Pendrive.Film News

Thursday, July 04, 2024

154

 

*" ಡೇವಿಡ್ ಅವರ "ಪೆನ್ ಡ್ರೈವ್" ನಲ್ಲಿ "ಬಿಗ್ ಬಾಸ್" ಖ್ಯಾತಿಯ ತನಿಷಾ ಕುಪ್ಪಂಡ* . 

 

  *ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಶುಭಕೋರಿದ ಕನ್ನಡ ಚಿತ್ರರಂಗದ ಗಣ್ಯರು* .        

 

 ಲಯನ್ ಆರ್ ವೆಂಕಟೇಶ್ ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ ಡೇವಿಡ್ ನಿರ್ದೇಶನದ ಹಾಗೂ "ಬಿಗ್ ಬಾಸ್" ಖ್ಯಾತಿಯ ತನಿಷಾ ಕುಪ್ಪಂಡ ಅಭಿನಯದ ನೂತನ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಇತ್ತೀಚಿಗೆ ನಡೆಯಿತು. ಚಿತ್ರಕ್ಕೆ "ಪೆನ್ ಡ್ರೈವ್" ಎಂದು ಹೆಸರಿಡಲಾಗಿದೆ‌. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಶುಭ ಕೋರಿದರು. ವೆಂಕಟೇಶ್, ನರಸಿಂಹಲು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಈವರೆಗೂ ಹದಿನೈದು ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದೇನೆ ಎಂದು ಮಾತನಾಡಿದ ನಿರ್ದೇಶಕ ಸೆಬಾಸ್ಟಿನ್ ಡೇವಿಡ್, "ಪೆನ್ ಡ್ರೈವ್" ಶೀರ್ಷಿಕೆ ನೀಡಿದ ವಾಣಿಜ್ಯ ಮಂಡಳಿಗೆ ಧನ್ಯವಾದ. ಪ್ರಸ್ತುತ ಚಾಲ್ತಿಯಲ್ಲಿರುವ "ಪೆನ್ ಡ್ರೈವ್" ಗು ನಮ್ಮ ಚಿತ್ರದ ಶೀರ್ಷಿಕೆಗೂ ಯಾವುದೇ ಸಂಬಂಧವಿಲ್ಲ. ಈ ಚಿತ್ರದ ಕಥೆಯೇ ಬೇರೆ. ನಮ್ಮ ಚಿತ್ರದಲ್ಲಿ "ಪೆನ್ ಡ್ರೈವ್" ಮುಖ್ಯಪಾತ್ರ ವಹಿಸುತ್ತದೆ. ಹಾಗಾಗಿ ಆ ಶೀರ್ಷಿಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಲಯನ್ ಎಸ್ ವೆಂಕಟೇಶ್ ಹಾಗೂ ಲಯನ್ ಆರ್ ವೆಂಕಟೇಶ್ ಅವರ ಸಹಕಾರದಿಂದ ಚಿತ್ರವನ್ನು ಬೇಗೆ ತೆರೆಗೆ ತರುವ ಪ್ರಯತ್ನ ಮಾಡುತ್ತೇನೆ. ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಹೆಚ್ಚಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ತನಿಷಾ ಕುಪ್ಪಂಡ, ರಾಧಿಕಾ ರಾಮ್, ಸಂಜನಾ ನಾಯ್ಡು, ಅರ್ಚನ, ರೇಣುಕಾ, ಗೀತಾ, ಭಾಗ್ಯ, ಗೀತಪ್ರಿಯ, ಕರಿಸುಬ್ಬು ಮುಂತಾದವರು ತಾರಾಬಳಗದಲ್ಲಿದ್ದಾರೆ. ತಾರಾಬಳಗದಲ್ಲಿ ಹೆಚ್ಚಿನವರು ಮಹಿಳೆಯರೆ ಇರುತ್ತಾರೆ. ಡಾ||ವಿ.ನಾಗೇಂದ್ರ ಪ್ರಸಾದ್ ಗೀತರಚನೆ ಹಾಗೂ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ‌ ಎಂದರು.

 

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು ಹಾಗಾಗಿ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆವು. ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕರಾದ ಲಯನ್ ಎಸ್ ವೆಂಕಟೇಶ್ ಹಾಗೂ ಲಯನ್ ಆರ್ ವೆಂಕಟೇಶ್.

 

"ಪೆನ್ ಡ್ರೈವ್" ಚಿತ್ರದ ಕಥೆ ಚೆನ್ನಾಗಿದೆ. ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಕೊಳ್ಳುತ್ತಿದ್ದೇನೆ ಎಂದು ನಟಿ ತನಿಷಾ ಕುಪ್ಪಂಡ ತಿಳಿಸಿದರು. ಹಾಡುಗಳ ಬಗ್ಗೆ ಡಾ||ವಿ.ನಾಗೇಂದ್ರಪ್ರಸಾದ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ ರಾಮ್, ಸಂಜನಾ ನಾಯ್ಡು,  ಕರಿಸುಬ್ಬು ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು. ಸಂಭಾಷಣೆ ಬರೆದು ಸಂಕಲನ ಮಾಡುತ್ತಿರುವ ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Copyright@2018 Chitralahari | All Rights Reserved. Photo Journalist K.S. Mokshendra,