ಅಮ್ಮನವರ ದರ್ಶನ ಅಕ್ಟೋಬರ್ 17ರಿಂದ
ಶ್ರೀ ಮಾರಮ್ಮ ದೇವಿ ಕುರಿತ ಸಾಮಾಜಿಕ ಹಾಗೂ ಭಕ್ತಿಪ್ರಧಾನತೆವುಳ್ಳ ’ಸಿಂಹರೂಪಿಣಿ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು ಭರ್ಜರಿಯಾಗಿ ಮೂಡಿಬಂದಿದೆ. ಕೆ.ಎಂ.ನಂಜುಂಡೇಶ್ವರರವರು ಕಥೆ ಬರೆದು ಶ್ರೀ ಚಕ್ರ ಫಿಲಂಸ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ. ’ಕೆಜಿಎಫ್’ ’ಸಲಾರ್’ ಮುಂತಾದ ಹಿಟ್ ಸಿನಿಮಾಗಳಿಗೆ ಹಾಡುಗಳನ್ನು ಬರೆದಿರುವ ಕಿನ್ನಾಳ್‌ರಾಜ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಆಡಿಯೋ ಹಕ್ಕುಗಳನ್ನು ’ಮಾಳು ನಿಪ್ನಾಳ್ ಮ್ಯೂಸಿಕ್ ಸಂಸ್ಥೆ’ಯು ಅಧಿಕ ಬೆಲೆ ನೀಡಿ ಖರೀದಿ ಮಾಡಿರುವುದು ಸಿನಿಮಾಕ್ಕೆ ಸಿಕ್ಕ ಮೊದಲ ಗೆಲುವು ಆಗಿದೆಯಂತೆ.
ಕಳೆದ ತಿಂಗಳು ಪಾತ್ರಗಳ ಪರಿಚಯದ ಟೀಸರ್ ಹೊರಬಂದು ಸದ್ದು ಮಾಡಿತ್ತು. ಈ ನಿಟ್ಟಿನಲ್ಲಿ ನವರಾತ್ರಿ ಹಬ್ಬದ ಎರಡನೇ ದಿನದಂದು ಹಾಡುಗಳ ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಪ್ರಚಾರದ ಸಲುವಾಗಿ ಹೈದರಬಾದ್‌ನಿಂದ ಆಗಮಿಸಿದ್ದ ಹಿರಿಯ ನಟ ಸುಮನ್‌ರವರು ಮಾತನಾಡಿ ಇಷ್ಟು ವರ್ಷದ ಅನುಭವದಲ್ಲಿ ಈ ಸಿನಿಮಾ ನನಗೆ ಖುಷಿ ನೀಡಿದೆ. ದೇವಿ ಇದ್ದಾರಾ ಎನ್ನುವ ಪ್ರಶ್ನೆಗಳಿಗೆ ನನ್ನ ಪಾತ್ರವು ಉತ್ತರ ನೀಡಲಿದೆ. ಅಂದು ಅಣ್ಣಮಯ್ಯ ತೆಲುಗು ಚಿತ್ರ ಹಿಟ್ ಆಗಿತ್ತು. ಅದೇ ರೀತಿ ಇದು ಆಗಲಿ ಎಂದರು.
ನಿರ್ದೇಶಕರು ಹೇಳುವಂತೆ ಗ್ರಾಮೀಣ ಭಾಗದಲ್ಲಿ ಏನೇ ಕಷ್ಟ ಎದುರಾದರೂ ಅವರು ನಂಬಿರುವಂತಹ ದೇವರ ಮೊರೆ ಹೋಗುತ್ತಾರೆ. ಜಾತ್ರೆ ಉತ್ಸವಗಳಲ್ಲಿ ಇನ್ನು ನಂಬಿಕೆ ಇದೆ ಎನ್ನುವಂತಹ ಸಣ್ಣ ಸಣ್ಣ ವಿಷಯಗಳನ್ನು ಹೆಕ್ಕಿಕೊಂಡು ಅದನ್ನು ಪಾತ್ರಗಳ ಮೂಲಕ ತೋರಿಸಲಾಗಿದೆ. ಪ್ರತಿಯೊಂದು ದೇವರಿಗೂ ಹಿನ್ನಲೆ ಇರುತ್ತದೆ. ಹಾಗೆಯೇ ದೇವಿಯು ಮಹಾಲಕ್ಷೀ ರೂಪದಲ್ಲಿ ಭೂಮಿಗೆ ಬರುತ್ತಾಳೆ. ಮುಂದೆ ಮಾರಮ್ಮ ಯಾಕೆ ಆಗ್ತಾಳೆ ಒಂದು ಕಡೆಯಾದರೆ, ಮತ್ತೋಂದು ಭಾಗದಲ್ಲಿ ರಾಕ್ಷಸರನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಬರುತ್ತಾಳೆ. ಅದರಲ್ಲಿ ಕೊನೆಯ ಅವತಾರ ಮಾರಮ್ಮ ದೇವಿ. ಇದರ ಜತೆಗೆ ಒಂದಷ್ಟು ಕಮರ್ಷಿಯಲ್ ಅಂಶಗಳನ್ನು ಸೇರಿಸಲಾಗಿದ್ದು, ದೃಶ್ಯಗಳು ಚೆನ್ನಾಗಿ ಬರಬೇಕೆಂದು ನಿರ್ಮಾಪಕರು ಎಲ್ಲಿಯೂ ರಾಜಿಯಾಗದೆ ಹಣ ಸುರಿದಿದ್ದಾರೆ. ’ಕೃಷಂ ಪ್ರಣಯ ಸಖಿ’ ಖ್ಯಾತಿಯ ಗಾಯಕ ಜಸ್‌ಕರಣ್ ಸಿಂಗ್ ಹಾಡಿರುವ ಲವ್ ಸಾಂಗ್ ಹಿಟ್ ಆಗಿರುವುದು ತಂಡಕ್ಕೆ ಹಿರಿಮೆ ತಂದಿದೆ. ಎಲ್ಲರೂ ಶ್ರದ್ದೆ ಭಕ್ತಿಯಿಂದ ಸಹಕಾರ ನೀಡಿದ್ದಾರೆ. ತಾವುಗಳು ಚಿತ್ರಮಂದಿರಕ್ಕೆ ಬಂದರೆ ದೇವಿಯ ದರ್ಶನ ಪಡೆಯಬಹುದೆಂದು ಹೇಳಿದರು.
ನೂರ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಹಿರಿಯರು ಕಿರಿಯರು ಅಂತ ನೋಡದೆ ಬೇದಭಾವ ಬಿಟ್ಟು ನಾವೆಲ್ಲರೂ ತಾಯಿಯ ಮಕ್ಕಳು ಅಂದುಕೊಂಡು ಚೆನ್ನಾಗಿ ನಟಿಸಿದ್ದಾರೆ. ನೋಡುಗರು ಅಮ್ಮನ ಮಕ್ಕಳಾಗಿ ಟಾಕೀಸ್‌ಗೆ ಬರಬೇಕೆಂದು ನಿರ್ಮಾಪಕ ಕೆ.ಎಂ.ನಂಜುಡೇಶ್ವರ ಕೋರಿಕೊಂಡರು.
ಕಲಾವಿದರುಗಳಾದ ಯಶ್‌ಶೆಟ್ಟಿ, ಅಂಕಿತಾಗೌಡ, ದಿವ್ಯಾಆಲೂರು, ನೀನಾಸಂ ಅಶ್ವಥ್, ಹರೀಶ್ ರಾಯ್, ವಿಜಯ್‌ಚೆಂಡೂರು, ಯಶಸ್ವಿನಿ, ಆರವ್‌ಲೋಹಿತ್, ಖುಷಿಬಸ್ರೂರು, ಮನಮೋಹನ್‌ರೈ, ಸಾಗರ್, ಸಂಗೀತ ಸಂಯೋಜಕ ಆಕಾಶ್‌ಪರ್ವ, ಕಲರಿಸ್ಟ್ ಕಿಶೋರ್, ಛಾಯಾಗ್ರಾಹಕ ಕಿರಣ್ ಮುಂತಾದವರು ಅಮ್ಮನ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಸುಕೃತವೆಂದು ಸಂತಸ ಹಂಚಿಕೊಂಡರು.