V Cinemas.News

Friday, June 14, 2024

65

 

*ರಮೇಶ್ ಅರವಿಂದ್ ಹಾಗೂ ಡಾಲಿ ಧನಂಜಯ ಅವರಿಂದ "ವಿ‌ ಸಿನಿಮಾಸ್" ಅನಾವರಣ* ..

 

 *ರಾಮಮೂರ್ತಿನಗರದಲ್ಲಿ ಆರಂಭವಾಯಿತು ಸುಸಜ್ಜಿತ ಮಲ್ಟಿಪ್ಲೆಕ್ಸ್* .

 

ಕನ್ನಡ ಚಿತ್ರರಂಗದಲ್ಲಿ ಇದೊಂದು ಉತ್ತಮ ಬೆಳವಣಿಗೆ ಎಂದರೆ ತಪ್ಪಾಗಲಾರದು. ಚಿತ್ರಮಂದಿರಗಳು ಮುಚ್ಚುತ್ತಿರುವ ಈ ಸಂದರ್ಭದಲ್ಲಿ ನೂತನ ಚಿತ್ರಮಂದಿರ ಪ್ರಾರಂಭವಾಗಿರುವುದು ನಿಜಕ್ಕೂ ಖುಷಿಯ ವಿಚಾರ.  ಹೌದು. ಇತ್ತೀಚಿಗೆ ಹೊಯ್ಸಳ ನಗರ, ರಾಮಮೂರ್ತಿ ನಗರದ ಮುಖ್ಯರಸ್ತೆಯಲ್ಲಿ "ವಿ ಸಿನಿಮಾಸ್" ಎಂಬ ನಾಲ್ಕು ಆಡಿಗಳ ಸುಸಜ್ಜಿತ ಮಲ್ಟಿಪ್ಲೆಕ್ಸ್ ಆರಂಭವಾಯಿತು.‌ ರಮೇಶ್ ಅರವಿಂದ್ ಚಿತ್ರಮಂದಿರವನ್ನು ಉದ್ಘಾಟಿಸಿ ಮೊದಲ ಶೋ ಗೆ ಟಿಕೇಟ್ ಪಡೆದರು. ಡಾಲಿ ಧನಂಜಯ ಪ್ರೊಜೆಕ್ಟರ್ ಚಾಲನೆ ಮಾಡಿದರು. ಹಿರಿಯ ವಿತರಕ ಮಾರ್ಸ್ ಸುರೇಶ್, ಮಾಲೀಕರಾದ ಅಜಿತ್ ಜಗದೀಶ್ ಹಾಗೂ ತಂತ್ರಜ್ಞ ಮ್ಯಾಥ್ಯೂ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ವಿತರಕ ಮಾರ್ಸ್ ಸುರೇಶ್ , ಅಜಿತ್ ಅವರು ರಾಮಮೂರ್ತಿ ನಗರದಲ್ಲಿ ಸುಸಜ್ಜಿತ ಚಿತ್ರಮಂದಿರವನ್ನು‌ ನಿರ್ಮಿಸಿದ್ದಾರೆ. ಈ ಚಿತ್ರಮಂದಿರ ನೋಡಿಕೊಳ್ಳುವ ಉಸ್ತುವಾರಿಯನ್ನು ನನಗೆ ನೀಡಿದ್ದಾರೆ. ನೂರರ ಆಸುಪಾಸಿ‌ನ ಆಸನದ ವ್ಯವಸ್ಥೆಯುಳ್ಳ ನಾಲ್ಕು ಆಡಿಗಳು ಇಲ್ಲಿದೆ. ಈಗಿನ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ನೋಡಿದರೂ, ಪರದೆಯಲ್ಲಿ ಸಿನಿಮಾ ಚೆನ್ನಾಗಿ ಕಾಣಬೇಕು ಆ ರೀತಿ ಆಸನದ ವ್ಯವಸ್ಥೆ ಮಾಡಲಾಗಿದೆ. ಟಿಕೇಟ್ ದರ ಕೂಡ ಬೇರೆ ಮಲ್ಟಿಪ್ಲೆಕ್ಸ್ ಗಳಿಗಿಂತ ತುಂಬಾ ಕಡಿಮೆ ಇರುತ್ತದೆ. ಮೊದಲ ಪ್ರಾಧಾನ್ಯತೆ ಕನ್ನಡ ಚಿತ್ರಗಳಿಗಿರುತ್ತದೆ. ಇಂದು ಮೊದಲ ಚಿತ್ರವಾಗಿ ಡಾಲಿ ಧನಂಜಯ ಅಭಿನಯದ "ಕೋಟಿ" ಚಿತ್ರ ಪ್ರದರ್ಶನವಾಗಿದೆ ಎಂದರು.

 

ಏನೇ ಆಧುನಿಕ ತಂತ್ರಜ್ಞಾನ ಬಂದರೂ ಥಿಯೇಟರ್ ನಲ್ಲಿ ಸಾವಿರಾರು ಜನರ ಮಧ್ಯೆ ಕುಳಿತು ಸಿನಿಮಾ ನೋಡುವ ಅನುಭವವೇ ಬೇರೆ. ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರ ನೋಡಿ. ಚಿತ್ರಮಂದಿರ ಪ್ರಾರಂಭ ಮಾಡಿರುವ ಮಾಲೀಕರಿಗೆ ಹಾಗೂ ಮಾರ್ಸ್ ಸುರೇಶ್ ಅವರಿಗೆ ಅಭಿನಂದನೆಗಳು ಎಂದರು ರಮೇಶ್ ಅರವಿಂದ್.

 

ಚಿತ್ರಮಂದಿರಲ್ಲಿ ಸಿನಿಮಾ ನೋಡುವ ಖುಷಿ ಮನೆಯಲ್ಲಿ ನೋಡಿದರೆ ಬರುವುದಿಲ್ಲ.. ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರವನ್ನು ನೋಡಿ ಆನಂದಿಸಿದಾಗ, ನಮ್ಮಂತಹ ನಟರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ಎಲ್ಲರೂ ಚಿತ್ರಮಂದಿರಗಳಲ್ಲೇ ಚಿತ್ರಗಳನ್ನು ನೋಡಿ  ಎಂದು ತಿಳಿಸಿದ ಡಾಲಿ ಧನಂಜಯ, "ವಿ ಸಿನಿಮಾಸ್" ಗೆ ಶುಭ ಹಾರೈಸಿದರು.

Copyright@2018 Chitralahari | All Rights Reserved. Photo Journalist K.S. Mokshendra,