Jungle Mangal.News

Saturday, October 05, 2024

67

 

*ಸಿಂಪಲ್ ಸುನಿ ಅವರಿಂದ ನೂತನ ಚಿತ್ರದ ಶೀರ್ಷಿಕೆ ಅನಾವರಣ* .

 

 *"ಜಂಗಲ್ ಮಂಗಲ್" ಚಿತ್ರಕ್ಕೆ ಯಶ್ ಶೆಟ್ಟಿ ನಾಯಕ* .                               

 

  ತಮ್ಮ ಅಮೋಘ ಅಭಿನಯದ ಮೂಲಕ ಜನರಮನ ಗೆದ್ದಿರುವ ಯಶ್ ಶೆಟ್ಟಿ ನಾಯಕರಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆಯನ್ನು ನಿರ್ದೇಶಕ ಸಿಂಪಲ್ ಸುನಿ ಅನಾವರಣ ಮಾಡಿದರು. ನಂತರ ಸುನಿ ಹಾಗೂ ಚಿತ್ರತಂಡದವರು ಮಾತನಾಡಿದರು.           

.

ಇದು ಅರೆ ಮಲೆನಾಡಿನ ಕಾಡಿನಲ್ಲಿ ನಡೆಯುವ ಕಥೆ. ಅರೆ ಮಲೆನಾಡು ಎಂದರೆ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎರಡು ಸಂಧಿಸುವ ಊರು. ಅಲ್ಲಿ ವಿವಿಧ ಸಂಸ್ಕೃತಿಯ ಜನರು ಇರುತ್ತಾರೆ. ಅಲ್ಲೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ನಡೆಯುವ ಪ್ರೇಮಕಥೆಯೂ ಈ ಚಿತ್ರದಲ್ಲಿದೆ‌. ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ಸುಬ್ರಹ್ಮಣ್ಯದ ಬಳಿಯ ಕಾಡಿನಲ್ಲೇ ನಡೆದಿದೆ. ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತಾ ರಾಮಚಂದ್ರ ನಾಯಕಿಯಾಗಿ ಹಾಗೂ ಉಗ್ರಂ ಮಂಜು, ಬಲ ರಾಜವಾಡಿ ಮುಂತಾದವರು ಪ್ರಮುಖಪಾತ್ರದಲ್ಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತದೆ. ಇನ್ನು ನನಗೆ ಹತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ನನಗಿರುವ ನಿರ್ದೇಶನದ ಆಸೆಗೆ ನನ್ನ ಸ್ನೇಹಿತರು ಆಸರೆಯಾದರು. ಸಹ್ಯಾದ್ರಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣವಾಗಿದ್ದು, ಸಿಂಪಲ್ ಸುನಿ ನಮ್ಮ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ ಎಂದರು ಪುತ್ತೂರು ಮೂಲದ ನಿರ್ದೇಶಕ ರಕ್ಷಿತ್ ಕುಮಾರ್.

ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ ಎಂದು ಮಾತನಾಡಿದ ಯಶ್ ಶೆಟ್ಟಿ, ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ವಿಭಿನ್ನ ಕಥೆ ಎನ್ನಬಹುದು. ಮೊದಲು ಉಗ್ರಂ ಮಂಜು ಅವರ ಪಾತ್ರ ನಾನು ಮಾಡಬೇಕಿತ್ತು. ಆನಂತರ ಬದಲಾಗಿ ನಿರ್ದೇಶಕರು ಈ ಪಾತ್ರ ನೀಡಿದರು. ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ತಂಡಕ್ಕೆ ಸಹಕಾರ ನೀಡುತ್ತಿರುವ ಸುನಿ ಅವರಿಗೆ ಧನ್ಯವಾದ ಎಂದರು.

 

ದಿವ್ಯ ಎಂಬ ಮಧ್ಯಮ ವರ್ಗದ ಜವಾಬ್ದಾರಿಯುತ ಕರಾವಳಿ ಹೆಣ್ಣುಮಗಳ ಪಾತ್ರ ನನ್ನದು. ಈ ಹುಡುಗಿಗೆ ಜವಾಬ್ದಾರಿ ಇಲ್ಲದ ಹುಡುಗನ ಜೊತೆ ಪ್ರೀತಿ. ಒಂದು ಕಡೆ ಕುಟುಂಬ, ಮತ್ತೊಂದು ಕಡೆ ಪ್ರೀತಿ. ಈ ಎರಡರಲ್ಲಿ ನನ್ನ ಆಯ್ಕೆ ಏನು? ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದರು ನಟಿ ಹರ್ಷಿತಾ ರಾಮಚಂದ್ರ.

 

ನನ್ನ ಕೆಲವು ಚಿತ್ರಗಳಿಗೆ ಈ ಚಿತ್ರದ ಸಂಕಲನಕಾರ ಮಂಜು ಶೇಡ್ಗಾರ್ ಸಂಕಲನ ಮಾಡಿದ್ದಾರೆ. ಅವರಿಂದ ನನಗೆ ಈ ತಂಡದ ಪರಿಚಯವಾಯಿತು. ಈ ಚಿತ್ರಕ್ಕೆ ನಿಮ್ಮ ಸಹಕಾರವಿರಬೇಕು ಎಂದರು. ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಸಿಂಪಲ್ ಸುನಿ ತಿಳಿಸಿದರು. ಸಂಕಲನಕಾರ ಮನು ಶೇಡ್ಗಾರ್ ಹಾಗೂ ಬಂಡವಾಳ ಹೂಡಿರುವ ಪ್ರಜೀತ್ ಹೆಗಡೆ ಅವರು "ಜಂಗಲ್ ಮಂಗಲ್" ಚಿತ್ರವನ್ನು ಬೆಂಬಲಿಸುವಂತೆ ಕೇಳಿಕೊಂಡರು.

Copyright@2018 Chitralahari | All Rights Reserved. Photo Journalist K.S. Mokshendra,