ಪ್ರವರದೊಂದಿಗೆ ಪ್ರಾರಂಭವಾದ
" ಗ್ಯಾಂಗ್ಸ್ ಆಫ್ ಯುಕೆ "
ಡೆಡ್ಲಿ ಸೋಮ, ಮಾದೇಶ, ದಶಮುಖ ಹೀಗೆ ಬಹುತೇಕ ಸ್ಟಾರ್ ಚಿತ್ರಗಳನ್ನೇ ನಿರ್ದೇಶಿಸಿದ ರವಿ ಶ್ರೀವತ್ಸ ಅವರೀಗ ತಮ್ಮದೇ ಆದ ಹೊಸ ನಿರ್ಮಾಣ ಸಂಸ್ಥೆಯೊದನ್ನು ಸ್ಥಾಪಿಸಿದ್ದು, ಆ ಮೂಲಕ ನಿರ್ಮಾಣವಾಗುತ್ತಿರುವ ’ಗ್ಯಾಂಗ್ಸ್ ಆಫ್ ಯುಕೆ’
ಚಿತ್ರದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ.
ಇತ್ತೀಚೆಗೆ ರವಿ ಶ್ರೀವತ್ಸ ಅವರ ’ಡೆಡ್ಲಿ ಆರ್ಟ್ಸ್’ ಸಂಸ್ಥೆಯ ಲಾಂಛನ ಬಿಡುಗಡೆ ಹಾಗೂ ಗ್ಯಾಂಗ್ಸ್ ಆಫ್ ಯುಕೆ ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ನಿರ್ದೇಶಕ ಕೆವಿ.ರಾಜು ಅವರ ಧರ್ಮಪತ್ನಿ ನೂತನ ನಿರ್ಮಾಣ ಸಂಸ್ಥೆಯ ಲಾಂಛನಕ್ಕೆ ಚಾಲನೆ ನೀಡಿದರು.
ಕನ್ನಡದ ಹಿರಿಯ ನಿರ್ದೇಶಕ ಕೆ.ವಿ. ರಾಜು ಅವರ ಬಳಿ ಬರವಣಿಗೆ, ನಿರ್ದೇಶನದ ಪಾಠ ಕಲಿತಿದ್ದ ರವಿ ಶ್ರೀವತ್ಸ, ಆರಂಭದಲ್ಲಿ ಕೆವಿ. ರಾಜು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವಾಗ ವಿದ್ಯೆ ಕಲಿಸಿದ ಗುರುಗಳನ್ನು ನೆನೆದು ಗಗ್ಗದಿತರಾದ ಅವರ ಕಣ್ಣಲ್ಲಿ ಕಂಬನಿಧಾರೆ ಹರಿಯಿತು.
ನಂತರ ಮಾತನಾಡುತ್ತ ನಾನು ಒಳ್ಳೆ ಸಿನಿಮಾ ಮಾಡ್ಬೇಕು ಅಂದಾಗೆಲ್ಲ ಅವರು ಹಿಂದೆ ನಿಲ್ತಿದ್ದರು. 2018ರಲ್ಲಿ ಮಾಡಿಕೊಂಡಿದ್ದ ಕಥೆಯಿದು. ಅವರನ್ನು ಮಿಸ್ ಮಾಡಿಕೊಂಡ ಮೇಲೆ ಎಂ.ಎಸ್. ರಮೇಶ್ ನನಗೆ ಜೊತೆಯಾದರು. ಕಳೆದ ಡಿಸೆಂಬರ್ ನಲ್ಲಿ ರಮೇಶ್ ಅವರಿಗೆ ಈ ಕಥೆ ಹೇಳಿದಾಗ ಯಾರೆಲ್ಲ ಕಲಾವಿದರಿರ್ತಾರೆ ಅಂತ ಕೇಳಿದರು. ಒಟ್ಟು 56 ಕಲಾವಿದರಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಏ.18ಕ್ಕೆ ಚಿತ್ರದ ಮುಹೂರ್ತ ನಡೆಸಿ ಶೂಟಿಂಗ್ ಪ್ರಾರಂಭಿಸಿದೆವು. ಆನಂತರದಲ್ಲಿ ಒರಟ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ, ಮುನಿ ಹೀಗೆ ಹೊಸಬರ ಜೊತೆ ಹಳಬರೂ ನಮ್ಮ ಬಳಗಕ್ಕೆ ಸೇರ್ಪಡೆಯಾದರು. ಕಳೆದ ಶನಿವಾರ ಚಿತ್ರದ ಶೂಟಿಂಗ್ ಮುಗಿಸಿದೆವು.
ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ ನಲ್ಲಿ ನಡೆದ ಘಟನೆ ಇಟ್ಟುಕೊಂಡು ಮಾಡಿದ ಚಿತ್ರಕಥೆಯಿದು. ರಕ್ತ ತನ್ನ ಕುರುಹನ್ನು ಬಿಟ್ಟು ಹೋಗುತ್ತೆ, ಜಿದ್ದು ಒಬ್ಬರಿಂದ ಒಬ್ಬರಿಗೆ ಟ್ರಾವೆಲ್ ಆಗುತ್ತೆ. ಇದು ಚಿತ್ರದ ಕಾನ್ಸೆಪ್ಟ್. ಅಲ್ಲಿನ ಡಿಸಿಪಿ ನಮಗೆ ತುಂಬಾ ಸಹಾಯ ಮಾಡಿದರು. ನಿರ್ಮಾಪಕರಾಗಿ ಎಲ್.ಎನ್. ರೆಡ್ಡಿ ಅವರೂ ನನ್ನಜೊತೆ ಕೈಜೋಡಿಸಿದರು. ಉತ್ತರ ಕರ್ನಾಟಕದ ಹತ್ಯಾಕಾಂಡ ಎಂಬ ಟ್ಯಾಗ್ ಲೈನ್ ಈ ಚಿತ್ರಕ್ಕಿದೆ ಎಂದು ಹೇಳಿದರು.
ನಂತರ ಎಂ.ಎಸ್.ರಮೇಶ್ ಮಾತನಾಡಿ ನಾವಿಲ್ಲಿ ನಿಂತಿದ್ದೇವೆ ಅಂದ್ರೆ ಅದಕ್ಕೆ ಕೆ.ವಿ.ರಾಜು ಅವರೇ ಕಾರಣ. ಯಾವಾಗಲೂ ನಿನ್ನ ಕೆಲಸವನ್ನು ನೀನು ನಂಬು ಅಂತಿದ್ದರು. ಬಾಗಲಕೋಟೆಯಲ್ಲಿ
ಡಿಸಿ ಜಾನಕಿ, ಎಸ್ಪಿ ಹೀಗೆ ಎಲ್ಲರೂ ನಮಗೆ ಸಪೋರ್ಟ್ ಮಾಡಿದರು. ಬಾಲಣ್ಣನ ಥರವೇ ಇರುವ ಟಂಕಸಾಲೆ ಉಮೇಶ್, ಮಹಂತೇಶ್ ಹುಲ್ಲೂರು ಇಂಥ ಸ್ಥಳೀಯ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ರಾ ಫೀಲ್ ಕೊಡುವಂಥ ಡೈಲಾಗ್ ಗಳನ್ನು ಇಲ್ಲಿ ಕಾಣಬಹುದು ಎಂದರು.
ಕೆವಿ. ರಾಜು ಅವರ ಪುತ್ರ ಅಮೋಘ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನು ಉಪಾಧ್ಯ, ಪ್ರವೀಣ್, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್ ಹೀಗೆ ಸಾಕಷ್ಟು ನವ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಪತ್ರಕರ್ತ ನವೀನ್ ಬಂಗಾರಪ್ಪ ಭೋಸರಾಜ ಹೆಸರಿನ ಉಸ್ತುವಾರಿ ಸಚಿವರಾಗಿ ನಟಿಸಿದ್ದಾರೆ.
ವಿಶೇಷವಾಗಿ ಶಿಶುನಾಳ ಷರೀಫರ 8 ಗೀತೆಗಳನ್ನು ತೆಗೆದುಕೊಂಡು ಬಿಟ್ಸ್ ಮಾಡಿದ್ದೇವೆ. ಒಟ್ಟು 9 ಹಾಡುಗಳು ಚಿತ್ರದಲ್ಲಿದ್ದು, ಸಾಧು ಕೋಕಿಲ್ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ಡಿಸೆಂಬರ್ ಅಥವಾ ಜನವರಿಗೆ ತೆರೆಮೇಲೆ ಬರಬೇಕೆಂದು ಪ್ಲಾನ್ ಮಾಡಿಕೊಂಡಿದ್ದೇವೆ ಎಂಬುದಾಗಿಯೂ ರವಿ ಶ್ರೀವತ್ಸ ಹೇಳಿದರು.