Vidhyarthi Vidyarthiniyare.News

Tuesday, July 16, 2024

72

 

ಜುಲೈ 19ರಂದು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಬಿಡುಗಡೆ

 

ದುಬೈನಲ್ಲಿ ಪ್ರೀಮಿಯರ‍್ ಶೋ; ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ

 

ಈಗಾಗಲೇ ಟೀಸರ‍್, ಹಾಡುಗಳು ಮತ್ತು ಎರಡು ಟ್ರೇಲರ‍್ಗಳಿಂದ ಗಮನಸೆಳೆದಿರುವ ಅರುಣ್‍ ಅಮುಕ್ತ ರಚಿಸಿ-ನಿರ್ದೇಶಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವು ಇದೇ ಶುಕ್ರವಾರ (ಜುಲೈ 19) ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ, ಇತ್ತೀಚೆಗೆ ದುಬೈನಲ್ಲಿ ಚಿತ್ರದ ಪ್ರೀಮಿಯರ‍್ ಶೋ ಆಗಿದ್ದು, ಚಿತ್ರ ನೋಡಿರುವ ಅನಿವಾಸಿ ಕನ್ನಡಿಗರು ಚಿತ್ರವನ್ನು ಮೆಚ್ಚಿಕೊಂಡಿರುವುದಷ್ಟೇ ಅಲ್ಲ, ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

 

ಈ ವಿಷಯವನ್ನು ಹಂಚಿಕೊಳ್ಳುವುದಕ್ಕೆ ಇತ್ತೀಚೆಗೆ ಚಿತ್ರತಂಡದವರು ಮಾಧ್ಯಮಗೋಷ್ಠಿ ಆಯೋಜಿಸಿ, ಚಿತ್ರದ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಚಂದನ್‍ ಶೆಟ್ಟಿ, ಸುನೀಲ್‍ ಪುರಾಣಿಕ್‍, ಅರವಿಂದ್ ರಾವ್‍, ಪ್ರಶಾಂತ್ ಸಂಬರ್ಗಿ, ದುಬೈನಲ್ಲಿ ಚಿತ್ರ ಬಿಡುಗಡೆ ಮಾಡಿರುವ OMG Moviesನ ಮಮತಾ ಸೆಂಧಿಲ್‍, ಅಮರ‍್, ಮನೋಜ್‍, ಮನಸ್ವಿ ಸೇರಿದಂತೆ ಚಿತ್ರತಂಡದ ಹಲವರು ಹಾಜರಿದ್ದರು.

 

ಈ ಸಂದರ್ಭದಲ್ಲಿ ಮಾತನಾಡಿದ ಚಂದನ್‍ ಶೆಟ್ಟಿ, ‘ಇದು ಬಿಡುಗಡೆಯಾಗುತ್ತಿರುವ ನನ್ನ ಮೊದಲ ಚಿತ್ರ. ಈ ಚಿತ್ರವನ್ನು ಜನ ಒಪ್ಪುತ್ತಾರಾ? ನನ್ನ ಅಭಿನಯ ಇಷ್ಟವಾಗುತ್ತದಾ? ಎಂಬ ಭಯ ಇತ್ತು. ಈಗ ಒಂದು ಮಟ್ಟಕ್ಕೆ ರಿಲ್ಯಾಕ್ಸ್ ಆಗಿದ್ದೀನಿ. ಅದಕ್ಕೆ ಕಾರಣ ದುಬೈನಲ್ಲಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ. ಅಲ್ಲಿ ಸಾಕಷ್ಟು ಕನ್ನಡಿಗರು ಚಿತ್ರ ನೋಡಿದರು. ಅವರು ಎಲ್ಲ ಸಿನಿಮಾಗಳನ್ನು ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. ಇಡೀ ಚಿತ್ರಮಂದಿರ ತುಂಬಿತ್ತು. ಚಿತ್ರ ಮುಗಿದ ಮೇಲೆ ಎಲ್ಲರೂ ಒಳ್ಳೆಯ ಅಭಿಪ್ರಾಯಗಳನ್ನು ಹೇಳಿದ್ದಾರೆ. ಅವರಿಗೆ ನಾನು ಸದಾ ಚಿರಋಣಿ. ಈ ತಂಡದ ಭಾಗವಾಗಿರುವುದಕ್ಕೆ ನಾನು ನಿಜಕ್ಕೂ ಅದೃಷ್ಟವಂತ ಎಂದರೆ ತಪ್ಪಿಲ್ಲ. ನಮ್ಮ ನಿರ್ಮಾಪಕರು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದೆ, ಎಲ್ಲದಕ್ಕೂ ಬಹಳ ಸಹಕಾರ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಾನು ಹೀರೋ ಎನ್ನುವುದಕ್ಕಿಂತ, ಅಮರ್, ಭಾವನಾ, ಮನಸ್ವಿ, ಸಿಂಚನಾ ಮತ್ತು ಮನೋಜ್‍ ಪ್ರಮುಖ ಪಾತ್ರಧಾರಿಗಳು. ಅವರೆಲ್ಲಾ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಈ ಚಿತ್ರದ ನಿಜವಾದ ಹೀರೋ ನಿರ್ದೇಶಕರು. ಒಂದೊಳ್ಳೆಯ ಕಥೆಯನ್ನು ಅವರು ಈ ಚಿತ್ರದ ಮೂಲಕ ಹೇಳಿದ್ದಾರೆ. ಮಕ್ಕಳು ಮತ್ತು ಅವರ ಪೋಷಕರು ಇಬ್ಬರೂ ಕೂತು ಒಟ್ಟಿಗೆ ನೋಡುವಂಥ ಚಿತ್ರ ಇದು. ಎಲ್ಲರೂ ಬಂದು ಚಿತ್ರ ನೋಡಿ’ ಎಂದರು.

ಅರುಣ್‍ ಅಮುಕ್ತ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುವುದಷ್ಟೇ ಅಲ್ಲ, ಚಿತ್ರವನ್ನು ತಾವೇ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ನಮಗೆ ಯಾವ ಅಭಿಮಾನಿಗಳಿಲ್ಲ. ನಮ್ಮ ಚಿತ್ರ ನೋಡುವುದಕ್ಕೆ ಬರುವವರೇನಿದ್ದರೂ ಟ್ರೇಲರ‍್ ಮತ್ತು ಹಾಡುಗಳನ್ನು ನೋಡಿ ಬರಬೇಕು. ನಮ್ಮ ಪ್ರೇಕ್ಷಕರೇನಿದ್ದರೂ ಇವತ್ತಿನ ಯುವಜನತೆ. ಅವರಿಗೆ ಚಿತ್ರ ತಲುಪಿಸಬೇಕು. ಹೇಗೆ ತಲುಪಿಸಬೇಕು ಎಂಬುದರ ಕುರಿತು ನನಗೆ ಕೆಲವು ಯೋಚನೆಗಳಿದ್ದವು. ಹಾಗಾಗಿ, ನಾನೇ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾದೆ. ಸುಮಾರು 140 ಕೇಂದ್ರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರದ ಟ್ರೇಲರ‍್ ಮತ್ತು ಹಾಡು ನೋಡಿ, ಕೆಲವು ಚಿತ್ರಮಂದಿರದವರು ಕರೆದು ಚಿತ್ರ ಪ್ರದರ್ಶಿಸುವ ಅವಕಾಶ ಕೊಟ್ಟಿದ್ದಾರೆ. ಆಮೇಲೆ ನೋಡೋಣ ಎಂದು ಕಾಯದೇ ಮೊದಲ ದಿನವೇ ಬಂದು ಚಿತ್ರ ನೋಡಿ’ ಎಂದು ಕರೆನೀಡಿದರು.

 

ದುಬೈನಲ್ಲಿ ಚಿತ್ರ ಬಿಡುಗಡೆ ಮಾಡಿರುವ ಮಮತಾ ಸೆಂಧಿಲ್‍ ಮಾತನಾಡಿ, ‘ಇದಕ್ಕೂ ಮುನ್ನ ‘ಕಾಟೇರ’ ಚಿತ್ರವನ್ನು ಬಿಡಗುಡೆ ಮಾಡಿದ್ದೆವು. ಇದು ನಮ್ಮ ಎರಡನೆಯ ಚಿತ್ರ. ನೋಡಿದವರೆಲ್ಲರೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬೇರೆ ದೇಶಗಳಲ್ಲೂ ಚಿತ್ರ ಬಿಡುಗಡೆ ಮಾಡುವುದಕ್ಕೆ ಅಲ್ಲಿನ ಕನ್ನಡಿಗರು ಕೇಳುತ್ತಿದ್ದು, ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಮುಂತಾದ ಕಡೆ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ’ ಹೇಳಿದರು.

 

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರವನ್ನು ವೆರೈಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ. ಶಿವಲಿಂಗೇಗೌಡ ನಿರ್ಮಿಸಿದ್ದಾರೆ. ತಮ್ಮ ಮೊದಲ ಪ್ರಯತ್ನಕ್ಕೆ ಕನ್ನಡಿಗರ ಪ್ರೋತ್ಸಾಹ, ಬೆಂಬಲವಿರಲಿ ಎಂದು ನಿರ್ಮಾಪಕರು ಇದೇ ಸಂದರ್ಭದಲ್ಲಿ ಕೇಳಿಕೊಂಡರು.

 

ಸುನೀಲ್‍ ಪುರಾಣಿಕ್‍, ಅರವಿಂದ್ ರಾವ್‍, ಪ್ರಶಾಂತ್ ಸಂಬರ್ಗಿ, ಅಮರ‍್, ಮನೋಜ್‍, ಮನಸ್ವಿ ಮುಂತಾದವರು ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಚಿತ್ರವನ್ನು ನೋಡಿ ಹರಸಿ-ಹಾರೈಸುವುದಕ್ಕೆ ಮನವಿ ಮಾಡಿದರು.

Copyright@2018 Chitralahari | All Rights Reserved. Photo Journalist K.S. Mokshendra,