*"ಬ್ಯಾಕ್ ಬೆಂಚರ್ಸ್" ಗೆಲ್ಲಲೇಬೇಕು ನಿರ್ದೇಶಕ - ನಿರ್ಮಾಪಕ ರಾಜಶೇಖರ್* .
*ಕಾಲೇಜು ಕೇಂದ್ರಿತ ಕಥಾಹಂದರ ಹೊಂದಿರುವ ಈ ಚಿತ್ರ ಈ ವಾರ ತೆರೆಗೆ* .
ಭಿನ್ನ ಕಂಟೆಂಟಿನ ಮನ್ಸೂಚನೆಯೊಂದಿಗೆ ಕ್ರೇಜ್ ಹುಟ್ಟುಹಾಕಿರುವ ಚಿತ್ರ `ಬ್ಯಾಕ್ ಬೆಂಚರ್ಸ್’. ಈಗಾಗಲೇ ಟೀಸರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಾಲೇಜು ಕೇಂದ್ರಿತ ಕಥೆ ಮತ್ತು ಬೇರೆ ಹೊಸತನದ ನಿರೂಪಣೆಯ ಸುಳಿವಿನೊಂದಿಗೆ ಎಲ್ಲಾ ವರ್ಗದ ಪ್ರೇಕ್ಷಕರನ್ನೂ "ಬ್ಯಾಕ್ ಬೆಂಚರ್ಸ್" ಆಕರ್ಷಿಸಿದ್ದಾರೆ.
ಪಿಪಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಜಶೇಖರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ನಿರ್ದೇಶಕರು ಕೂಡ ರಾಜಶೇಖರ್ ಅವರೆ.
ಚಿತ್ರದ ಬಿಡುಗಡೆ ಮುಂಚಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ & ನಿರ್ಮಾಪಕ ರಾಜಶೇಖರ್, ನಾನು ಸಾಕಷ್ಟು ಸೋಲು ನೋಡಿದ್ದೇನೆ. ನನಗೆ ಸೋಲು ಹೊಸತಲ್ಲ. ಈ ಚಿತ್ರ ಈ ಹುಡುಗರಿಗಾಗಿ ಗೆಲ್ಲಬೇಕು. ಏಕೆಂದರೆ, ಈ ಹುಡುಗರು ಕಳೆದ ಮೂರು ವರ್ಷಗಳನ್ನು ಈ ಚಿತ್ರಕ್ಕಾಗಿ ಮೀಸಲಿಟ್ಟಿದ್ದಾರೆ. ಬರೀ ನಟನೆ ಅಷ್ಟೇ ಅಲ್ಲ, ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ. ಹಾಗಾಗಿ, ಇದು ಅವರಿಗಾದರೂ ಗೆಲ್ಲಲೇಬೇಕು ಎಂದರು.
ಈ ಚಿತ್ರ ರಂಜನೆ ಮತ್ತು ವಿನೋದಕ್ಕಾಗಿಯಷ್ಟೇ ಅಲ್ಲ. ಇದರಲ್ಲಿ ಹದಿಹರೆಯದವರ ತವಕ ಮತ್ತು ತಾಕಲಾಟಗಳನ್ನು ಕಟ್ಟಿಕೊಡಲಾಗಿದೆ. ಇವತ್ತಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣ ವ್ಯವಸ್ಥೆ ಇದೆಲ್ಲದರ ಕುರಿತಾದ ಒಂದು ಕಥೆ ಇದು. ರಾಜಶೇಖರ್ ನನ್ನ ಸಹಪಾಠಿ. ಈ ಚಿತ್ರವನ್ನು ಕೇವಲ ಅವರಿಗಾಗಿ ಮಾಡಿದ್ದೇನೆ. ಇನ್ನು, ಈ ಹುಡುಗರು ಕನಿಷ್ಠ ಮೂರು ವರ್ಷಗಳಿಂದ ಈ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಸುಲಭವಾಗಿ ತಯಾರಾದಂತ ಚಿತ್ರವಲ್ಲ ಎಂದು ನಟ ಸುಚೇಂದ್ರ ಪ್ರಸಾದ್ ತಿಳಿಸಿದರು.
ಚಿತ್ರದಲ್ಲಿ ನಟಿಸಿರುವ ಕಲಾವಿದರು ಹಾಗೂ ತಂತ್ರಜ್ಞರು "ಬ್ಯಾಕ್ ಬೆಂಚರ್ಸ್" ಬಗ್ಗೆ ಮಾತನಾಡಿದರು.
ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್, ಮಾನ್ಯ ಗೌಡ, ಕುಂಕುಮ್ ಹೆಚ್, ಅನುಷಾ ಸುರೇಶ್, ವಿಯೋಮಿ ವನಿತಾ, ಮನೋಜ್ ಶೆಟ್ಟಿ, ನಮಿತಾ ಗೌಡ, ವಿಕಾಸ್, ರನ್ನ, ವಿಜಯ್ ಪ್ರಸಾದ್, ಚತುರ್ಥಿ ರಾಜ್, ಗೌರವ್ ಮುಂತಾದವರ ತಾರಾಗಣವಿದೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ.