Maddy.Film News

Saturday, July 13, 2024

107

 

ಯುವ ಪಡೆಗಳ "ಮ್ಯಾಡಿ" ಟೈಟಲ್ , ಬ್ಯಾನರ್, ಹೀರೋ ಇಂಟ್ರೊಡಕ್ಷನ್ ಪ್ರಮೋಶನಲ್ ಸಾಂಗ್ ರಿಲೀಸ್.

 

 

ಮಾಜಿ ಸಚಿವ ಹೆಚ್. ಎಂ.ರೇವಣ್ಣ ಹಾಗೂ ನಿರ್ಮಾಪಕ  ಉಮಾಪತಿ ಶ್ರೀನಿವಾಸ್ ಗೌಡ ರಿಂದ ಬಿಡುಗಡೆ.

 

 

 

ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ಯುವ ಪಡೆಗಳ ತಂಡ ಭರ್ಜರಿಯಾಗಿ ಸದ್ದು ಮಾಡಲು ಸಿದ್ಧವಾಗಿದೆ. ಬಹಳಷ್ಟು  ಪೂರ್ವ ತಯಾರಿಯೊಂದಿಗೆ ಸಿನಿಮಾ ಮಾಡಲು ಮುಂದಾಗಿರುವ ಈ  ತಂಡವು ತಮ್ಮ ಚಿತ್ರ ಸಂಸ್ಥೆಯ ಹೆಸರು ,  ಶೀರ್ಷಿಕೆ ಹಾಗೂ ನಾಯಕನ ಪರಿಚಯಿಸುವ ಪ್ರಮೋಷನಲ್ ಸಾಂಗ್ ಬಿಡುಗಡೆ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ಬೆಂಗಳೂರಿನ ಕಲಾವಿದರ ಭವನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಯಿತು. ಈ ಒಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಹೆಚ್. ಎಂ. ರೇವಣ್ಣ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ , ಭರ್ಜರಿ ಚೇತನ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

 

ಮಾಜಿ ಸಚಿವರಾದ ಹೆಚ್. ಎಂ. ರೇವಣ್ಣ ಅವರು ನೂತನ ಸಂಸ್ಥೆ ಮಹೇಶ್ಮತಿ ಬ್ಯಾನರ್ ಲೋಗೋ ಲಾಂಚ್ ಮಾಡಿದರು. ತದನಂತರ ಹೀರೋ ಇಂಟ್ರೊಡಕ್ಷನ್ ಸಾಂಗ್ ನೋಡಿ ಮಾತನಾಡುತ್ತಾ ಅಂದಿನ ಡ್ಯಾನ್ಸ್ ಹಾಗೂ ಇಂದಿನ ಡ್ಯಾನ್ಸ್ ಗೂ ತುಂಬಾ ವ್ಯತ್ಯಾಸವಿದೆ. ಹೀರೋ ತುಂಬಾ ಜೋಶ್ ಹಾಗೂ ಶ್ರಮಪಟ್ಟು ಸಾಂಗ್ ಮಾಡಿದ್ದಾರೆ. ಇಡೀ ತಂಡಕ್ಕೆ ಶುಭವಾಗಲಿ ಚಿತ್ರ ಯಶಸ್ವಿಯಾಗಿ ಮೂಡಿ ಬರಲಿ ಎಂದು ಶುಭ ಕೋರಿದರು.

ಹಾಗೆಯೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ಚಿತ್ರದ ಟೈಟಲ್ ಪೋಸ್ಟರ್ ರಿವಿಲ್ ಮಾಡಿದ್ದನ್ನ ಕೂಡ  ಪ್ರದರ್ಶಿಸಲಾಯಿತು.

 

ಇನ್ನು ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ  ಹೀರೋ ಫಸ್ಟ್ ಲುಕ್ ರಿವೀಲ್ ಮಾಡಿ ಮಾತನಾಡುತ್ತಾ , ಈ ಚಿತ್ರದ ಹೀರೋ ಅಂಡ್ ಟೀಮ್ ನನಗೆ ಬಹಳ ಆತ್ಮೀಯರು. ಒಂದು ಪ್ರಮೋಶನಲ್ ಸಾಂಗೇ ಇಷ್ಟು ಅದ್ಭುತವಾಗಿ ಮಾಡಿರುವುದು ಖುಷಿಕೊಟ್ಟಿದೆ. ನನಗೆ ಹಾಡು ಬಹಳ ಇಷ್ಟ ಆಯಿತು. ಅದರಲ್ಲೂ ಚಿತ್ರ ಸಾಹಿತಿ ಚೇತನ್ ಕುಮಾರ್ ಹಾಡಿರುವುದು ಮತ್ತೊಂದು ವಿಶೇಷ. ಇನ್ನು ಮುಂದೆ ಇವರು  ಎಕ್ಸ್ಪೆನ್ಸಿವ್ ಸಿಂಗರ್ ಆಗುತ್ತಾರೆ. ಸಿನಿಮಾ ಶೋಕಿ ಅಲ್ಲ. ಶ್ರದೆ , ಪ್ರಾಮಾಣಿಕತೆ ಮುಖ್ಯ. ಇಲ್ಲಿ ಬೆಳೆಯಬೇಕಾದರೆ  ವಿದ್ಯೆ ಗಿಂತ ಬದುಕೋ ಕಲೆ ಮುಖ್ಯ. ಇಡೀ ತಂಡ ಬಹಳ ಉತ್ಸಾಹದಿಂದ ಮುಂದಾಗಿದ್ದಾರೆ. ಯುವಕರ ತಂಡಕ್ಕೆ ಶುಭವಾಗಲಿ ಎಂದರು.

ಈ ಚಿತ್ರಕ್ಕೆ ಪ್ರಮೋಶನಲ್ ಸಾಂಗ್ ಬರೆದು ಹಾಗೂ ಗಾಯಕರಾಗಿ ಹಾಡಿರುವ  ನಿರ್ದೇಶಕ ಭರ್ಜರಿ ಚೇತನ್ ಕುಮಾರ್ ಮಾತನಾಡುತ್ತಾ ನಾಯಕ ನಟ ಧನುಷ್ ಕುಮಾರ್ ನನ್ನ ಪ್ರೀತಿಯ ಗೆಳೆಯ ಪಮ್ಮಿ ಹತ್ತು ವರ್ಷಗಳಿಂದ ಸ್ನೇಹಿತ, ಹಾಗೆ ನಿರ್ದೇಶಕ ನಾಗಭೂಷಣ್ ಕೂಡ ಬಹಳಷ್ಟು ವರ್ಷಗಳಿಂದ ಸಹ ನಿರ್ದೇಶಕನಾಗಿ ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿದ್ದಾನೆ. ಇದು ಅವನ ಪ್ರಥಮ ನಿರ್ದೇಶನದ ಚಿತ್ರ , ಒಂದು ಪ್ರಮೋಷನಲ್ ಹಾಡು ಬೇಕು ಎಂದಾಗ ಬರೆಯಲು ಮುಂದಾದೆ. ನನಗೆ ಬರೆಯುವುದು ಅಂದರೆ ಇಷ್ಟ. ಈ ’ಜೋರು ಜೋರು ಸಿಕ್ಕಾಪಟ್ಟೆ ಜೋರು’... ಎಂಬ ಹಾಡು ಆರು ವರ್ಷನ್ ಬದಲಾವಣೆ ನಂತರ ಬಹಳ ಸುಂದರವಾಗಿ ಮೂಡಿ ಬಂದಿದೆ. ನಾನು ಟ್ರ್ಯಾಕ್ ಮಾತ್ರ ಹಾಡಿದ್ದೆ. ಅದನ್ನೇ ಈಗ ತಂಡ ಬಳಸಿಕೊಂಡು ಸಾಂಗ್ ಹೊರ ತಂದಿದೆ. ಈ ಸಾಂಗ್ ಗೆ ಹಾಕಿರುವ ಎಫರ್ಟ್ ಸ್ಕ್ರೀನ್ ಮೇಲೆ ಕಾಣುತ್ತೆ. ಚಿತ್ರ ಚೆನ್ನಾಗಿ ಮೂಡಿಬರಲಿ ಎಂದು ಶುಭ ಕೋರಿದರು.  ಇನ್ನು ಮತ್ತೊಬ್ಬ ಚಿತ್ರ ಸಾಹಿತಿ ಗೌಸ್ ಪೀರ್, ನಟ ಧರ್ಮಣ್ಣ , ನಿರ್ದೇಶಕ ಮದಗಜ ಮಹೇಶ್ ಸೇರಿದಂತೆ ಹಲವಾರು ಗಣ್ಯರು ಇಡೀ ತಂಡಕ್ಕೆ ಶುಭವನ್ನು ಹಾರೈಸಿದರು.

 

ಈ ಚಿತ್ರದ ನಾಯಕ ಧನುಷ್ ಕುಮಾರ್ (ಪಮ್ಮಿ) ಮಾತನಾಡುತ್ತಾ ನನಗೆ ಬಾಲ್ಯದಿಂದಲೂ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ. ನಾನು ಪಕ್ಕಾ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್  ಅಭಿಮಾನಿ. ನಾನು ಹೀರೋ ಆಗಬೇಕೆಂಬ ನನ್ನ ಕನಸಿಗೆ ಮಾರ್ಗದರ್ಶನ ನೀಡಿದ್ದೆ ನನ್ನ ಗುರು ಭರ್ಜರಿ ಚಿತ್ರ ನಿರ್ದೇಶಕ ಚೇತನ್ ಕುಮಾರ್. ನನಗೆ ಅವರು ಸಿಕ್ಕಾಗ ಹೇಳುತ್ತಿದ್ದಿದ್ದು ಒಂದೇ ಮಾತು. ಮೊದಲು ಪೂರ್ವ ತಯಾರಿ ಮಾಡಿಕೊಂಡು ಎಲ್ಲವನ್ನು ಕಲಿತು ಚಿತ್ರರಂಗಕ್ಕೆ  ಬಾ , ಇಲ್ಲದಿದ್ದರೆ ನಿನ್ನ ಹಣವನ್ನ ಮನೆಯಲ್ಲಿ ಇಟ್ಟುಕೋ ಎಂದು ಬುದ್ದಿ ಮಾತು ಹೇಳುತ್ತಿದ್ದರು. ನನಗೆ ಉಮಾಪತಿ ಅಣ್ಣ ಹಾಗೂ ದೀಪಣ್ಣ ತುಂಬಾ ಸಪೋರ್ಟ್ ಮಾಡಿದ್ದಾರೆ. ನಾನು ಕೂಡ ಡ್ಯಾನ್ಸ್ , ಫೈಟ್ , ಆಕ್ಟಿಂಗ್ ಕಲಿತು ಈಗ "ಮ್ಯಾಡಿ" ಚಿತ್ರದ ಮೂಲಕ ನಿಮ್ಮ ಮುಂದೆ ಬರುತ್ತಿದ್ದೇನೆ. ಇದರಲ್ಲಿ ನನ್ನ ಪಾತ್ರ ಒಂದು ರೀತಿ ಮ್ಯಾಡ್ ನೆಸ್ ಯಾಗಿ ಇರುತ್ತೆ. ಇದೊಂದು ವಿಭಿನ್ನ   ಗ್ಯಾಂಗ್ಸ್ಟರ್ ಚಿತ್ರ. ನಿಮ್ಮೆಲ್ಲರ ಪ್ರೀತಿ , ಸಹಕಾರ ನನ್ನ ಮೇಲೆ ಇರಲಿ ಎಂದು ಕೇಳಿಕೊಂಡರು.

ಶ್ರೀ ಮಹೇಶ್ಮತಿ  ಕಂಬೈನ್ಸ್ ಮೂಲಕ ಸರಸ್ವತಿ. ಆರ್ . ನಾಗೇಶ್ ನಿರ್ಮಿಸುತ್ತಿರುವ ಈ ಚಿತ್ರದ  ಎಸ್ಕ್ಯೂಟಿವ್ ಪ್ರೊಡ್ಯೂಸರ್ ರಾಮ್ ಪ್ರಸಾದ್ ಮಾತನಾಡುತ್ತಾ ಒಂದು ಫ್ಯಾಮಿಲಿ , ಮಾಸ್ , ಆಕ್ಷನ್ ಚಿತ್ರವನ್ನ ನೀಡುತ್ತಿದ್ದೇವೆ. ಈ ಚಿತ್ರವನ್ನು ನಮ್ಮ ತಾಯಿ ನಿರ್ಮಿಸುತ್ತಿರುವುದು , ನಾನು ಇದರ ಉಸ್ತುವಾರಿಕೆಯನ್ನು ನೋಡಿಕೊಳ್ಳುತ್ತಿದ್ದೇನೆ. ನಮ್ಮ ಚಿತ್ರತಂಡಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೆಂಬಲವಿರಲಿ ಎಂದು ಕೇಳಿಕೊಂಡರು.

 

ಈ ಚಿತ್ರದ ನಿರ್ದೇಶಕ ನಾಗಭೂಷಣ್ ಎಸ್.ಆರ್. ಮಾತನಾಡುತ್ತಾ ಇದು ನನ್ನ 15 ವರ್ಷದ ಶ್ರಮ ಹಾಗೂ ಬಾಲ್ಯದ ಕನಸು ಫಲವಾಗಿ ಸಿಕ್ಕಿರುವ ಚಿತ್ರ. ಮೊದಲಿಗೆ ಡಾ. ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ನೆನೆಯುತ್ತಾ , ನಾನು ಜೀವ ಕೊಟ್ಟ ತಾಯಿ  ಗಿರಿಜಮ್ಮ ಹಾಗೂ ಜೀವನ ಕೊಟ್ಟ ತಾಯಿ ಸರಸ್ವತಮ್ಮ ರವರಿಗೆ ತುಂಬು ಧನ್ಯವಾದ ತಿಳಿಸುತ್ತೇನೆ. ಹಾಗೆ ಈ ಕಾರ್ಯಕ್ರಮಕ್ಕೆ ಬಂದಂತ ಗಣ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ನಾವು ಇಡೀ ತಂಡ ಬಹಳಷ್ಟು ಪ್ಲಾನ್ ಮಾಡಿಕೊಂಡು ಸುಮಾರು ನಾಲ್ಕು ವರ್ಷಗಳ ನಿರಂತರ ಶ್ರಮವಾಗಿ ಇಂದು ಚಿತ್ರದ ಬ್ಯಾನರ್ , ಟೈಟಲ್ ಹಾಗೂ ಹೀರೊ ಇಂಟ್ರೊಡಕ್ಷನ್ ಬಹಳ ಮುಖ್ಯ ಎಂಬ ಕಾರಣದಿಂದ ಪ್ರಮೋಶನಲ್ ಸಾಂಗ್ ಅನ್ನ ಹೊರತಂದಿದ್ದೇವೆ. ಸಾಮಾನ್ಯವಾಗಿ ಟೀಸರ್ , ಫಸ್ಟ್ ಲುಕ್ ಬರುತ್ತೆ. ನಾವು ಸ್ವಲ್ಪ ವಿಭಿನ್ನವಾಗಿ ಸಾಂಗ್ ಮೂಲಕ ಲಾಂಚ್ ಮಾಡಿದ್ದೇವೆ. ಇದೊಂದು ಗ್ಯಾಂಗ್ಸ್ಟರ್ ಕಥೆ. ಮಾಸ್ , ಆಕ್ಷನ್ , ಲವ್ , ಫ್ಯಾಮಿಲಿ ಡ್ರಾಮಾ ಎಲ್ಲವು ಒಳಗೊಂಡಿದೆ.  ಬೆಂಗಳೂರು , ಉತ್ತರ ಕರ್ನಾಟಕ  , ಕೋಲಾರ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಒಟ್ಟು ಈ ಚಿತ್ರದಲ್ಲಿ ಐದು ಹಾಡುಗಳಿದ್ದು ಧರ್ಮ ವಿಶ್ವ ಸಂಗೀತ ನೀಡಲಿದ್ದಾರೆ. ಈ ಪ್ರಮೋಶನಲ್ ಸಾಂಗ್ ಸಾಂಗ್ ಅವರೇ ಮಾಡಿದ್ದು , ಚೇತನ್ ಕುಮಾರ್ ಸಾಂಗ್ ಬರೆದು ಹಾಡಿದ್ದಾರೆ. ಹಾಗೆಯೇ ಅದಿತಿ ಸಾಗರ್ ಕೂಡ ಧ್ವನಿಗೂಡಿಸಿದ್ದಾರೆ. ಲವಿತ್ ಛಾಯಾಗ್ರಾಣವಿರುವ ಈ ಚಿತ್ರಕ್ಕೆ  ವಿಜಯ್ ಕುಮಾರ್ ಸಂಕಲನ , ಅರ್ಜುನ್ ರಾಜ್ , ಚಂದ್ರು ಬಂಡೆ ಸಾಹಸ ಸಂಯೋಜನೆ , ಭಜರಂಗಿ ಮೋಹನ್ , ಗೋಕುಲ್ ಕೊರಿಯೋಗ್ರಾಫ್, ಸುಮಂತ್ ಪತ್ರಿಕಾ ಸಂಪರ್ಕವಿದೆ. "ಮ್ಯಾಡಿ" Nick Name Of Violence... ಎಂಬ ಅಡಿಬರವಿರುವ ಈ ಚಿತ್ರದ ಪ್ರಮೋಶನಲ್ ಸಾಂಗ್ ಬಾರಿ ಅದ್ದೂರಿಯಾಗಿ ಮೂಡಿಬಂದಿದ್ದು, ಚಿತ್ರ ಬಹಳಷ್ಟು ನಿರೀಕ್ಷೆ ಮೂಡಿಸಿದೆ. ಇನ್ನು ಚಿತ್ರದ ನಾಯಕಿ ಹಾಗೂ ಉಳಿದ ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಂಡ ಮುಂದಿನ ದಿನಗಳಲ್ಲಿ ನೀಡಲಿದೆಯಂತೆ.

Copyright@2018 Chitralahari | All Rights Reserved. Photo Journalist K.S. Mokshendra,