಂದು ಮಾತನಾಡಿದ ನಟಿ ಗೀತಾಭಾರತಿ ಭಟ್, ಆದರೆ ಕೆಲವರು ಓಟಿಟಿಯಲ್ಲಿ ಯಾವಾಗ ಬರುತ್ತದೆ? ಎಂದು ಕೇಳುತ್ತಾರೆ. ಆದರೆ ದಯವಿಟ್ಟು ಚಿತ್ರಮಂದಿರಗಳಲ್ಲೇ ಚಿತ್ರವನ್ನು ನೋಡಿ ಎಂದರು.
ದೃಷ್ಟಿ ಮೀಡಿಯಾ & ಪ್ರೊಡಕ್ಷನ್ ವತಿಯಿಂದ "ರವಿಕೆ ಪ್ರಸಂಗ" ಚಿತ್ರ ನಿರ್ಮಾಣವಾಗಿದೆ.