Vidyarthi Vidyarthiyare.News

Thursday, July 11, 2024

92

 

ಬಿ ಸೈಡ್ ಟ್ರೈಲರ್ ಮೂಲಕ ಬೆರಗಾಗಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು!

ಅರುಣ್ ಅಮುಕ್ತ ನಿರ್ದೇಶನದ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಇದೇ ತಿಂಗಳ 19ರಂದು ತೆರೆಗಾಣುತ್ತಿದೆ. ಈಗಾಗಲೇ ಸೈಡ್ ಎ ಟ್ರೈಲರ್ ಮೂಲಕ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು.ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿ ಸೈಡ್ ಬಿ ಟ್ರೈಲರ್ ಲಾಂಚ್ ಆಗಿದೆ. ಜಬರ್ದಸ್ತ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಟ್ರೈಲರ್ ಕಂಡವರೆಲ್ಲ ಅಕ್ಷರಶಃ ಥ್ರಿಲ್ ಆಗಿದ್ದಾರೆ. ಶೀರ್ಷಿಕೆ ನೋಡಿದವರು ಒಂದು ಸಿದ್ಧಸೂತ್ರದ ಕಲ್ಪನೆ ಮೂಡಿಸಿಕೊಂಡಿದ್ದರು. ಆದರೆ, ಈ ಸಿನಿಮಾ ಅದೆಲ್ಲವನ್ನೂ ಮೀರಿಕೊಂಡ ರಗಡ್ ಕಥೆಯನ್ನೊಳಗೊಂಡಿದೆ ಎಂಬುದನ್ನು ಸೈಡ್ ಬಿ ಟ್ರೈಲರ್ ಸಾಕ್ಷೀಕರಿಸಿದೆ!

ನಿರ್ದೇಶಕ ಅರುಣ್ ಅಮುಕ್ತ ಇದೊಂದು ಭಿನ್ನ ಕಥಾನಕ ಎಂಬ ಸುಳಿವು ಬಿಟ್ಟುಕೊಟ್ಟಿದ್ದರು. ಈಗ ಸದರಿ ಟ್ರೈಲರ್ ಅದನ್ನು ಸಾಬೀತುಪಡಿಸಿದೆ. ಈ ಮೂಲಕ ಒಂದಿಡೀ ಸಿನಿಮಾದ ಝಲಕ್ಕುಗಳು ಸ್ಪಷ್ಟವಾಗಿ ಜಾಹೀರಾಗಿವೆ. ಕಾಲೇಜು ಕಹಾನಿಯ ಸುತ್ತಾ, ಮೈನವಿರೇಳಿಸೋ ಸಸ್ಪೆನ್ಸ್ ಥ್ರಿಲ್ಲರ್, ಕ್ರೈಂ ನೊಂದಿಗೆ ಈ ಸಿನಿಮಾ ರೂಪುಗೊಂಡಿರೋದೂ ಸ್ಪಷ್ಟವಾಗಿದೆ. ನೋಡಿದವರೆಲ್ಲ ಇದೊಂದು ಪ್ರಾಮಿಸಿಂಗ್ ಟ್ರೈಲರ್ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಲೇಬೇಕೆಂಬ ತುಡಿತ ಮೂಡಿಸುವಷ್ಟು ಪರಿಣಾಮಕಾರಿಯಾಗಿ ಈ ಟ್ರೈಲರ್ ಅನ್ನು ರೂಪಿಸಲಾಗಿದೆ.

ಈವರೆಗೂ ಒಂದಷ್ಟು ಹಾಡುಗಳ ಮೂಲಕವೇ ಪ್ರಧಾನವಾಗಿ ಈ ಸಿನಿಮಾ ಸೆಳೆದುಕೊಂಡಿತ್ತು. ಇದೀಗ ತೆರೆಗಾಣುವ ಕಡೇ ಘಳಿಗೆಯಲ್ಲಿ ಬಿ ಸೈಡ್ ಟ್ರೈಲರ್ ಮೂಲಕ ಚಿತ್ರತಂಡ ಮೋಡಿ ಮಾಡಿದೆ. ಈ ಮೂಲಕ ಪಾತ್ರಗಳ ಚಹರೆಗಳೆಲ್ಲ ಜಾಹೀರಾಗಿವೆ. ಒಂದು ವೇಳೆ ಟ್ರೈಲರ್ ನಲ್ಲಿ ಕಾಣಿಸಿರುವ ಬಿಗುವಿನಲ್ಲಿಯೇ ಒಂದಿಡೀ ಸಿನಿಮಾ ಮೂಡಿ ಬಂದಿದ್ದರೆ ಗೆಲುವು ಗ್ಯಾರೆಂಟಿ ಎಂಬಂಥಾ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ. ರ್ಯಾಪರ್ ಚಂದನ್ ಶೆಟ್ಟಿಯ ಪಾತ್ರವೂ ನೋಡುಗರ ಗಮನ ಸೆಳೆದಿದೆ. ಇಲ್ಲಿ ಅವರಿಗೆ ಅಪರೂಪದ ಪಾತ್ರವೊಂದು ಸಿಕ್ಕಿರುವ ಸುಳಿವೂ ಕೂಡಾ ಪ್ರೇಕ್ಷಕರನ್ನು ತಲುಪಿದೆ. ನಿಖರವಾಗಿ ಹೇಳಬೇಕೆಂದರೆ, ನಿರ್ದೇಶಕ ಅರುಣ್ ಅಮುಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೊತೆ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ದಟ್ಟವಾಗಿ ಗೋಚರಿಸುತ್ತಿವೆ.

ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ ಅರುಣ್ ಸುರೇಶ್  ಈ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ಚಂದನ್ ಶೆಟ್ಟಿ, ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

Copyright@2018 Chitralahari | All Rights Reserved. Photo Journalist K.S. Mokshendra,