Ujjaini Mahakala.News

Thursday, March 13, 2025

57

 

*ನೂತನ ಪ್ರತಿಭೆಗಳ ಸಮಾಗಮದಲ್ಲಿ ಮೂಡಿಬರುತ್ತಿದೆ "ಉಜ್ಜಯಿನಿ ಮಹಾಕಾಲ"*

 

 *ಹರಿಪ್ರಸಾದ್ ಎಂ.ಬಿ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ವಿನಯ್ ನಾಯಕ*   .           

 

ದ್ವಾದಶ ಜ್ಯೋತಿರ್ಲಿಂಗಗಳಲ್ಲಿ "ಉಜ್ಜಯಿನಿ ಮಹಾಕಾಲ" ಕೂಡ ಒಂದು. ಈಗ ಅದೇ ಶೀರ್ಷಿಕೆಯಲ್ಲಿ ಕನ್ನಡ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಹರಿಪ್ರಸಾದ್ ಎಂ ಮಂಡ್ಯ ನಿರ್ಮಾಣ - ನಿರ್ದೇಶನದಲ್ಲಿ ವಿನಯ್ ನಾಯಕನಾಗಿ ನಟಿಸುತ್ತಿರುವ "ಉಜ್ಜಯಿನಿ ಮಹಕಾಲ"  ಪೌರಾಣಿಕ ಚಿತ್ರವಲ್ಲ. ಹೊಸತಂಡದ ಸಮಾಗಮದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು ಬಿಡುಗಡೆ ಮಾಡಿದರು. ನಿರ್ಮಾಪಕ ನಾಗೇಶ್ ಕುಮಾರ್, ನಿರ್ದೇಶಕ ಜೆ.ಜಿ.ಶ್ರೀನಿವಾಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣ್ಯರು ಚಿತ್ರಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಮೂಲತಃ ಮಂಡ್ಯದವನು. ಹದಿನೈದು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ಆದರೆ ಸ್ವತಂತ್ರ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಈ ಚಿತ್ರದ ಚಿತ್ರೀಕರಣ ಆರಂಭವಾಗಿ ಒಂದು ತಿಂಗಳಾಗಿದೆ. ಅರ್ಧದಷ್ಟು ಚಿತ್ರೀಕರಣ ಮುಗಿದಿದೆ. ಈಗ ಶೀರ್ಷಿಕೆ ಅಂತಿಮವಾಗಿದೆ. ನಮ್ಮ ಚಿತ್ರಕ್ಕೆ "ಉಜ್ಜಯಿನಿ ಮಹಾಕಾಲ" ಎಂದು ಹೆಸರಿಡಲಾಗಿದೆ. ಹಾಗಂತ ಈ ಚಿತ್ರ ಪೌರಾಣಿಕ ಚಿತ್ರವಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. "ಉಜ್ಜಯಿನಿ ಮಹಾಕಾಲ" ಎಂದು ಶೀರ್ಷಿಕೆಯಿಡಲು ಕಾರಣವಿದೆ. ಶೀರ್ಷಿಕೆಗೂ ಚಿತ್ರಕ್ಕೂ ಸಂಬಂಧವಿದೆ. ಮುಂದಿನ ಹಂತದಲ್ಲಿ ಉಜ್ಜಯಿನಿಯಲ್ಲೂ ಚಿತ್ರೀಕರಣ ನಡೆಯಲಿದೆ. ಈಗ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಇನ್ನೂ ಎಲ್ಲರ ಜೀವನದಲ್ಲೂ ಮಹಾಕಾಲ ಅಂತ ಒಂದು ಬರುತ್ತದೆ. ಅದು ನಮ್ಮ ನಾಯಕನ ಜೀವನದಲ್ಲೂ ಬಂದಾಗ ಏನಾಗಬಹುದು? ಎಂಬುದನ್ನು ಸಹ ತೋರಿಸುತ್ತಿದ್ದೇವೆ. ನಾನೇ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಹಾಗೂ ನಿರ್ದೇಶನ ಮಾಡುತ್ತಿದ್ದೇನೆ. ನಿರ್ಮಾಣಕ್ಕೆ ರತ್ನಾಕರ್ ಹಾಗೂ ಮೋಹನ್ ಅವರು ಸಾಥ್ ನೀಡಿದ್ದಾರೆ ಎಂದು ನಿರ್ಮಾಪಕ ಹಾಗೂ ನಿರ್ದೇಶಕ ಹರಿಪ್ರಸಾದ್ ಎಂ.ಬಿ ಮಂಡ್ಯ ಮಾಹಿತಿ ನೀಡಿದರು.                            

 

  ಈ ಹಿಂದೆ ಸಹ ಕಲಾವಿದನಾಗಿ ಅಭಿನಯಿಸುತ್ತಿದ್ದೆ. ನಾಯಕನಾಗಿ ಇದು ಮೊದಲ ಚಿತ್ರ. ನಾನು ಈ ಚಿತ್ರದಲ್ಲಿ ಅನಾಥ. ಸೂರ್ಯ ನನ್ನ ಪಾತ್ರದ ಹೆಸರು ಎಂದರು ನಾಯಕ ವಿನಯ್.

 

ನಾನು ಈ ಚಿತ್ರದಲ್ಲಿ ನಾಯಕನ ಪ್ರೇಯಸಿ. ಪ್ರಿಯ ನನ್ನ ಪಾತ್ರದ ಹೆಸರು ಎಂದು ಅಶ್ವಿನಿ ಬೇಲೂರು ತಿಳಿಸಿದರು.

 

 ಕೀರ್ತಿ ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು ಮತ್ತೊಬ್ಬ ನಾಯಕಿ ಡಯಾನ ಜೆಸಿಕಾ.

 

ಚಿತ್ರದಲ್ಲಿ ಅಭಿನಯಿಸುತ್ತಿರುವ ಮೋಹನ್ ಚನ್ನಪಟ್ಟಣ ಹಾಗೂ ರಮಣ್ ಸಹ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ರಘು ಅ ರೂಗಿ ಛಾಯಾಗ್ರಹಣ, ಕಲ್ಕಿ ಅಭಿಷೇಕ್ ಸಂಗೀತ ನಿರ್ದೇಶನ ಹಾಗೂ ಗಣಿ ಲಚ್ಚು & ರಘು ಅ ರೂಗಿ ಅವರ ಸಂಕಲನ "ಉಜ್ಜಯಿನಿ ಮಹಾಕಾಲ" ಚಿತ್ರಕ್ಕಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,