*"ರಾನಿ" ನೋಡಲು ಆಗಸ್ಟ್ 30 ಅಲ್ಲ. ಇನ್ನೂ ಎರಡು ವಾರ ಕಾಯಬೇಕು* .
ಕಿರಣ್ ರಾಜ್ ಅಭಿನಯದ ‘ರಾನಿ’ ಚಿತ್ರ ಆರಂಭದಿಂದಲೂ ಸದ್ದು ಮಾಡುತ್ತಿದೆ. ಮೊದಲು ಹೇಳಿದ ಹಾಗೆ ಆಗಸ್ಟ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ ಈಗ ’ರಾನಿ’ ಆಗಸ್ಟ್ 30 ರ ಬದಲು ಸೆಪ್ಟೆಂಬರ್ 12 ರಂದು ತೆರೆಗೆ ಬರಲಿದೆ. ಪ್ರಸ್ತುತ ಬಿಡುಗಡೆಯಾಗಿರುವ ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಚಿತ್ರಮಂದಿರಗಳ ಸಮಸ್ಯೆ ಎದುರಾಗಬಾರದೆಂದು ಈ ನಿರ್ಧಾರ ತೆಗದುಕೊಂಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ತಿಳಿಸಿದೆ.
ಮೊದಲು ಮಾತನಾಡಿದ ನಿರ್ದೇಶಕ ಗುರುತೇಜ್ ಶೆಟ್ಟಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ ಮತ್ತು ‘ಭೀಮ’ ಚಿತ್ರತಂಡಗಳಿಗೆ ಧನ್ಯವಾದ ಹೇಳಿದರು. ಆಗಸ್ಟ್ 20ರಂದು ನಮ್ಮ ಚಿತ್ರದ ಟ್ರೇಲರ್ ಬರಬೇಕಿತ್ತು. ಚಿತ್ರ ಆಗಸ್ಟ್ 30ರಂದು ಬಿಡುಗಡೆ ಆಗಬೇಕಿತ್ತು. ಭೀಮ ಹಾಗೂ ಕೃಷ್ಣಂ ಪ್ರಣಯ ಸಖಿ ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿರುವುದರಿಂದ, ನಮಗೆ ಚಿತ್ರಮಂದಿರಗಳ ಸಮಸ್ಯೆ ಆಗ ಬಹುದು ಎಂದು ವಿತರಕರು ಹೇಳಿದರು. ನಾವು ಬಿಡುಗಡೆ ಮಾಡುವ ಹೊತ್ತಿಗೆ ಎಷ್ಟು ಚಿತ್ರಮಂದಿರಗಳು ಸಿಗುತ್ತದೆ ಗೊತ್ತಿಲ್ಲ. ಚೆನ್ನಾಗಿ ಶೇರ್ ಸಿಕ್ಕರೆ, ಚಿತ್ರಮಂದಿರ ತೆಗೆಯುವುದು ಸರಿಯಲ್ಲ. ಹಾಗಾಗಿ ಮುಂದೆ ಹೋಗುತ್ತಿದ್ದೇವೆ. ಮುಂದೆ ಹೋಗುತ್ತಿರುವುದಕ್ಕೆ ಬೇಸರವಿಲ್ಲ. ಖುಷಿಯದೆ. ಏಕೆಂದರೆ, ಜನ ಈಗ ಚಿತ್ರಮಂದಿರದತ್ತ ಬರುತ್ತಿದ್ದಾರೆ. ಸೆಪ್ಟೆಂಬರ್ 12ರಂದು ಬಿಡುಗಡೆ ಮಾಡುತ್ತಿದ್ದೇವೆ. ನಮ್ಮದು ದೊಡ್ಡ ಬಜೆಟ್‍ನ ಸಿನಿಮಾ. ಹಾಗಾಗಿ ಸ್ವಲ್ಪ ತಡೆದು ದೊಡ್ಡಮಟ್ಟದಲ್ಲೇ ರಿಲೀಸ್ ಮಾಡಬೇಕು. ಹಾಗಾಗಿ ಬಿಡುಗಡೆ ದಿನಾಂಕ ಮುಂದೆ ಹೋಗಿದೆ ಎಂದರು.
ಈ ಚಿತ್ರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ನಿಮ್ಮ ನಿರೀಕ್ಷೆಗೆ ತಕ್ಕ ಹಾಗೆ ಚಿತ್ರ ಇದೆ. ಚಿತ್ರ ಬಿಡುಗಡೆ ಸ್ವಲ್ಪ ಮುಂದೆ ಹೋಗಿದೆ ಅಷ್ಟೇ. ಇಷ್ಟು ದಿನಗಳಿಂದ ನೀವು ನನ್ನ ಮೇಲಿಟ್ಟಿರುವ ಪ್ರೀತಿಗೆ ಚಿರಋಣಿ, ಆ ಪ್ರೀತಿ ಈ ಚಿತ್ರದಿಂದ ಇನ್ನಷ್ಟು ಜಾಸ್ತಿಯಾಗುತ್ತದೆ. ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಎಂಟು ವರ್ಷಗಳ ಅಂತರದಲ್ಲಿ ಕಥೆ ನಡೆಯುತ್ತದೆ. ಎರಡು ಗೆಟಪ್‍ಗಳಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವ ನಾಯಕ ಕಿರಣ್ ರಾಜ್, ಈ ಚಿತ್ರ ನನ್ನ ಪಾಲಿಗೆ ಬಹಳ ಮಹತ್ವದ್ದು . ಈ ಗೆಲುವು ನನಗೆ ಬಹಳ ಮುಖ್ಯ. ಏನೇ ಕನಸು ಮತ್ತು ಗುರಿ ಇದ್ದರೂ, ಒಂದು ಶಕ್ತಿ ಬಹಳ ಮುಖ್ಯವಾಗುತ್ತದೆ. ಆ ಶಕ್ತಿ ಬರಬೇಕು ಎಂದರೆ ನಮ್ಮ ಮೇಲೆ ನಂಬಿಕೆ ಇರಬೇಕು. ಆ ನಂಬಿಕೆ ಬರಬೇಕು ಎಂದರೆ ಈ ಚಿತ್ರ ಗೆಲ್ಲಲೇಬೇಕು. ಇಲ್ಲವಾದರೆ, ನಾನು ಪುನಃ ಮೊದಲಿನಿಂದಲೂ ಶುರು ಮಾಡಬೇಕು ಎಂದರು.
ಈ ಚಿತ್ರಕ್ಕೆ ನಿರ್ದೇಶಕ ಗುರು ತೇಜ್ ಶೆಟ್ಟಿ ಸುಮ್ಮನೆ ಸ್ಕ್ರೀನ್ ಪ್ಲೇ ಮಾಡಿಲ್ಲ. ಒಂದಿಷ್ಟು ಊರುಗಳಲ್ಲಿ ಸರ್ವೆ ಮಾಡಿ ಅಲ್ಲಿನ ಜನ ನನ್ನನ್ನು ಯಾವರೀತಿ ಪಾತ್ರದಲ್ಲಿ ನೋಡಿದರೆ ಇಷ್ಟ ಪಡುತ್ತಾರೆ ಎಂದು ತಿಳಿದುಕೊಂಡು ಸರ್ವೆ ಮಾಡಿದ್ದಾರೆ ಎಂದು ಸಹ ಕಿರಣ್ ರಾಜ್ ತಿಳಿಸಿದರು.
‘ರಾನಿ’ ಚಿತ್ರದಲ್ಲಿ ಕಿರಣ್ ರಾಜ್ ಜೊತೆಗೆ ಸಮೀಕ್ಷಾ, ಅಪೂರ್ವ, ರಾಧ್ಯ, ರವಿಶಂಕರ್, ಮೈಕೋ ನಾಗರಾಜ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಘವೇಂದ್ರ ಬಿ ಕೋಲಾರ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ಈ ಚಿತ್ರವನ್ನು ಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ಚಂದ್ರಕಾಂತ್ ಪೂಜಾರಿ ಮತ್ತು ಉಮೇಶ್ ಹೆಗಡೆ ನಿರ್ಮಿಸಿದ್ದಾರೆ.