ಶೀರ್ಷಿಕೆ ಹಳೇದು ಕಥೆ ಹೊಸತು
೮೦ರ ದಶಕದಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ‘ಧ್ರುವತಾರೆ’ ಚಿತ್ರವು ಬಿಡುಗಡೆಗೊಂಡು ಹಿಟ್ ಆಗಿತ್ತು. ನಾಲ್ಕು ದಶಕದ ನಂತರ ಈಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸಿದ್ದಗೊಂಡಿದೆ. ಜಿ.ಪಿ.ಫಿಲಂಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಗಣೇಶ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ಮೈಸೂರು ಮೂಲದ ಪ್ರತೀಕ್ ನಿರ್ದೇಶನದ ಜೊತೆಗೆ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಹಾಡುಗಳು ಹೊರಬಂದಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕರು ಹೇಳುವಂತೆ ಇದು ನನಗೆ ಐದು ವರ್ಷದ ಕನಸು. ಮೂರು ವರ್ಷಗಳ ಶ್ರಮ. ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ ಅನುಭವದಿಂದಲೇ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದೇನೆ. ಫ್ಯಾಮಿಲಿ ಡ್ರಾಮಾ ಕಥೆಯನ್ನು ಒಳಗೊಂಡಿದೆ. ಸಿನಿಮಾ ಚೆನ್ನಾಗಿದ್ದರೆ ಜನರು ಚಿತ್ರಮಂದಿರಕ್ಕೆ ಬರುತ್ತಾರೆಂಬ ನಂಬಿಕೆ ಇದೆ. ನನ್ನ ಹೆಂಡ್ತಿ ಹೀರೋಯಿನ್ ಆಗಿದ್ದರಿಂದ ಡೈರಕ್ಷನ್ ಮಾಡಲು ಕಷ್ಟ ಆಯಿತು. ಆದರೂ ಕ್ಯಾಮಾರ ಮುಂದೆ ಆಕೆ ಚೆನ್ನಾಗಿ ಅಭಿನಯಿಸಿದ್ದಾರೆ ಎಂದರು.
ಸಿನಿಮಾಗೆ ಬರ್ತಿನಿ ಅಂಥ ಕನಸಿನಲ್ಲಿ ಅಂದುಕೊಂಡಿರಲಿಲ್ಲ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಿನಿಮಾದವರನ್ನೆ ಮದುವೆ ಆಗಿದ್ದೇನೆ. ಅಪೂರ್ವ ಹೆಸರಿನಲ್ಲಿ ಮುಗ್ದೆಯಾಗಿ, ಡ್ಯಾನ್ಸ್ ಇಷ್ಟಪಡುವ, ಬಾಡಿ ಶೇಮಿಂಗ್ ಎಷ್ಟು ಪರಿಣಾಮ ಬೀರುತ್ತದೆ ಎಂದು ಪಾತ್ರದ ಮೂಲಕ ತೋರಿಸಲಾಗಿದೆ. ಗೊತ್ತಿಲ್ಲದೆಯೇ ಆ ಪಾತ್ರಕ್ಕೆ ಎಲ್ಲರೂ ಕೆನಕ್ಟ್ ಆಗುತ್ತಾರೆಂಬ ನಂಬಿಕೆ ಇದೆ ಎನ್ನುತ್ತಾರೆ ನಾಯಕಿ ಮೌಲ್ಯ.
ತಾರಾಗಣದಲ್ಲಿ ರಮೇಶ್‌ಭಟ್, ಮೂಗುರುಸುರೇಶ್, ಸುಮನ್‌ನಗರಕರ್, ಅಶ್ವಿನ್‌ರಾವ್‌ಪಲ್ಲಕ್ಕಿ, ಪಿ.ಡಿ.ಸತೀಶ್ ಹಾಗೂ ಖಳನಾಗಿ ಬಿಗ್‌ಬಾಸ್ ಖ್ಯಾತಿಯ ಕಾರ್ತಿಕ್‌ಮಹೇಶ್ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಸಿನಿಮಾವು ಸೆಪ್ಟಂಬರ್ ೨೦ರಂದು ತೆರೆಗೆ ಬರಲಿದೆ.