ಕಾಶಿನಾಥ್ ಪುತ್ರನ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದರು ಸುದೀಪ್!
ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು ನಟಿಸಿರುವ ಚಿತ್ರ `ಎಲ್ಲಿಗೆ ಪಯಣ ಯಾವುದೋ ದಾರಿ’. ಈ ಸಿನಿಮಾದ ಟ್ರೈಲರ್ ಅನ್ನು ಕಿಚ್ಚಾ ಸುದೀಪ್ ಪ್ರೀತಿಯಿಂದ ಬಿಡುಗಡೆಗೊಳಿಸಿದ್ದಾರೆ. ಅಚ್ಚುಕಟ್ಟಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಟ್ರೈಲರ್ ಲಾಂಚ್ ಆಗಿದೆ. ಬಿಗ್ ಬಾಸ್ ಶೋ ಹಾಗೂ ಸಿನಿಮಾ ಒತ್ತಡಗಳ ನಡುವೆಯೂ ಪ್ರೀತಿಯಿಂದ ಆಗಮಿಸಿದ ಸುದೀಪ್, ಕಾಶೀನಾಥ್ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುತ್ತಾ, ಅವರ ಪುತ್ರ ಅಭಿಮನ್ಯು ಕಾಶೀನಾಥ್ ಅವರಿಗೆ ಶುಭ ಕೋರುತ್ತಾ, ಟ್ರೈಲರ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ. ಅಂದಹಾಗೆ, ಈ ಚಿತ್ರ ಇದೇ ಅಕ್ಟೋಬರ್ 25ರಂದು ತೆರೆಗಾಣಲಿದೆ.
`ಕನ್ನಡ ಚಿತ್ರರಂಗ ಎಂದಿಗೂ ಕಾಶಿನಾಥ್ ಅವರ ಕೊಡುಗೆಗಳನ್ನು, ಅವರಿಂದಾದ ಒಳಿತುಗಳನ್ನು ಮರೆಯಲು ಸಾಧ್ಯವಿಲ್ಲ. ಅದರ ಮುಂದೆ ಅಭಿಮನ್ಯುಗೆ ನಾವು ಕೊಡುತ್ತಿರುವ ಬೆಂಬಲ ತೀರಾ ಚಿಕ್ಕದು’ ಎಂದಿರುವ ಸುದೀಪ್, ಈ ಟ್ರೈಲರಿನಲ್ಲಿ ಅಭಿಮನ್ಯು ಕಾಣಿಸಿಕೊಂಡಿರುವ ರೀತಿಯನ್ನೂ ಮೆಚ್ಚಿಕೊಂಡಿದ್ದಾರೆ. ಸದರಿ ಟ್ರೈಲರ್ ಭರವಸೆ ಮೂಡಿಸಿದೆ ಎನ್ನುತ್ತಲೇ ನಿರ್ದೇಶಕ ಕಿರಣ್ ಎಸ್ ಸೂರ್ಯ ಹಾಗೂ ತಂಡದ ಪರಿಶ್ರಮಕ್ಕೂ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಖುದ್ದು ತಾವೇ ಈ ಸಿನಿಮಾಕ್ಕಾಗಿ ಹಾಡಿರುವ ಹಾಡಿನ ಕುರಿತೂ ಮಾತಾಡಿದ್ದಾರೆ. ಒಟ್ಟಾರೆಯಾಗಿ ಈ ಟ್ರೈಲರ್ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದೆ ಎಂದಿರುವ ಕಿಚ್ಚ, ಚಿತ್ರಕ್ಕೆ ಶುಭ ಕೋರಿದ್ದಾರೆ.
ನಂತರ ಮಾತಾಡಿದ ನಾಯಕನಟ ಅಭಿಮನ್ಯು ಆರಂಭಿಕವಾಗಿ ಈ ಸಿನಿಮಾ ಸಾಗಿ ಬಂದ ರೀತಿಯ ಬಗ್ಗೆ ಸವಿವರವಾಗಿ ಮಾತಾಡಿದ್ದಾರೆ. ನಿರ್ದೇಶಕರ ಸೂಕ್ಷ್ಮವಂತಿಕೆಯನ್ನು ಮೆಚ್ಚಿಕೊಳ್ಳುತ್ತಲೇ, ಆರಂಭದಲ್ಲಿ ಕಥಾ ಎಳೆ ಹೇಳಿದಂತೆಯೇ ಚೆಂದಗೆ ಈ ಸಿನಿಮಾವನ್ನು ರೂಪಿಸಿದ್ದಾರೆಂಬ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಹಂತದಲ್ಲಿ ಸಿನಿಮಾದ ಕೆಲ ಪಾತ್ರಗಳ ಚಹರೆಗಳನ್ನು ಪ್ರೇಕ್ಷಕರಿಗೆ ದಾಟಿಸಿದ್ದಾರೆ. ಸುದರ್ಶನ ಆರ್ಟ್ಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ಜತಿನ್ ಪಟೇಲ್ ನಿರ್ಮಾಣ ಮಾಡಿದ್ದಾರೆ. ಆತಿನ್ ಅವರು ಈ ಸಿನಿಮಾ ನಿರ್ಮಾದ ಅನುಭವಗಳ ಬಗ್ಗೆ ಮಾತಾಡುತ್ತಲೇ, ಇಂಥಾ ಚೆಂದದ ಚಿತ್ರ ಮಾಡಲು ಸಾಥ್ ಕೊಟ್ಟವರನ್ನೆಲ್ಲ ಸ್ಮರಿಸಿದ್ದಾರೆ.
ನಾಯಕಿ ಸ್ಫೂರ್ತಿ ಉಡಿಮನೆ ಈ ಸಮಾರಂಭದಲ್ಲಿ ಹಾಜರಿದ್ದ, ತಾನು ನಾಯಕಿಯಾಗಿ ಆಯ್ಕೆಯಾದ ಕುರಿತಾಗಿ ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ತನ್ನ ಪಾತ್ರದ ಒಂದಷ್ಟು ಸುಳಿವುಗಳನ್ನೂ ಬಿಟ್ಟುಕೊಟ್ಟಿದ್ದಾರೆ. ಪ್ರಧಾನ ಪಾತ್ರದಲ್ಲಿ ನಟಿಸಿರುವ ವಿಜಯಶ್ರೀ ಕಲಬುರ್ಗಿ ಹಾಜರಿದ್ದು ಒಂದಷ್ಟು ವಿವರಗಳನ್ನು ಹಂಚಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯೊಂದಿಗೆ ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್ ಅವರಿಗೆ ಸ್ಫೂರ್ತಿ ಉಡಿಮನೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ವಿಜಯಶ್ರೀ ಕಲಬುರ್ಗಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಬಲ ರಾಜವಾಡಿ, ಶೋಭನ್, ಅಯಾಂಕ್, ರಿನಿ ಬೋಪಣ್ಣ, ಪ್ರದೀಪ್, ರವಿತೇಜ, ಕಿಶೋರ್, ಅಶ್ವಿನಿ ರಾವ್, ಪ್ರಿಯಾ ಮುಂತಾದವರ ತಾರಾಗಣವಿದೆ. ಪ್ರಣವ್ ರಾವ್ ಸಂಗೀತ ನಿರ್ದೇಶನ, ಸತ್ಯ ರಾಮ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ.