Shanubhogara Magalu.News

Monday, November 04, 2024

51

 

ಶಾನುಭೋಗರ ಮಗಳು ಟ್ರೈಲರ್ ಬಿಡುಗಡೆ

 

   ರಾಗಿಣಿ ಪ್ರಜ್ವಲ್ ನಾಯಕಿಯಾಗಿ ನಟಿಸಿರುವ ’ಶಾನುಭೋಗರ ಮಗಳು’ ಚಿತ್ರದ  ಟ್ರೈಲರ್ ಹಾಗೂ ಟೈಟಲ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ಹಿರಿಯನಟ ರಮೇಶ್ ಭಟ್ ಟ್ರೈಲರ್ ರಿಲೀಸ್ ಮಾಡಿ ಚಿತ್ರಕ್ಕೆ  ಶುಭ ಹಾರೈಸಿದರು.  ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರು ಬರೆದ ಇದೇ ಹೆಸರಿನ ಕಾದಂಬರಿಯನ್ನು ಆಧರಿಸಿ ಈ ಚಿತ್ರವನ್ನು ಕೂಡ್ಲು ರಾಮಕೃಷ್ಣ  ನಿರ್ದೇಶಿಸಿದ್ದಾರೆ,  ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ದೊರೆತಿದ್ದು, ಚಿತ್ರವೀಗ  ಬಿಡುಗಡೆಗೆ ಸಿದ್ದವಾಗಿದೆ, 

   ಕನ್ನಡ ಚಿತ್ರರಂಗಕ್ಕೆ ವಿಭಿನ್ನ ಶೈಲಿಯ ಚಿತ್ರಗಳನ್ನು ಕೊಡುಗೆಯಾಗಿ ನೀಡಿದ ಕೂಡ್ಲು ರಾಮಕೃಷ್ಣ  ಅವರು  ಈ ಚಿತ್ರಕ್ಕೆ ಚಿತ್ರಕಥೆ  ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಪ್ರಜ್ವಲ್  ಶಾನುಭೋಗರ ಮಗಳಾಗಿ  ಕಾಣಿಸಿಕೊಂಡಿದ್ದಾರೆ. ಮೈಸೂರು,  ಶ್ರೀರಂಗಪಟ್ಟಣ, ಮೇಲುಕೋಟೆ, ಚನ್ನಪಟ್ಟಣ, ಚಿಕ್ಕಬಳ್ಳಾಪುರದ ಸುತ್ತಮುತ್ತ ಈ  ಚಿತ್ರದ ಚಿತ್ರೀಕರಣ ನಡೆಸಲಾಗಿದೆ.

ವೇದಿಕೆಯಲ್ಲಿ ಕಾದಂಬರಿಗಾರ್ತಿ ಭಾಗ್ಯ ಕೃಷ್ಣಮೂರ್ತಿ ಮಾತನಾಡುತ್ತ ನಾನೊಬ್ಬ ಪತ್ರಕರ್ತೆ. 32 ಕಾದಂಬರಿಗಳನ್ನು ಬರೆದಿದ್ದೇನೆ, ಅದರಲ್ಲಿ ಅಭಿನೇತ್ರಿ ಸಿನಿಮಾ ಆಗಿದೆ.‌ 2004ರಲ್ಲಿ ನಾನು ಬರೆದಿದ್ದ ಈ ಕಾದಂಬರಿ ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು, ಇದೊಂದು  ಕಾಲ್ಪನಿಕ  ಕಥೆಯಾಗಿದ್ದು, ಕೆಲವು ಘಟನೆಗಳು ನೈಜವಾಗೇ ಇರುವಂತೆ ಕಂಡಿರುವುದು ಆಶ್ಚರ್ಯ ಮೂಡಿಸಿದೆ ಎಂದರು. ಚಿತ್ರದ ಜವಾಬ್ದಾರಿ ಹೊತ್ತಿರುವ  ಸ್ವಸ್ತಿಕ್ ಶಂಕರ್ ಮಾತನಾಡುತ್ತ  ನಿರ್ಮಾಪಕ ಸಿ.ಎಂ. ನಾರಾಯಣ್ ನನ್ನ ಸ್ನೇಹಿತರು.  ಇದೊಂದು ಮಹಿಳಾ ಪ್ರದಾನ ಕಥೆ. ಅನೇಕ ಅಡೆ ತಡೆಗಳನ್ನು ಎದುರಿಸಿ  ಈ  ಸಿನಿಮಾ  ಆಗಿದೆ, ಚಿತ್ರ ತುಂಬಾ ಚೆನ್ನಾಗಿ  ಮೂಡಿಬಂದಿದೆ ಎಂದು ಹೇಳಿದರು,

   ಶಾನುಭೋಗರ ಮಗಳು ಶರಾವತಿಯ ಪಾತ್ರ ನಿರ್ವಹಿಸಿರುವ ರಾಗಿಣಿ ಪ್ರಜ್ವಲ್ ಮಾತನಾಡುತ್ತ ತುಂಬಾ ದಿನಗಳ ಗ್ಯಾಪ್ ನಂತರ ಈ ಚಿತ್ರದಲ್ಲಿ  ಅಭಿನಯಿಸಿದ್ದೇನೆ.  ನಾನು ಮೂಲತಃ ಕ್ಲಾಸಿಕಲ್ ಡ್ಯಾನ್ಸರ್.  ಈ ಚಿತ್ರದಲ್ಲಿ ಡಬ್ಬಿಂಗ್ ಕೂಡ ಮಾಡಿದ್ದೇನೆ. ದು:ಖದ ಸನ್ನಿವೇಶಗಳಲ್ಲಿ ಗ್ಲಿಸರಿನ್ ಉಪಯೋಗಿಸದೆ ಅಭಿನಯಿಸಿದ್ದೇನೆ, ಇಷ್ಟಪಟ್ಟು  ಈ ಚಿತ್ರ ಮಾಡಿದ್ದೇವೆ ಎಂದು ಹೇಳಿದರು.  ನಿರ್ದೇಶಕ ಕೂಡ್ಲು ರಾಮಕೃಷ್ಣ ಮಾತನಾಡಿ ಈ ಸಿನಿಮಾ ಪ್ರಾರಂಭವಾಗಿದ್ದೇ ಆಕಸ್ಮಿಕ. ಭಾಗ್ಯ ಅವರು ನನಗೆ 35 ವರ್ಷಗಳ ಸ್ನೇಹಿತೆ, ನನ್ನ 32 ಸಿನಿಮಾಗಳಲ್ಲಿ  14 ಕಾದಂಬರಿ ಆಧಾರಿತ ಚಿತ್ರಗಳೇ ಎನ್ನುವುದು ವಿಶೇಷ. 18ನೇ ಶತಮಾನದಲ್ಲಿ ನಡೆಯುವ ಕಥೆಯಿದು, ಮತ್ತೊಬ್ಬ ನಟಿ ರಿಶಿಕಾ ಸೆಕೆಂಡ್ ಲೀಡ್ ಮಾಡಿದ್ದಾರೆ ಎಂದರು,

    ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ. ನಾರಾಯಣ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಜೈಆನಂದ್ ಅವರ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಅವರ ಸಂಕಲನ, ವಸಂತ ಕುಲಕರ್ಣಿ ಅವರ ಕಲಾನಿರ್ದೇಶನ, ಕವಿರಾಜ್-ಅರಸು ಅಂತಾರೆ  ಅವರ ಸಾಹಿತ್ಯವಿದೆ.  ರಮೇಶ್ ಕೃಷ್ಣನ್ ಅವರ ಸಂಗೀತ ಸಂಯೋಜನೆ, ಕರಣ್ ಮಯೂರ್ ಅವರ ನಿರ್ಮಾಣ ನಿರ್ವಹಣೆ ಹಾಗೂ ಎಸ್.ನಾಗರಾಜ್‌ರಾವ್, ರಘು ಕಲ್ಪತರು ಅವರ ಸಹ ನಿರ್ದೇಶನ ಇರುವ  ಶಾನುಭೋಗರ ಮಗಳು ಚಿತ್ರಕ್ಕೆ ಬಿ.ಎ. ಮಧು ಅವರು  ಸಂಭಾಷಣೆಗಳನ್ನು  ಹೆಣೆದಿದ್ದಾರೆ.

   ಶ್ಯಾನುಭೋಗರ  ಮಗಳು ಚಿತ್ರದ ಉಳಿದ  ಪಾತ್ರಗಳಲ್ಲಿ  ನಿರಂಜನ್ ಶೆಟ್ಟಿ, ರಮೇಶ್ ಭಟ್, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ, ಶ್ರೀನಿವಾಸಮೂರ್ತಿ, ಅನನ್ಯ, ಜೋಸೈಮನ್, ರಂಜಿತ್ ಕಾರ್ತಿಕ್, ಧರ್ಮ ನವೀನ್ ಮುಂತಾದವರು ನಟಿಸಿದ್ದಾರೆ. ಟಿಪ್ಪು ಸುಲ್ತಾನ್ ಪಾತ್ರದಲ್ಲಿ ನಟ ಕಿಶೋರ್ ಅವರು  ಅಭಿನಯಿಸಿದ್ದಾರೆ.

Copyright@2018 Chitralahari | All Rights Reserved. Photo Journalist K.S. Mokshendra,