Kannanjaru.News

Monday, July 08, 2024

49

 

ಕಣಂಜಾರು ಟೀಸರ್, 12 ಲಕ್ಷ ವೀಕ್ಷಣೆ !

 

  ಕಣಂಜಾರು ಕಾರ್ಕಳದ ಹತ್ತಿರ ಇರುವ ಒಂದು  ಊರು. ಅಲ್ಲಿ ಒಂದು ಪಟ್ಟದ ಮನೆಯಿದೆ. ಕಾಡಿನ ಮಧ್ಯೆ  ಇರುವ ದೈವದ ಮನೆ ಅದು. ಅದಕ್ಕೆ ಯಾರೂ ಬೀಗ ಹಾಕಿಲ್ಲ, ಆ ಮನೆಯ ಒಳಗೆ ಹೋಗುವಾಗ ಚಪ್ಪಲಿ ಬಿಟ್ಟು  ಹೋಗುತ್ತಾರೆ. ಅಲ್ಲಿ ಚಿತ್ರೀಕರಣ ನಡೆಸಲು ಯಾರಿಗೂ ಅನುಮತಿ ಕೊಡಲ್ಲ, ಆದರೆ ನಮಗೆ ದೇವರೇ ಹೂ ಕೊಟ್ಟಾಗ ಅನುಮತಿ ನೀಡಿದರು. ಇದು ಕರಾವಳಿ ತೀರದ ಕಥೆಯಾದರೂ  ನಾವಿಲ್ಲಿ  ಕಂಬಳ, ಕೋಲದ ಕಥೆ ಹೇಳ್ತಿಲ್ಲ ಎಂದು ನಿರ್ದೇಶಕ ಆರ್.ಬಾಲಚಂದ್ರ ಅವರು ತಾವೇ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಕಣಂಜಾರು ಚಿತ್ರದ  ಟೀಸರ್ ಸಕ್ಸಸ್ ಪ್ರೆಸ್‌ಮೀಟ್‌ನಲ್ಲಿ ಮಾತನಾಡುತ್ತ ಹೇಳಿದರು. 

 

   ಆರ್.ಪಿ. ಫಿಲಂಸ್ ಬ್ಯಾನರ್ ಅಡಿಯಲ್ಲಿ  ಆರ್.ಬಾಲಚಂದ್ರ ಕಥೆ, ಚಿತ್ರಕಥೆ ಬರೆದು  ನಿರ್ದೇಶಿಸುವ ಜತೆಗೆ ಬಂಡವಾಳ ಹಾಕಿ ನಿರ್ಮಿಸಿರುವ  ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿರುವ  ಚಿತ್ರ  ಕಣಂಜಾರು.  ಈ  ಚಿತ್ರದ ಟೀಸರ್ 4 ದಿನಗಳ ಹಿಂದಷ್ಟೇ  ಬಿಡುಗಡೆಯಾಗಿದ್ದು, ಈಗಾಗಲೇ ಹನ್ನೆರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ  ಟೈಟಲ್ ಮೋಷನ್ ಪೋಸ್ಟರ್ ಕೂಡ ಮೂರುವರೆ ಲಕ್ಷ ವೀಕ್ಷಣೆಯಾಗುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿತ್ತು. 

   ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಆರ್. ಬಾಲಚಂದ್ರ ಟೀಸರ್‌ಗೆ ಎಲ್ಲಾ ಕಡೆಯಿಂದ ಪಾಸಿಟಿವ್ ರೆಸ್ಪಾನ್ಸ್ ಬಂತು. ನಮಗೆ ಮೊದಲು ಬೇಕಾಗಿರುವುದೇ ಸಕ್ಸಸ್. ಕಣಂಜಾರು ಎಂಬ  ಸ್ಥಳ ಸಿಗಲಿಕ್ಕೆ ನಾನು ಸಾವಿರಾರು ಕಿಲೋಮೀಟರ್ ಜರ್ನಿ ಮಾಡಿದೆ. ಕೊನೆಗೆ ಕಾರ್ಕಳ ಹತ್ತಿರ ಈ ಲೊಕೇಶನ್ ಸಿಕ್ತು. ಇದೊಂದು ಯೂನಿಕ್ ಕಾನ್ಸೆಪ್ಟ್, ನನ್ನ ಜೊತೆ ಕಲಾವಿದರು ಟೆಕ್ನೀಶಿಯನ್ಸ್ ಸಹಕಾರ ನೀಡಿದ್ದರಿಂದಲೇ ಇಂಥ ಚಿತ್ರ ಮಾಡಲು ಸಾಧ್ಯವಾಯಿತು. ಕಣಂಜಾರು ಎಂಬ ಊರಲ್ಲಿ ನಡೆಯುವ ಕಥೆ, ಕಾರ್ಕಳ, ಉಡುಪಿ, ಹೊನ್ನಾವರ  ಮತ್ತಿತರ ಲೊಕೇಶನ್‌ಗಳಲ್ಲಿ 60 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಬೆಂಗಳೂರು, ಮಂಗಳೂರು ಭಾಗದ ಭಾಷೆಯನ್ನೇ  ಚಿತ್ರದಲ್ಲಿ ಬಳಸಿದ್ದೇವೆ, ಈ ಹಿಂದೆ ಮಹಾನುಭಾವರು ಎಂಬ ಚಿತ್ರ ಮಾಡಿದ್ದೆ, ನಾನೊಬ್ಬ ಆಕ್ಟರ್ ಆಗಬೇಕೆಂಬ ಕನಸಿಟ್ಟುಕೊಂಡೇ ಬಂದವನು. ಫೈನಲ್ಲಾಗಿ ನಾನೇ ನೆರ್ದೇಶನ ಮಾಡಬೇಕಾಯ್ತು. ಚಿತ್ರದಲ್ಲಿ ಮೂರು ಹಾಡುಗಳಿದ್ದು ಹರ್ಷವರ್ಧನ್‌ರಾಜ್ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡುವ ಯೋಜನೆಯಿದೆ, ಥೇಟರ್ ಹಿನ್ನೆಲೆಯಿಂದ ಬಂದವರು, ಬಹುತೇಕ ಸ್ಥಳೀಯ ಕಲಾವಿದರು ಈ ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ. ಉಳಿದ ಮಾಹಿತಿಯನ್ನು ಹಂತ ಹಂತವಾಗಿ ಹಂಚಿಕೊಳ್ಳುವುದಾಗಿ ಆರ್. ಬಾಲಚಂದ್ರ ಅವರು  ಹೇಳಿದರು.

 

     ಈ ಚಿತ್ರದಲ್ಲಿ ನಾಯಕಿಯಾಗಿ ಕೃಷ್ಣ ಟಾಕೀಸ್ ಖ್ಯಾತಿಯ ನಟಿ ಅಪೂರ್ವ ನಟಿಸಿದ್ದಾರೆ.  ತನ್ನ ಪಾತ್ರದ ಕುರಿತಂತೆ ಅವರು  ಮಾತನಾಡುತ್ತ ಆರಂಭದಲ್ಲಿ ಹೊಸ ತಂಡ ಹೇಗೆ ಮಾಡ್ತಾರೋ ಅನ್ನೋ ಅನುಮಾನ ಖಂಡಿತ ನನಗಿತ್ತು. ಟೀಸರ್ ನೋಡಿದ ನನ್ನ ಸ್ನೇಹಿತೆಯರು ಕಾಲ್ ಮಾಡಿ ಹೇಳಿದಾಗ ಖುಷಿಯಾಯ್ತು. ತುಂಬಾ ಫ್ಯಾಷನ್ ಇರುವ ನಿರ್ದೇಶಕರು, ನಟನೆ, ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಸಹ ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿತ್ರದಲ್ಲಿ ನನ್ನದು ಕ್ಯಾಮಿಯೋ ರೋಲ್ ಆದರೂ ತುಂಬಾ ತೂಕ ಇರುವ, ಚಿತ್ರಕಥೆಗೆ ತಿರುವು ನೀಡುವಂಥ ಪಾತ್ರ ಎಂದು ಹೇಳಿದರು. ಮತ್ತೊಬ್ಬನಟ ಕಾರ್ತೀಕ್ ಪೂಜಾರಿ, ಛಾಯಾಗ್ರಾಹಕ ಮಂಜುನಾಥ ಹೆಗ್ಡೆ ಚಿತ್ರದ ವಿಶೇಷತೆಗಳ ಕುರಿತಂತೆ ಮಾತನಾಡಿದರು.

   ಶರ್ಮಿತಾಗೌಡ, ಹಿರಿಯನಟ ರಾಮಕೃಷ್ಣ, ಪಿ.ಎಸ್. ಶ್ರೀಧರ್, ಮೇಘ ಸೇರಿದಂತೆ ಸಾಕಷ್ಟು  ಕಲಾವಿದರು ಈ  ಚಿತ್ರದಲ್ಲಿ ನಟಿಸಿದ್ದಾರೆ. ಶಶಾಂಕ್ ಶೇಷಗಿರಿ ಅವರ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ  ಅವರ ಸಂಕಲನ, ಮಂಜುನಾಥ್ ಹೆಗ್ಡೆ ಅವರ  ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,