ಜಂಬೂ ಸರ್ಕಸ್ ಟೀಸರ್ ಬಿಡುಗಡೆ
ಸ್ನೇಹ ಪ್ರೀತಿಯ ಸುತ್ತ ಕಾಮಿಡಿ ಕಥಾನಕ..
ಸ್ನೇಹದ ಮಹತ್ವ ಹಾಗೂ ಪ್ರೀತಿಯ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ನಿರ್ದೇಶಕ ಎಂಡಿ.ಶ್ರೀಧರ್ ಅವರು ’ಜಂಬೂಸರ್ಕಸ್’ ಎಂಬ ಕಾಮಿಡಿ ಡ್ರಾಮಾ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಬುಲ್ ಬುಲ್, ಕೃಷ್ಣ, ಚೆಲ್ಲಾಟ, ಪೊರ್ಕಿ, ಒಡೆಯ ಸೇರಿದಂತೆ ಸ್ಟಾರ್ ಚಿತ್ರಗಳನ್ನೇ ಹೆಚ್ಚಾಗಿ ನಿರ್ದೇಶಿಸಿದ ಶ್ರೀಧರ್ ಅವರು ಒಡೆಯ ನಂತರ
ಗ್ಯಾಪ್ ತಗೊಂಡು ಆ್ಯಕ್ಷನ್-ಕಟ್ ಹೇಳಿರುವ ಚಿತ್ರವಿದು. ಮೂರು ದಶಕಗಳಿಂದ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್.ಸಿ.ಸುರೇಶ್ ಅವರು ಮಹತಿ ಕಂಬೈನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇತ್ತಿಚೆಗೆ ತೆರೆಕಂಡ ಜಿಗರ್ ಖ್ಯಾತಿಯ ಪ್ರವೀಣ್ ತೇಜ್ ನಾಯಕನಾಗಿದ್ದು, ಅಂಜಲಿ ಎಸ್.ಅನೀಶ್ ನಾಯಕಿಯಾಗಿದ್ದಾರೆ.
ಟೀಸರ್ ಬಿಡುಗಡೆ ನಂತರ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀಧರ್, ಒಡೆಯ ನಂತರ ಗ್ಯಾಪ್ ತೆಗೆದುಕೊಂಡು ಈ ಚಿತ್ರ ಮಾಡಿದ್ದೇನೆ. ‘ಜಂಬೂ ಸರ್ಕಸ್’ ಸಿನಿಮಾ ಆಗಲು ಕಾರಣ ನಿರ್ಮಾಪಕರು. ಮದುವೆ ಕಾರ್ಯಕ್ರಮವೊಂದರಲ್ಲಿ ಹೆಚ್.ಸಿ.ಸುರೇಶ್ ಅವರು ಸಿಕ್ಕಿದ್ದರು. ಆಗ ಒಂದು ಲೈನ್ ಹೇಳಿ ನಮಗೊಂದು ಸಿನಿಮಾ ಮಾಡಿಕೋಡಿ ಎಂದರು. ನಿರ್ಮಾಪಕರು ಕೆಲ ವರ್ಷಗಳ ಹಿಂದೆ ಬೇರೆ ಸಿನಿಮಾಗಾಗಿ ಅಡ್ವಾನ್ಸ್ ಕೊಟ್ಟಿದ್ದರು. ಆ ಚಿತ್ರ ಆಗಿರಲಿಲ್ಲ. ಆ ಕಮಿಟ್‌ಮೆಂಟ್ ಮೇಲೆ ಈ ಸಿನಿಮಾ ಮಾಡಿದ್ದೇವೆ. ಪ್ರಾರಂಭದಲ್ಲಿ ನಿರ್ಮಾಪಕರಿಗೆ ಪಾರ್ಟ್ನರ್ ಇದ್ದರು. ಅವರು ನಡುವೆ ಕೈ ಕೊಟ್ಟರು. ಹಾಗಾಗಿ ಸುರೇಶ್ ಕಷ್ಟಪಟ್ಟು ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಗೆದ್ದರೆ ಅವರು ಇನ್ನಷ್ಟು ಸಿನಿಮಾ ಮಾಡುತ್ತಾರೆ. ಇದು ಗೆಳೆಯರಿಬ್ಬರ ಕಥೆ. ಒಂದೇ ಶಾಲೆ, ಕಾಲೇಜ್‌ನಲ್ಲಿ ಓದಿ. ಒಂದೇ ಮಂಟಪದಲ್ಲಿ ಒಂದೇ ದಿನ ಮದುವೆ ಆಗುತ್ತಾರೆ. ಒಂದೇ ಏರಿಯಾದಲ್ಲಿ ಎದಿರು ಬದಿರು ಮನೆ ಮಾಡುತ್ತಾರೆ. ಕೊನೆಗೆ ಅವರಿಗೆ ಒಂದೇ ದಿನ ಮಕ್ಕಳೂ ಕೂಡ ಆಗುತ್ತವೆ. ಇವರ ಗೆಳೆತನ ಅವರ ಹೆಂಡತಿಯರಿಗೆ ಇಷ್ಟ ಇರಲ್ಲ. ಹಾಗಾಗಿ ಮಕ್ಕಳನ್ನು ವೈರಿಗಳಂತೆ ಬೆಳೆಸುತ್ತಾರೆ. ದಾಯಾದಿಗಳಂತೆ ಬೆಳೆದ ನಾಯಕ-ನಾಯಕಿ ಮುಂದೆ ಏನೆಲ್ಲಾ ಮಾಡುತ್ತಾರೆ, ಅವರಿಬ್ಬರ ನಡುವೆ ಏನೆಲ್ಲಾ ನಡೆಯುತ್ತದೆ ಎಂಬುದೇ ಈ ಚಿತ್ರದ ಕಾನ್ಸೆಪ್ಟ್. ಇದರಲ್ಲಿ ಮೂರು ಫೈಟ್, ಸಾಂಗ್‌ಗಳು ಇವೆ. ಸಿನಿಮಾ ರಿಲೀಸ್‌ಗೆ ಸಿದ್ದವಾಗಿದ್ದು ಸದ್ಯದಲ್ಲೇ ರಿಲೀಸ್ ಪ್ಲ್ಯಾನ್ ಮಾಡುತ್ತೇವೆ’ ಎಂದು ಹೇಳಿದರು.
ಚಿತ್ರದ ನಿರ್ಮಾಪಕ ಹೆಚ್.ಸಿ ಸುರೇಶ್ ಮಾತನಾಡಿ, 30ವರ್ಷಗಳಿಂದ ಸಿನಿಮಾರಂಗದಲ್ಲಿದ್ದೇನೆ. ಫ್ಯಾಮಿಲಿ ಎಂಟರ್ ಟೈನರ್ ಸಿಮಿಮಾ ಮಾಡಬೇಕು ಎಂದುಕೊಂಡಾಗ ಈ ಕಥೆ ರೆಡಿಯಾಯಿತು. ಒಂದು ಟೀಮ್ ವರ್ಕ್ ಆಗಿ ಮಾಡಿದ ಸಿನಿಮಾ. ನಿರ್ದೇಶಕರು ಹೆಚ್ಚಿನ ಜವಾಬ್ದಾರಿ ತಗೊಂಡು ಒಂದು ಒಳ್ಳೆಯ ಚಿತ್ರ ಮಾಡಿಕೊಟ್ಟಿದ್ದಾರೆ’ ಎಂದರು.
ನಂತರ ಚಿತ್ರದ ನಾಯಕ ಪ್ರವೀಣ್ ತೇಜ್ ‘ನನಗೆ ಇಂದು ‘ಜಾಲಿ ಡೇಸ್’ ಸಿನಿಮಾ ದಿನಗಳು ನೆನಪಿಗೆ ಬರ್ತಾ ಇದೆ. ನಾನು ಚಿತ್ರರಂಗಕ್ಕೆ ಬಂದು 15 ವರ್ಷ ಆಯ್ತು. ಈಗಲೂ ಭಯ ಇದೆ. ನನ್ನ ಮೊದಲ ಸಿನಿಮಾ ನಿರ್ದೇಶಕರ ಜೊತೆ ಮತ್ತೆ ಸಿನಿಮಾ ಮಾಡಿದ್ದು ಸ್ಪೆಷಲ್ ಎನ್ನಬಹುದು. ಙಗಿದು ಒಳ್ಳೆಯ ಅವಕಾಶ. ಎರಡು ಫ್ಯಾಮಿಲಿ ನಡುವಿನ ಸ್ಟೋರಿ ಈ ಚಿತ್ರದಲ್ಲಿದೆ, ನಾವಿಬ್ಬರು ಕಿತ್ತಾಡಿಕೊಂಡು ಇದ್ದವರು ಲವ್ ಆದ್ರೆ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ’ ಎಂದರು.
ನಾಯಕಿ ಅಂಜಲಿ ಮಾತನಾಡಿ ‘ಇದು ನನ್ನ ಎರಡನೇ ಸಿನಿಮಾ. ‘ಪದವಿ ಪೂರ್ವ’ ಚಿತ್ರವಾದ ಮೇಲೆ ದೊಡ್ಡ ತಂತ್ರಜ್ಞರೊಂದಿಗೆ ಕೆಲಸ ಮಾಡಿದ ಅನುಭವ ಚನ್ನಾಗಿತ್ತು’ ಎಂದರು.
ವೇದಿಕೆಯಲ್ಲಿ ಚಿತ್ರದ ಛಾಯಾಗ್ರಾಹಕ ಕೃಷ್ಣ ಕುಮಾರ್ (ಕೆ.ಕೆ), ಸಂಭಾಷಣೆಗಾರ ರಘು ನೀಡುವಳ್ಳಿ ಸಂಕಲನಕಾರ ಜ್ಞಾನೇಶ್ ತಮ್ಮ ಅನುಭವ ಹಂಚಿಕೊಂಡರು. ಮುಖ್ಯ ಪಾತ್ರಗಳಲ್ಲಿ ಸ್ವಾತಿ, ಲಕ್ಷ್ಮೀ ಸಿದ್ದಯ್ಯ, ಅಚ್ಚುತ್ ಕುಮಾರ್, ರವಿಶಂಕರ್ ಗೌಡ, ಅವಿನಾಶ್ ಮುಂತಾದವರು ಇದ್ದಾರೆ. ಸುಪ್ರೀತ ಶೆಟ್ಟಿ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಹಾಡುಗಳಿಗೆ ಜಯಂತ್ ಕಾಯ್ಕಿಣಿ, ಡಾ. ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.