Teddy Bear.Film News

Tuesday, June 18, 2024

65

 

ಟೆಡ್ಡಿ ಬೇರ್ ಮಧ್ಯಮ ಭಾಗದ ಕಥನ

 

       ’ಟೆಡ್ಡಿ ಬೇರ್’ ಚಿತ್ರದ ಪ್ರೊಮೋ, ಟ್ರೇಲರ್ ಹಾಗೂ ಕ್ಲೈಮಾಕ್ಸ್‌ದಲ್ಲಿ ಬರುವ ಗೀತೆ ಅನಾವರಣ ಕಾರ್ಯಕ್ರಮವು ಕಿಕ್ಕಿರಿದ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಆದ್ಯಲಕ್ಷೀ ಪ್ರೊಡಕ್ಷನ್ ಅಡಿಯಲ್ಲಿ ಜ್ಯೋತಿತಾರಕೇಶ್, ಭರತ್ ಮತ್ತು ನವೀನ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಟಾಲಿವುಡ್‌ನ ಪುರಿಜಗನ್ನಾಥ್ ಸಹಾಯಕರಾಗಿದ್ದ ಲೋಕೇಶ್.ಬಿ ಸಿನಿಮಾಕ್ಕೆ ಬರವಣಿಗೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

 

       ಈ ಸಂದರ್ಭದಲ್ಲಿ  ಮಾತನಾಡಿದ ನಿರ್ದೇಶಕರು ಇದು ನನ್ನ ಮೊದಲ ಸಿನಿಮಾ. ನಂತರ ’ಸುಡೂಕು’ ವಿಧುರ’ ’ವಿಕ್ರಮಾರ್ಕ’ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದೇನೆ. ಇದೆಲ್ಲವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀರ್ಷಿಕೆ ಮೇಲೆ ಇಲ್ಲಿಯವರೆಗೂ ಯಾರೂ ಚಿತ್ರ ಮಾಡಿರುವುದಿಲ್ಲ. ಹಾಲಿವುಡ್‌ದಲ್ಲಿ ಚಿತ್ರವೊಂದು ಬರುತ್ತಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಸಿನಿಮಾದಲ್ಲಿ ಮಧ್ಯಮ ಭಾಗದ ಕಥೆಯನ್ನು ಹೇಳಲಾಗುತ್ತಿದೆ. ಇನ್ನು ಪ್ರಿಕ್ವೆಲ್, ಸೀಕ್ವಲ್ ಬರಬೇಕಾಗಿದೆ. ಸಂಶೋಧನೆ ನಡೆಸಿ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಟೈಟಲ್ ಹೇಗೆ ಬಂತು. ಆತ್ಮ ಯಾವ ರೀತಿ ಗೊಂಬೆಯೊಳಗೆ ಸೇರಿಕೊಳ್ಳುತ್ತದೆ. ಇಂತಹ ಕುತೂಹಲಕಾರಿ ಅಂಶಗಳನ್ನು ತಿಳಿಯಲು ತಾವುಗಳು ಚಿತ್ರಮಂದಿರಕ್ಕೆ ಬರಬೇಕು. ’ಕಾಲ ಭೈರವೇಶ್ವರ’ ಸ್ವಾಮಿಯ ಹಾಡು ಮಾತ್ರ ಇರುತ್ತದೆ. ಬೆಂಗಳೂರು, ಮಂಗಳೂರು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಾಧ್ಯಮದ ಸಹಕಾರಬೇಕೆಂದು ಕೋರಿದರು.

      ’ಟೆಡ್ಡಿ ಬೇರ್’ ನನಗೆ ಪ್ರಥಮ ಅನುಭವ. ನಂತರ ಏಳು ಚಿತ್ರಗಳಲ್ಲಿ ಅವಕಾಶ ಸಿಕ್ಕಿತು. ಸೈಕಲಾಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆಂದು ನಾಯಕ ಭಾರ್ಗವ್ ಪರಿಚಯ ಮಾಡಿಕೊಂಡರು. ಶೈಲಜಸಿಂಹ, ದೀನಪೂಜಾರಿ ನಾಯಕಿಯರು. ಇವರೊಂದಿಗೆ ಸ್ವರ್ಶರೇಖಾ, ದಿಶಾಪೂವಯ್ಯ, ಕಿಟ್ಟಿತಾಳಿಕೋಟೆ, ಮುತ್ತು, ಅರವಿಂದ್, ಬೇಬಿ ಅಕ್ಷರ ಮುಂತಾದವರು ಅಭಿನಯಿಸಿದ್ದಾರೆ.

 

       ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಹೇಳುವಂತೆ ಇಂದು ಆಡಿಟೋರಿಯಂ ಹೌಸ್‌ಫುಲ್ ಆಗಿದೆ. ಇದನ್ನು ನೋಡಿದಾಗ ತಂಡದವರು ಎಷ್ಟೋಂದು ಪ್ರೀತಿ, ಅಭಿಮಾನಿಗಳನ್ನು ಗಳಿಸಿದ್ದಾರೆಂದು ತಿಳಿಯುತ್ತದೆ. ಚಿತ್ರ ಸಕ್ಸಸ್ ಆದಾಗ ನಮ್ಮನ್ನು ಎಲ್ಲಿಯೋ ತೆಗೆದುಕೊಂಡು ಹೋಗುತ್ತದೆ. ’ಕಾಂತಾರ’ ಪ್ರಾರಂಭದಲ್ಲಿ ಕಡಿಮೆ ಗಳಿಕೆ ಇದ್ದರೂ, ಬಾಯಿ ಮಾತಿನ ಪ್ರಚಾರದಿಂದ ವಿಶ್ವದಾದ್ಯಂತ ಸದ್ದು ಮಾಡಿತು. ಮಗು ಹುಟ್ಟಿದ ತಕ್ಷಣ ಅದು ಪಿಎಂ, ಸಿಎಂ,  ಡಾಕ್ಟರ್, ಇಂಜಿನಿಯರ್ ಆಗುತ್ತಾನೋ ಎಂಬುದು ತಿಳಿಯುವುದಿಲ್ಲ. ಆದರೆ ಸಿನಿಮಾ ಬಿಡುಗಡೆಯಾದ ದಿವಸವೇ ಅದರ ಫಲಿತಾಂಶ ಗೊತ್ತಾಗುತ್ತದೆ. ಬೆಳಗಿನ ಪ್ರದರ್ಶನಕ್ಕೆ ಬರುವ ಅಭಿಮಾನಿ ದೇವರುಗಳು ಆರ್ಶಿವಾದ ಮಾಡಿದರೆ ನಾವುಗಳು ಗೆದ್ದಂತೆ. ಒಂದು ಸಿನಿಮಾಕ್ಕೆ ನಿರ್ದೇಶಕ, ಸಂಗೀತ ಸಂಯೋಜಕ, ಛಾಯಾಗ್ರಾಹಕ, ಸಂಕಲನಕಾರ. ಈ ನಾಲ್ಕು ತಂತ್ರಜ್ಘರು ಒಳ್ಳೆ ಕೆಲಸ ಮಾಡಿದಾಗ ಮಾತ್ರ ಚಿತ್ರ ನಿಂತುಕೊಳ್ಳುತ್ತದೆ. ಅಂತಹುದನ್ನು ನೀವುಗಳು ಮಾಡಿರುತ್ತಿರಿ ಅಂತ ನಂಬಿರುತ್ತೇನೆ. ನಿಮ್ಮಗಳ ಪ್ರಯತ್ನಕ್ಕೆ ಶುಭವಾಗಲಿ ಎಂದು ಹರಸಿದರು.

 

      ಸಂಗೀತ ವಿವೇಕ್ ಜಂಗ್ಲಿ, ಛಾಯಾಗ್ರಹಣ ದೀಪು-ಬೆನಕರಾಜ್, ಸಂಕಲನ ಸಂತೋಷ್, ಸಾಹಸ ಸ್ಟಂಟ್ ಶಿವ-ಗಣೇಶ್-ಚನ್ನಕೃಷ್ಣ ಅವರದಾಗಿದೆ. ಅಂದುಕೊಂಡಂತೆ ಆದರೆ ಜುಲೈ ತಿಂಗಳಲ್ಲಿ ಸಿನಿಮಾವು ತೆರೆಗೆ ಬರಲಿದೆ.

Copyright@2018 Chitralahari | All Rights Reserved. Photo Journalist K.S. Mokshendra,