ಶಿವನ ಹಬ್ಬದ ಸಲುವಾಗಿ ಗಂಗೆ ಗೌರಿ ಟೀಸರ್
ಭಕ್ತಿ ಪ್ರಧಾನ ಚಿತ್ರ ’ಗಂಗೆ ಗೌರಿ’ ಅಂದುಕೊಂಡಂತೆ ಸದ್ಯ ಡಬ್ಬಿಂಗ್ ಹಂತದಲ್ಲಿದೆ. ಸದ್ಯದಲ್ಲೆ ಶಿವರಾತ್ರ್ರಿ ಹಬ್ಬ ಬರುವ ಕಾರಣ ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭವು ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್, ಹಿರಿಯ ಪತ್ರಿಕಾ ಛಾಯಾಗ್ರಾಹಕ ಕೆ.ಎನ್.ನಾಗೇಶ್‌ಕುಮಾರ್ ಮತ್ತು ’ನಮ್ಮ ಕರ್ನಾಟಕ ಸೇನೆ’ ರಾಜ್ಯಾದ್ಯಕ್ಷ ಬಸವರಾಜ ಪಡಕೋಟೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಹಬ್ಬದ ದಿನದಂದು ರಾಜ್ಯದ ಎಲ್ಲಾ ಕಡೆ ನಡೆಯುವ ಸಮಾರಂಭಗಳಲ್ಲಿ ಟೀಸರ್‌ನ್ನು ತೋರಿಸಲು ಯೋಜನೆ ರೂಪಿಸಲಾಗಿದೆಯಂತೆ.
ಹಿರಿಯ ನಟ ಗಣೇಶ್‌ರಾವ್ ಕೇಸರ್‌ಕರ್ ಶಿವನಾಗಿ ಕಾಣಿಸಿಕೊಂಡಿದ್ದು, ಇದು ಅವರ 333ನೇ ಚಿತ್ರ ಎಂಬುದು ವಿಶೇಷ. ಮಧುಕಾರ್ತಿಕ್-ಪ್ರಜ್ವಲ್ ಜಂಟಿಯಾಗಿ ಜಿಆರ್ ಫಿಲಂಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ತುಳಜಾ ಬಾಯಿ, ರೂಪ.ಎಸ್.ದೊಡ್ಮನಿ, ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಿತ್ರಕಥೆ-ಸಾಹಿತ್ಯ ಮತ್ತು ನಿರ್ದೇಶನ ಮಾಡುರುವ ಬಿ.ಎ.ಪುರುಷೋತ್ತಮ್ ಅವರದು 27ನೇ ಚಿತ್ರವಾಗಿದೆ.
ಶಿವ ಪುರಾಣದಲ್ಲಿ ಗಂಗೆ ಗೌರಿ ಸಂಬಂಧ ಏನು? ಗಂಗೆ ಯಾಕೆ ಶಿವನ ತಲೆ ಮೇಲೆ ಇರುತ್ತಾಳೆ? ಗೌರಿ ಯಾಕೆ ಶಿವನ ತೊಡೆ ಮೇಲೆ ಕೂತಿರುತ್ತಾಳೆ? ಇದಕ್ಕೆ ಕಾರಣವೇನು? ಇಬ್ಬರನ್ನು ಶಿವನು ಯಾವ ರೀತಿ ಸಂಭಾಳಿಸುತ್ತಾನೆ. ಇದರಲ್ಲಿ ಕೈಲಾಸವನ್ನು ಸೌಹಾರ್ದತೆಗೆ ಹೋಲಿಸಲಾಗಿದೆ. ಹುಲಿ, ನಂದಿ, ಹಾವು, ನವಿಲು ಹಾಗೂ ಇಲಿ. ಒಂದಕ್ಕೊಂದು ವೈರತ್ವ ಇದ್ದು, ಒಂದನ್ನು ಕಂಡರೆ ಮತ್ತೋಂದಕ್ಕೆ ಆಗುವುದಿಲ್ಲ. ಆದರೂ ಇವುಗಳು ಒಟ್ಟಿಗೆ ಇರುತ್ತವೆ. ಅದಕ್ಕೆ ಸೌಹಾರ್ದತೆ ಅಂತ ಕರೆಯಲಾಗುತ್ತದೆ. ಜಗತ್ ರಕ್ಷಕನಾದ ಪರಮೇಶ್ವರನಿಗೂ ವಿಧಿಯ ಕಾಟ ತಪ್ಪಿಲ್ಲ. ಶನಿದೇವನಿಂದ ಮೂವರು ಕಷ್ಟ ಅನುಭವಿಸುತ್ತಾರೆ. ಇವೆಲ್ಲಾ ಅಂಶಗಳನ್ನು ತೋರಿಸಲಾಗುತ್ತಿದೆ.
ರಂಗಭೂಮಿ ನಟಿ ರಾಣೆಬೆನ್ನೂರಿನ ರೂಪಾಲಿ ಮೂರು ಶೇಡ್‌ಗಳಲ್ಲಿ ಅಂದರೆ ಗೌರಿ, ಪಾರ್ವತಿ, ದಾಕ್ಷಾಯಿಣಿ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಂಗೆಯಾಗಿ ನಿಖಿತಾಸ್ವಾಮಿ. ತಾರಾಗಣದಲ್ಲಿ ಶೋಭರಾಜ್, ಜಯಸಿಂಹಮುಸೂರಿ, ಎಸ್ಕಾರ್ಟ್ ಶ್ರೀನಿವಾಸ್, ಶ್ರೀನಿವಾಸಗೌಡ, ಬಸವರಾಜದೇಸಾಯಿ, ಮಾಲಾಡಿಂಗ್ರಿನಾಗರಾಜ್, ಧನಲಕ್ಷಿ, ಜಿಮ್‌ಶಿವು, ಋತುಸ್ಪರ್ಶ, ಗೀತಾ, ರಕ್ಷಾಗೌಡ ನಟಿಸಿದ್ದಾರೆ. ರಾಜ್‌ಭಾಸ್ಕರ್ ಸಂಗೀತ, ಗೌರಿವೆಂಕಟೇಶ್ ಛಾಯಾಗ್ರಹಣ, ಸಂಕಲನ-ಗ್ರಾಫಿಕ್ಸ್-ಡಿಐ ಅನಿಲ್ ಅವರದಾಗಿದೆ. ಬೆಂಗಳೂರು,ಶ್ರೀರಂಗಪಟ್ಟಣ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.