ಕೆಂಡ ಟ್ರೈಲರ್ ನಲ್ಲಿ ಕಂಡು ಕೇಳರಿಯದ ಕಥೆಯ ಸುಳಿವು!
ಸಹದೇವ್ ಕೆಲವಡಿ ನಿರ್ದೇಶನದ ಕೆಂಡ ಚಿತ್ರ ಇದೇ ತಿಂಗಳ 26ರಂದು ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಚಿತ್ರ ಅಂತಾರಾಷ್ಟ್ರೀಯ ಸಿನಿಮಾ ಫೆಸ್ಟಿವಲ್‍ಗಳಲ್ಲಿ ಬಿಡುಗಡೆಗೊಂಡಿದೆ. ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡಿದೆ. ಭಾರತದಲ್ಲಿ ಇಂಥಾ ಸಿನಿಮಾಗಳನ್ನೂ ರೂಪಿಸ್ತಾರಾ ಎಂಬಂಥಾ ಬೆರಗೊಂದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಂಡ ಪ್ರತಿಷ್ಠಾಪಿಸಿ ಬಿಟ್ಟಿದೆ. ಇಷ್ಟೆಲ್ಲ ಖುಷಿಯ ಪುಳಕಗಳೊಂದಿಗೆ ಚಿತ್ರತಂಡವೀಗ ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಿದೆ. ಅಚ್ಚುಕಟ್ಟಾದ ಪತ್ರಿಕಾ ಗೋಷ್ಠಿಯ ಮೂಲಕ ಕೆಂಡದ ಟ್ರೈಲರ್ ಅನ್ನು ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್ ಲೋಕಾರ್ಪಣೆಗೊಳಿಸಿದ್ದಾರೆ. ಇದೇ ಹೊತ್ತಿನಲ್ಲಿ ಕೆಂಡದ ಬಗೆಗಿನ ಒಂದಷ್ಟು ಬೆರಗಿನ ವಿಚಾರಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ಸೂಕ್ಷ್ಮ ಮನಃಸ್ಥಿತಿಯ ನಿರ್ದೇಶಕನ ಕೈಗೆ ಭೂಗತ ಜಗತ್ತಿನ ಕಥೆ ಸಿಕ್ಕರೆ, ಅಲ್ಲಿ ಬೇರೊಂದು ಆಯಾಮದ ದೃಷ್ಯಕಾವ್ಯ ರೂಪುಗೊಳ್ಳೋದು ಖಚಿತ. ಕೆಂಡದಲ್ಲಿರೋದೂ ಕೂಡಾ ಅಂಥಾದ್ದೇ ರೌಡಿಸಮ್ಮಿನ ಸುತ್ತ ಜರುಗುವ ಕಥನ. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋ ಯುವಕನೋರ್ವ, ಪರಿಸ್ಥಿತಿಗಳ ಸೆಳವಿಗೆ ಸಿಕ್ಕು ಭೂಗತದ ತೆಕ್ಕೆಗೆ ಬೀಳುವ ಕಥೆ ಇಲ್ಲಿದೆ. ಹಾಗಂತ ಅದು ಸಿದ್ಧ ಸೂತ್ರಗಳ ಸುತ್ತ ಗಿರಕಿ ಹೊಡೆಯುವಂಥಾದ್ದಲ್ಲ. ಕೈಗೆ, ಮೈ ಮನಸಿಗೆ ಮೆತ್ತಿಕೊಂಡ ರಕ್ತದ ಕಲೆಗಳನ್ನ ಕಲಾತ್ಮಕವಾಗಿ ತೋರಿಸಲು ಸಾಧ್ಯವಾ? ಸುಡುವ ಕ್ರೌರ್ಯವನ್ನು ಸೂಕ್ಷ್ಮ ಸಂವೇದನೆಯ ಒಳಗಣ್ಣಿನಿಂದ ನೋಡಲು ಹೇಗೆ ಸಾಧ್ಯ? ಇದು ಸಿನಿಮಾಸಕ್ತರನ್ನು ಕಾಡುವ ಗೊಂದಲ ಬೆರೆತ ಅಚ್ಚರಿ. ಅಂಥಾ ಅಚ್ಚರಿಗಳೇ ಬೆರಗುಗೊಳ್ಳುವಂತೆ ಕೆಂಡ ಚಿತ್ರ ಮೂಡಿ ಬಂದಿದೆ ಎಂಬ ಮುನ್ಸೂಚನೆ ಈ ಟ್ರೈಲರಿನಲ್ಲಿ ಸ್ಪಷ್ಟವಾಗಿ ಸಿಕ್ಕಿಬಿಟ್ಟಿದೆ.
ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ನಿರ್ದೇಶಕ ಸಹದೇವ್ ಕೆಲವಡಿ, ನಿರ್ಮಾಪಕಿ ರೂಪಾ ರಾವ್, ಸಂಗೀತ ನಿರ್ದೇಶಕ ರಿತ್ವಿಕ್ ಕಾಯ್ಕಿಣಿ, ರಂಗಭೂಮಿಯಿಂದ ಬಂದಿರುವ, ಈ ಚಿತ್ರದ ನಾಯಕ ಬಿ.ವಿ ಭರತ್, ಪ್ರಣವ್ ಶ್ರೀಧರ್, ಹಿರಿಯ ರಂಗಭೂಮಿ ಕಲಾವಿದ ವಿನೋದ್ ರವೀಂದ್ರನ್, ಸತೀಶ್, ಫೃಥ್ವಿ, ದೀಪ್ತಿ ಮುಂತಾದವರು ಪಾಲ್ಗೊಂಡಿದ್ದರು. ಮೊದಲಿಗೆ ಮಾತಾಡಿದ ರೂಪಾ ರಾವ್ ಕೆಂಡ ಚಿತ್ರ ರೂಪುಗೊಂಡ ಬಗ್ಗೆ, ಅದರ ಕಥೆಯ ಬಗ್ಗೆ ಹಾಗೂ ಅಮೇಯುಕ್ತಿ ಸ್ಟುಡಿಯೋಸ್ ಹುಟ್ಟಿನ ವಿಚಾರವಾಗಿ ಒಂದಷ್ಟು ವಿಚಾರಗಳನ್ನ ಹಂಚಿಕೊಂಡರು. ನಿರ್ದೇಶಕ ಸಹದೇವ್ ಕೆಲವಡಿ ಕೆಂಡ ರೂಪುಗೊಂಡಿದ್ದರ ಹಿಂಚುಮುಂಚಿನ ರಸವತ್ತಾದ ವಿವರಗಳನ್ನು ಹಂಚಿಕೊಂಡರು.
ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಂಡ ಶೀಘ್ರದಲ್ಲೇ ತೆರೆಗಾಣಲಿದೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಕೆಂಡವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ, ರೇಖಾ ಕೂಡ್ಲಿಗಿ, ಪ್ರಭಾಕರ್ ಜೋಶಿ ಮುಂತಾದವರ ತಾರಾಗಣವಿದೆ.