*ಟ್ರೇಲರ್ ನಲ್ಲೇ ಮೋಡಿ ಮಾಡಿದ "ಗ್ರೇ ಗೇಮ್ಸ್"*
*ವಿಜಯ ರಾಘವೇಂದ್ರ ಅಭಿನಯದ ಈ ಚಿತ್ರ ಮೇ ಹತ್ತರಂದು ಬಿಡುಗಡೆ*
ಆನಂದ್ ಮುಗದ್ ನಿರ್ಮಾಣದ, ಪ್ರಶಸ್ತಿ ವಿಜೇತ "ಆಯನ" ಚಿತ್ರದ ಖ್ಯಾತಿಯ ಗಂಗಾಧರ್ ಸಾಲಿಮಠ ನಿರ್ದೇಶನದ ಹಾಗೂ "ಚಿನ್ನಾರಿ ಮುತ್ತ" ವಿಜಯ ರಾಘವೇಂದ್ರ ಪ್ರಮುಖಪಾತ್ರದಲ್ಲಿ ನಟಿಸಿರುವ "ಗ್ರೇ ಗೇಮ್ಸ್" ಚಿತ್ರದ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಎಸ್ ಎ ಚಿನ್ನೇಗೌಡ, ಅಶ್ವಿನಿ ಪುನೀತ್ ರಾಜಕುಮಾರ್, ಶ್ರೀಮುರಳಿ, ವೀಣಾ ಮುಂತಾದ ಗಣ್ಯರು ಸೇರಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಚಿತ್ರದ ಮೂಲಕ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಅವರ ಸೋದರ ಅಳಿಯ(ಅಕ್ಕನ ಮಗ) ಜೈ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶೃತಿ ಪ್ರಕಾಶ್, ಭಾವನ ರಾವ್, ಇಶಿತಾ, ರವಿ ಭಟ್, ಅಪರ್ಣ ವಸ್ತಾರೆ, ರವಿ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರ ಮೇ ಹತ್ತರಂದು ಬಿಡುಗಡೆಯಾಗಲಿದೆ.
ಈ ಚಿತ್ರದ ಟ್ರೇಲರ್ ತುಂಬಾ ಚೆನ್ನಾಗಿದೆ. ನನ್ನ ಅಣ್ಣ ರಾಘು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದಾನೆ. ನಾವು ಆಡಿ ಬೆಳೆಸಿದ ಅಕ್ಕನ ಮಗ ಜೈ ಕೂಡ ಈ ಚಿತ್ರದಲ್ಲಿ ನಟಿಸಿರುವುದು ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಲಿ ಎಂದು ಶ್ರೀಮುರಳಿ ಹಾರೈಸಿದರು.
ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಟ್ರೇಲರ್ ನಾನು ಕೂಡ ಇಂದೆ ನೋಡಿದ್ದು. ಚೆನ್ನಾಗಿದೆ. ಈ ಸಮಯದಲ್ಲಿ ನಾನು ಪುನೀತ್ ರಾಜಕುಮಾರ್ ಹಾಗೂ ನನ್ನ ಪತ್ನಿ ಸ್ಪಂದನ ಅವರನ್ನು ಸ್ಮರಿಸಿಕೊಳ್ಳುತ್ತೇನೆ. ನನ್ನ ಅಕ್ಕನ ಮಗ ಜೈ ಕಂಡರೆ ಸ್ಪಂದನಗೆ ಬಹಳ ಪ್ರೀತಿ. ಇಂದು ಸ್ಪಂದನ ಇದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಮೇ ಹತ್ತರಂದು ತೆರೆಗೆ ಬರುತ್ತಿರುವ ನಮ್ಮ ಚಿತ್ರವನ್ನು ನೀವೆಲ್ಲಾ ನೋಡಿ. ಪ್ರೋತ್ಸಾಹ ನೀಡಿ ಎಂದರು ವಿಜಯ ರಾಘವೇಂದ್ರ.
ಇದೊಂದು ಮೈಂಡ್ ಗೇಮ್ ಕುರಿತಾದ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಗಂಗಾಧರ್ ಸಾಲಿಮಠ, ಕನ್ನಡದಲ್ಲಿ ಇದು ಅಪರೂಪ ಕಥೆ ಎನ್ನಬಹುದು. ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಪಡೆದು ಕೊಂಡಿರುವ ಈ ಚಿತ್ರ ಮುಂದಿನವಾರ ತೆರೆಗೆ ಬರುತ್ತಿದೆ. ಈ ಚಿತ್ರ ಉತ್ತಮವಾಗಿ ಬರಲು ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಶ್ರಮವಿದೆ ಎಂದು ತಿಳಿಸಿದರು ಹಾಗೂ ಚಿತ್ರತಂಡದ ಸದಸ್ಯರನ್ನು ಪರಿಚಯಿಸಿದರು.
ಅವಕಾಶ ಕೊಟ್ಟವರಿಗೆ ಧನ್ಯವಾದ ತಿಳಿಸಿದ ನೂತನ ನಟ ಜೈ, ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಟಿಯರಾದ ಭಾವನರಾವ್, ಇಶಿತಾ ಕೂಡ "ಗ್ರೇ ಗೇಮ್ಸ್" ಕುರಿತು ಮಾತನಾಡಿದರು.