Taj.Film Teaser.News

Saturday, June 08, 2024

213

 

 

 

*ನೈಜ ಘಟನೆಯಾಧಾರಿತ ‘ತಾಜ್’ ತೆರೆಗೆ ಬರಲು ಸಿದ್ದ*

 

*ಟೀಸರ್ ಮತ್ತು ಹಾಡಿನಲ್ಲಿ ಗಮನ ಸೆಳೆದ ಹೊಸಬರ ‘ತಾಜ್’*

 

*ಹಿಂದೂ-ಮುಸ್ಲಿಂ ಪ್ರೇಮಕಥೆಗೆ ಸಿನಿಮಾ ರೂಪ*

 

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ತಾಜ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ‘ತಾಜ್’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಸೆನ್ಸಾರ್ ಮುಂದಿದೆ. ಇದೇ ವೇಳೆ ‘ತಾಜ್’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ಸಿನಿಮಾದ ಟೀಸರ್ ಮತ್ತು ಹಾಡೊಂದನ್ನು ಬಿಡುಗಡೆ ಮಾಡಿದೆ.

 

‘ಶ್ರೀಪಾವನಿ ಲಕ್ಷ್ಮೀ ಕಂಬೈನ್ಸ್’ ಲಾಂಛನದಲ್ಲಿ ಶ್ರೀಮತಿ ಲಕ್ಷ್ಮೀ ಷಣ್ಮುಖ ನಿರ್ಮಾಣ ಮಾಡಿರುವ ‘ತಾಜ್’ ಸಿನಿಮಾಕ್ಕೆ ಬಿ. ರಾಜರತ್ನ ಆ್ಯಕ್ಷನ್-ಕಟ್ ಹೇಳಿದ್ದಾರೆ. ಯುವ ಪ್ರತಿಭೆ ಷಣ್ಮುಖ ‘ತಾಜ್’ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಅಪ್ಸರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಲರಾಜವಾಡಿ, ಶೋಭರಾಜ್, ವರ್ಧನ್, ಪದ್ಮಾವಾಸಂತಿ, ಪಟ್ರೆ ನಾಗರಾಜ್, ಕಡ್ಡಿ ವಿಶ್ವ, ಸೂರಜ್ ಮೊದಲಾದ ಕಲಾವಿದರು ‘ತಾಜ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

 

ಹಿರಿಯ ನಿರ್ಮಾಪಕ ಮತ್ತು ಛಾಯಾಗ್ರಹಕರಾದ ಅಣಜಿ ನಾಗರಾಜ್, ನಿರ್ಮಾಪಕ ಸತೀಶ್, ‘ಹತಾರ’ ಚಿತ್ರದ ನಿರ್ಮಾಪಕ ಸೌಗತ್, ನಾಯಕ ನಟರಾದ ಚಂದು ಶಿವಾನಂದ್ ಸೇರಿದಂತೆ ಚಿತ್ರರಂಗದ ಅನೇಕರು ಮತ್ತು ‘ತಾಜ್’ ಸಿನಿಮಾದ ಬಹುತೇಕ ಕಲಾವಿದರು, ತಂತ್ರಜ್ಞರು ಹಾಜರಿದ್ದು, ‘ತಾಜ್’ ಸಿನಿಮಾದ ಟೀಸರ್ ಮತ್ತು ಹಾಡನ್ನು ಬಿಡುಗಡೆಗೊಳಿಸಿದರು.

 

ಸುಮಾರು 12 ವರ್ಷಗಳಿಂದ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ, ಸಹ ನಿರ್ದೇಶಕನಾಗಿ, ಬರಹಗಾರನಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರುವ ಬಿ. ರಾಜರತ್ನ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಮೊದಲಿಗೆ ‘ತಾಜ್’ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಬಿ. ರಾಜರತ್ನ, ‘ಸುಮಾರು ಹತ್ತಕ್ಕೂ ಹೆಚ್ಚು ಕಥೆಗಳನ್ನು ಕೇಳಿದ ನಂತರ ನಿರ್ಮಾಪಕರು ಈ ಸಿನಿಮಾ ಮಾಡಲು ಒಪ್ಪಿಕೊಂಡರು. ಇದೊಂದು ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ. ನಮ್ಮ ಸುತ್ತಮುತ್ತ ನಡೆದ ಶೇಕಡಾ 80 ರಷ್ಟು ನೈಜ ಘಟನೆಗಳು ಮತ್ತು ಶೇಕಡಾ 20 ರಷ್ಟು ಸಿನಿಮೀಯ ಅಂಶಗಳನ್ನು ಇಟ್ಟುಕೊಂಡು ‘ತಾಜ್’ ಸಿನಿಮಾ ಮಾಡಲಾಗಿದೆ. ಹಿಂದೂ-ಮುಸ್ಲಿಂ ಜೋಡಿಯ ಪ್ರೇಮಕಥೆ ಸಿನಿಮಾದಲ್ಲಿದ್ದು, ಜೊತೆಗೆ ಮಾನವೀಯ ನೆಲೆಗಟ್ಟು, ಸಾಮಾಜಿಕ ಸಂದೇಶ ಎಲ್ಲವನ್ನೂ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ’ ಎಂದು ಕಥಾಹಂದರದ ಬಗ್ಗೆ ವಿವರಣೆ ನೀಡಿದರು.

 

ನವನಟ ಷಣ್ಮುಖ ‘ತಾಜ್’ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದ ಬಗ್ಗೆ ಮಾತನಾಡುವ ನಾಯಕ ನಟ ಷಣ್ಮುಖ, ‘ಮೊದಲ ಸಿನಿಮಾ 10 ಕಥೆಗಳನ್ನು ಕೇಳಿ ನಂತರ ಮಾಡಿದ ಸಿನಿಮಾ. ಈಗಾಗಲೇ ಬಹುತೇಕ ಕಾರ್ಯಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ತೆರೆಗೆ ಬರುವ ಯೋಜನೆಯಿದೆ. ಸುಮಾರು 8 ತಿಂಗಳ ಹಿಂದೆ ಶುರುವಾದ ಸಿನಿಮಾ ಈಗ ತೆರೆಗೆ ಬರುತ್ತಿದೆ. ಹಿಂದೂ-ಮುಸ್ಲಿಂ ನಡುವಿನ ಕಥೆ, ಮಾನವೀಯತೆಯ ನೆಲೆಗಟ್ಟು , ಸಾಮಾಜಿಕ ಸಂದೇಶ ಎರಡೂ ಸಿನಿಮಾದಲ್ಲಿದೆ. ನಮ್ಮ ನಡುವೆಯೇ ನಡೆದ ಕೆಲ ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.

 

ಆರಂಭದಲ್ಲಿ ಒಳ್ಳೆಯ ಸಿನಿಮಾ ಮಾಡುವ ಉದ್ದೇಶದಿಂದ ಚಿತ್ರರಂಗಕ್ಕೆ ಬಂದೆ. ಆ ನಂತರದ ಬೆಳವಣಿಯಲ್ಲಿ ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಬೇಕಾಯಿತು. ಇಂದಿನ ಪ್ರೇಕ್ಷಕರು ಬಯಸುವಂತ ಒಳ್ಳೆಯ ಕಥೆ, ಮನರಂಜನೆ ಎಲ್ಲವೂ ‘ತಾಜ್’ ಸಿನಿಮಾದಲ್ಲಿದ್ದು, ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

 

‘ತಾಜ್’ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಂಡಿರುವ ನಟ ವರ್ಧನ್ ಮಾತನಾಡಿ, ‘ಈ ಸಿನಿಮಾದಲ್ಲಿ ನಾನು ಮುಸ್ಲಿಂ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಮೊದಲ ಬಾರಿಗೆ ಇಂಥದ್ದೆೊಂದು ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ. ತುಂಬ ಅಚ್ಚುಕಟ್ಟಾಗಿ ಸಿನಿಮಾದ ಕೆಲಸಗಳು ನಡೆದಿದ್ದು, ಅಷ್ಟೇ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ’ ಎಂದು ‘ತಾಜ್’ ಸಿನಿಮಾದಲ್ಲಿನ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

 

ಬೆಂಗಳೂರು ಸುತ್ತಮುತ್ತ ‘ತಾಜ್’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು ಸಿನಿಮಾಕ್ಕೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ‘ತಾಜ್’ ಸಿನಿಮಾದ ಟೀಸರ್ ಮತ್ತು ಹಾಡಿನ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

 

ಸದ್ಯ ಬಿಡುಗಡೆಯಾಗಿರುವ ‘ತಾಜ್’ ಸಿನಿಮಾದ ಟೀಸರ್ ಮತ್ತು ಹಾಡು ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಸಿನಿಮಾ ಶೀಘ್ರದಲ್ಲಿಯೇ ತೆರೆಗೆ ಬರುತ್ತಿದೆ.

Copyright@2018 Chitralahari | All Rights Reserved. Photo Journalist K.S. Mokshendra,