Ellige Payana Yavudo Daari.News

Sunday, October 20, 2024

24

 

ಎಲ್ಲಿಗೆ ಪಯಣ ಯಾವುದೋ ದಾರಿ:

ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆಗೊಳಿಸಿದರು ಡಾ.ಮಂಜುನಾಥ್! 

ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ `ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರ ಇದೇ ಅಕ್ಟೋಬರ್ ೨೫ರಂದು ಬಿಡುಗಡೆಗೊಳ್ಳಲಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತ್ತು. ಅದಕ್ಕೆ ಭರಪೂರ ಮೆಚ್ಚುಗೆ ಮೂಡಿಕೊಳ್ಳುತ್ತಲೇ, ಸಂಸದ, ಖ್ಯಾತ ವೈದ್ಯ ಡಾ.ಮಂಜುನಾಥ್ ಈ ಚಿತ್ರದ `ನೀನಿರು ಸಾಕು’ ಎಂಬ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಬಿಡುಗಡೆಗೊಳಿಸಿದ್ದಾರೆ. ನಟ, ನಿರ್ದೇಶಕ ಕಾಶಿನಾಥ್ ಅವರನ್ನು ನೆನೆಸಿಕೊಳ್ಳುತ್ತಲೇ, ಅವರ ಪುತ್ರ ಅಭಿಮನ್ಯು ಕಾಶೀನಾಥ್ ರಿಗೆ ಶುಭ ಕೋರಿದ್ದಾರೆ.

ಅಂತ್ಯಂತ ಸಂತಸದಿಂದ ಈ ಲಿರಿಕಲ್ ವೀಡಿಯೋ ಸಾಂಗ್ ಅನ್ನು ಡಾಕ್ಟರ್ ಮಂಜುನಾಥ್ ಬಿಡುಗಡೆಗೊಳಿಸಿದ್ದಾರೆ. `ಕಾಶೀನಾಥ್ ಅವರು ನಟನಾಗಿ, ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಹಾಗೂ ಸಿನಿಮಾ ಪ್ರೇಮಿಗಳಿಗೆಲ್ಲ ಚಿರಪರಿಚಿತರು. ವಿಶಿಷ್ಟ ಪ್ರತಿಭೆಯಿಂದಲೇ ಪ್ರಸಿದ್ಧಿ ಪಡೆದವರು. ಅವರ ಪುತ್ರ ಅಭಿಮನ್ಯು ಕಾಶಿನಾಥ್ ನಾಯಕನಾಗಿ ನಟಿಸಿರುವ ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಈ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಬೆಂಬಲಿಸಬೇಕಿದೆ. ಕಾಶೀನಾಥ್ ಎಂಬ ಹೆಸರೇ ಒಂದು ಬ್ರ್ಯಾಂಡ್ ಇದ್ದಂತೆ. ಅವರ ಮಗ ಅಭಿಮನ್ಯು ಕೂಡಾ ಅದೇ ಎತ್ತರಕ್ಕೇರಲಿ’ ಎಂದು ಹಾರೈಸುತ್ತಾ, ಡಾ.ಮಂಜುನಾಥ್ ಅವರು ಒಂದಿಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಅರೆ ಏನಿದು ಕರೆದಂತಿದೆ ಮರೆಯಿಂದ ನೀ ನನ್ನನೇ... ಅಂತ ಶುರುವಾಗುವ ಈ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಒದಗಿಸಿದ್ದಾರೆ. ವಾಸುಕಿ ವೈಭವ್ ಹಾಗೂ ಶ್ರೀಲಕ್ಷ್ಮಿ ಬೆಳ್ಮಣ್ಣು ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಮೆಲೋಡಿಯಸ್ ಸಾಂಗಿಗೆ ಪ್ರಣವ್ ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷವೆಂದರೆ,  ಕಿಚ್ಚಾ ಸುದೀಪ್ ಈ ಸಿನಿಮಾಕ್ಕಾಗಿ ಒಂದು ಹಾಡನ್ನು ಹಾಡಿದ್ದಾರೆ. ಕಿರಣ್  ಎಸ್ ಸೂರ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಸೂಕ್ಷ್ಮ ಕಥಾನಕವನ್ನೊಳಗೊಂಡಿದೆ. ಈಗಾಗಲೇ ಲಾಂಚ್ ಆಗಿರುವ ಟೀಸರ್ ಮತ್ತು ಟ್ರೈಲರ್ ಮೂಲಕ ಒಟ್ಟಾರೆ ಚಿತ್ರದ ಝಲಕ್ಕುಗಳು ಪ್ರೇಕ್ಷಕರ ಮುಂದೆ ಅನಾವರಣಗೊಂಡಿವೆ.

ಸುದರ್ಶನ್ ಆರ್ಟ್ಸ್ ಬ್ಯಾನರಿನಡಿಯಲ್ಲಿ ಜತಿನ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕಿರಣ್ ಎಸ್ ಸೂರ್ಯ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಕಾಶಿನಾಥ್, ಸ್ಫೂರ್ತಿ ಉಡಿಮನೆ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ವಿಜಯಶ್ರೀ ಕಲ್ಬುರ್ಗಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಲರಾಜ್ವಾಡಿ, ಶೋಭನ್, ಪ್ರದೀಪ್, ರಮೇಶ್ ನಾಯಕ್, ರಿನಿ ಮುಂತಾದವರ ತಾರಾಗಣವಿದೆ. ಸತ್ಯ ರಾಮ್ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ, ಪ್ರಮೋದ್ ಮರವಂತೆ, ಕಿರಣ್ ಎಸ್ ಸೂರ್ಯ ಸಾಹಿತ್ಯ, ಜೀವನ್ ನೃತ್ಯ ನಿರ್ದೇಶನ, ಚಂದ್ರು ಸಾಹಸ ನಿರ್ದೇಶನ, ಪ್ರಣವ್ ರಾವ್ ಸಂಗೀತ ನಿರ್ದೇಶನದೊಂದಿಗೆ ಈ ಚಿತ್ರ ಮೂಡಿ ಬಂದಿದೆ.

Copyright@2018 Chitralahari | All Rights Reserved. Photo Journalist K.S. Mokshendra,